9:52 AM Saturday17 - October 2026
ಬ್ರೇಕಿಂಗ್ ನ್ಯೂಸ್
ಚಿಕ್ಕಮಗಳೂರು: ನಿಲ್ಲಿಸಿದ್ದ ಜಾಗದಲ್ಲೇ 2 ಎಲೆಕ್ಟ್ರಿಕ್ ಸ್ಕೂಟರ್ ಸುಟ್ಟು ಭಸ್ಮ ಮೈಸೂರು ದಸರಾ ಫಲಪುಷ್ಪ ಪ್ರದರ್ಶನ | ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಾಲನೆ ಬೆಂಗಳೂರು | ವಿಶ್ವ ದೃಷ್ಟಿ ದಿನದ ಅಂಗವಾಗಿ ವರ್ಲ್ಡ್ ಬ್ಲೈಂಡ್ ವಾಕ್ 2026 ಕೊಡಗು ಜಿಲ್ಲೆಯ 5 ತಾಲೂಕು ಪಂಚಾಯತ್ ವರ್ಗವಾರು ಮೀಸಲು ಪಟ್ಟಿ ಪ್ರಕಟ,: 48… ಮತದಾರರ ಹೆಸರು ತೆಗೆದುಹಾಕುವಾಗ ಅವರು ಅನುಮತಿ ಪಡೆದಿದ್ದರೇ?: ಸಿಜೆಪಿ ನಾಯಕ ಅಭಿಜೀತ್ ದಿಪ್ಕೆ ಟೈಮ್ಸ್ ಹೈಯರ್ ಎಜ್ಯುಕೇಶನ್ (THE) ವಿಶ್ವ ವಿಶ್ವವಿದ್ಯಾಲಯಗಳ ಶ್ರೇಯಾಂಕ 2027: ಗಲ್ಫ್ ಮೆಡಿಕಲ್… ಐತಿಹಾಸಿಕ ಮಂಗಳೂರು ದಸರಾ ಮಹೋತ್ಸವ 11ರಿಂದ ಆರಂಭ: 12ರಂದು ಮುಖ್ಯಮಂತ್ರಿ ಡಿ. ಕೆ.… ಫಾಸ್ಟ್‌ಟ್ಯಾಗ್‌ ಯುಗ ಅಂತ್ಯ?: ಮಲ್ಟಿ-ಲೇನ್ ಫ್ರೀ-ಫ್ಲೋ (MLFF) ಟೋಲಿಂಗ್ ವ್ಯವಸ್ಥೆ ಜಾರಿಗೆ ಸರಕಾರ… ಉಸ್ತುವಾರಿ ಸಚಿವ ಖಾದರ್ ಮಧ್ಯಸ್ಥಿಕೆ: ಎಂಆರ್‌ಪಿಎಲ್ ಅವಘಡದಲ್ಲಿ ಮೃತಪಟ್ಟ ನೌಕರನ ಕುಟುಂಬಕ್ಕೆ 1.20… ಬೆಂಗಳೂರು | ಅಕ್ಟೋಬರ್ 2ರಂದು ಪ್ರಾಜೆಕ್ಟ್ ಶೆಲ್ಟರ್‌ನಿಂದ ‘ಅಸಹಾಯಕರಿಗೆ ಸೂರು’ ಅಭಿಯಾನಕ್ಕೆ 3…

ಇತ್ತೀಚಿನ ಸುದ್ದಿ

40 ಕೋಟಿ ವೆಚ್ಚದಲ್ಲಿ ರಾಜ್ಯದ 40 ಆಸ್ಪತ್ರೆಗಳಲ್ಲಿ ಹೈಸ್ಪೀಡ್ ಬ್ರಾಡ್‌ಬ್ಯಾಂಡ್ ಇಂಟರ್‌ನೆಟ್ ಸಂಪರ್ಕ: ಆರೋಗ್ಯ ಸಚಿವ ಯು.ಟಿ. ಖಾದರ್

31/07/2026, 14:29

ಮಂಗಳೂರು(reporterkarnataka.com):ರಾಜ್ಯದ ಎಲ್ಲ ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳು ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳನ್ನು ಸಂಪೂರ್ಣವಾಗಿ ಡಿಜಿಟಲೀಕರಣ ಮಾಡಲಾಗುವುದು ಎಂದು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಹೇಳಿದರು.
ಅವರು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಆಧುನಿಕ ತಂತ್ರಜ್ಞಾನಕ್ಕೆ ಪೂರಕವಾಗಿ ರಾಜ್ಯದ ಆರೋಗ್ಯ ಕ್ಷೇತ್ರವನ್ನು ಕೂಡ ಡಿಜಿಟಲೀಕರಣ ಮಾಡುವ ಯೋಜನೆ ರೂಪಿಸಲಾಗಿದೆ ಎಂದರು.
ರಾಜ್ಯದ 40 ಆಸ್ಪತ್ರೆಗಳಲ್ಲಿ ಹೈಸ್ಪೀಡ್ ಬ್ರಾಡ್‌ಬ್ಯಾಂಡ್ ಇಂಟರ್‌ನೆಟ್ ಸಂಪರ್ಕ ಕಲ್ಪಿಸಲಾಗುತ್ತಿದೆ. 40 ಕೋಟಿ ರೂ. ಮೊತ್ತದ ಯೋಜನೆ ಇದಾಗಿದೆ. ಡಿಜಿಟಲೀಕರಣ ಮಾಡುವುದರಿಂದ ರೋಗಿಗಳ ಸಂಪೂರ್ಣ ಆರೋಗ್ಯ ವಿವರವನ್ನು ಒಂದೇ ಒಂದು ಕ್ಲಿಕ್‌ನಲ್ಲಿ ಪರಿಶೀಲಿಸಿ ಸೂಕ್ತ ಚಿಕಿತ್ಸೆ ನೀಡಲು ವೈದ್ಯರಿಗೆ ಅನುಕೂಲವಾಗಲಿದೆ. ರೋಗಿಯು ಒಮ್ಮೆ ಆಸ್ಪತ್ರೆಗೆ ಹೋದರೆ ಬಿಪಿ, ಶುಗರ್, ಲ್ಯಾಬ್ ಹಾಗೂ ಔಷಧಗಳ ವಿವರ ಡಿಜಿಟಲ್ ರೂಪದಲ್ಲಿ ದಾಖಲಾಗುತ್ತದೆ. ಮುಂದೆ ಬೇರೆ ಆಸ್ಪತ್ರೆಗೆ ಹೋದರೂ ಕೂಡ ಸಂಪೂರ್ಣ ವೈದ್ಯಕೀಯ ವಿವರ ವೈದ್ಯರಿಗೆ ಲಭ್ಯವಾಗಲಿದೆ ಎಂದು ಸಚಿವರು ನುಡಿದರು.
ಸರಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗುವಾಗ ರೋಗಿಗಳಿಗೆ ಶೂನ್ಯ ಪಾವತಿಯ ಬಿಲ್ ನೀಡುವ ಚಿಂತನೆ ಇದೆ. ಸರಕಾರ ರೋಗಿಯ ಚಿಕಿತ್ಸೆಗೆ ಎಷ್ಟು ವೆಚ್ಚ ಮಾಡಿದೆ ಎಂಬ ಅರಿವು ಕೂಡ ರೋಗಿಗಳು ಅಥವಾ ಅವರ ಕುಟುಂಬಸ್ಥರಿಗೆ ಸಿಗುತ್ತದೆ ಎಂದರು.
ತಾಲೂಕು ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ರೋಗಿಗಳಿಗೆ ಉತ್ತಮ ತುರ್ತು ಚಿಕಿತ್ಸೆ ನೀಡಲು ಟೆಲಿ-ಐಸಿಯು ವ್ಯವಸ್ಥೆಯನ್ನೂ ಜಾರಿಗೆ ತರಲಾಗುವುದು. ಗ್ರಾಮೀಣ ಭಾಗದ ಆಸ್ಪತ್ರೆಗಳ ನರ್ಸ್‌ಗಳಿಗೆ ಸೂಕ್ತ ತರಬೇತಿ ನೀಡಿ, ಉನ್ನತ ಮಟ್ಟದ ತಜ್ಞ ವೈದ್ಯರೊಂದಿಗೆ ಟೆಲಿ-ಸಂಪರ್ಕ ಏರ್ಪಡಿಸಿ ಐಸಿಯು ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಲಾಗುವುದು. ಅದಕ್ಕಾಗಿ 30 ಕೋ.ರೂ. ಅನುದಾನ ಮಂಜೂರಾಗಿದೆ ಎಂದ ಖಾದರ್, ತಾಲೂಕು ಮಟ್ಟದಲ್ಲೇ ನವಜಾತ ಶಿಶುಗಳ ತುರ್ತು ಆರೈಕೆ ಮತ್ತು ಮಕ್ಕಳ ಚಿಕಿತ್ಸಾ ಘಟಕಗಳನ್ನು ಬಲಪಡಿಸಲಾಗುವುದು. ಇದರಿಂದ ಸಣ್ಣ ಪುಟ್ಟ ಚಿಕಿತ್ಸೆಗೆ ಜಿಲ್ಲಾಸ್ಪತ್ರೆ ಅಥವಾ ಖಾಸಗಿ ಆಸ್ಪತ್ರೆಗಳಿಗೆ ಹೋಗುವುದನ್ನು ತಪ್ಪಿಸಬಹುದಾಗಿದೆ ಎಂದರು.
ಆಲೋಪತಿ ಚಿಕಿತ್ಸೆಯ ಜೊತೆಗೆ ಆಯುರ್ವೇದ, ಯೋಗ, ಯುನಾನಿ, ಸಿದ್ಧ ಹಾಗೂ ಹೋಮಿಯೋಪತಿ (ಆಯುಷ್) ಚಿಕಿತ್ಸೆ ಸಿಗುವಂತಹ ಉಳ್ಳಾಲ ಮಾದರಿಯ ಆಸ್ಪತ್ರೆಯನ್ನು ರಾಜ್ಯಾದ್ಯಂತ ಜಾರಿಗೆ ತರಲಾಗುವುದು. ಹೊಸದಾಗಿ ನಿರ್ಮಿಸುವ ಎಲ್ಲ ತಾಲೂಕು ಆಸ್ಪತ್ರೆಗಳ ಕಟ್ಟಡದ ಅಂದಾಜು ಪಟ್ಟಿಯಲ್ಲೇ ಆಯುಷ್ ಆಸ್ಪತ್ರೆ ಕಟ್ಟಡವನ್ನು ಸೇರಿಸಿ ನಿರ್ಮಾಣ ಮಾಡುವ ಚಿಂತನೆ ಇದೆ ಎಂದು ಯು.ಟಿ.ಖಾದರ್ ಹೇಳಿದರು. ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕಾಗಿ ಹೊಟೇಲ್‌ಗಳು, ರೆಸ್ಟೋರೆಂಟ್‌ಗಳಲ್ಲಿ ಕಡ್ಡಾಯವಾಗಿ ಕುಡಿಯಲು ಬಿಸಿ ನೀರು ಪೂರೈಸಲು ಶೀಘ್ರ ಅಧಿಕೃತ ಆದೇಶ ಹೊರಡಿಸಲಾಗುವುದು ಎಂದು ಸಚಿವ ಖಾದರ್ ಹೇಳಿದರು.
ಆಹಾರದಲ್ಲಿ ಕಲರ್, ಅಜಿನೊಮೋಟೊ ಹಾಕಿದರೆ ಕಠಿಣ ಕ್ರಮರಾಜ್ಯದ ಹೊಟೇಲ್, ಆಹಾರ ತಯಾರಿಕಾ ಘಟಕಗಳಲ್ಲಿ ಪದಾರ್ಥಗಳಿಗೆ ಅಜಿನೊಮೋಟೊ ಹಾಗೂ ಅಪಾಯಕಾರಿ ರಾಸಾಯನಿಕಗಳು ಅಥವಾ ಕೃತಕ ಬಣ್ಣ ಬಳಕೆ ಮಾಡಿದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಆಹಾರ ಸ್ಯಾಂಪಲ್ ಪರೀಕ್ಷೆಯ ವರದಿ ಶೀಘ್ರ ದೊರೆಯುವ ಉದ್ದೇಶದಿಂದ ಪಿಪಿಪಿ ಮಾದರಿಯಲ್ಲಿ ಉನ್ನತ ಮಟ್ಟದ ಆಹಾರ ಪರೀಕ್ಷಾ ಪ್ರಯೋಗಾಲಯಗಳನ್ನು ಸ್ಥಾಪಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಖಾದರ್ ನುಡಿದರು.
ಲೋಕಸಭೆಯ ವಿಪಕ್ಷ ನಾಯಕ ಹಾಗೂ ಎಐಸಿಸಿ ವರಿಷ್ಠ ರಾಹುಲ್ ಗಾಂಧಿ ಮತ್ತವರ ಕುಟುಂಬದ ಬಗ್ಗೆ ಶಾಸಕ ಯಶಪಾಲ್ ಸುವರ್ಣ ನಿಕೃಷ್ಟವಾಗಿ ಮಾತನಾಡಿದ್ದಾರೆ. ಇದು ಕರಾವಳಿಯ ಸಂಸ್ಕೃತಿಗೆ ಕಪ್ಪುಚುಕ್ಕೆಯಾಗಿದೆ.
ಆದರೆ ಆ ಶಾಸಕ ರಾಹುಲ್ ಗಾಂಧಿಯ ಕಾಲಿನ ಕಿರು ಬೆರಳಿಗೂ ಸಮನಲ್ಲ. ಜನಪ್ರತಿನಿಧಿಯೊಬ್ಬ ಇಂತಹ ಕೀಳು ಮಟ್ಟಕ್ಕೆ ಇಳಿಯುವುದು ಕರಾವಳಿಯ ಸಂಸ್ಕೃತಿ, ಪರಂಪರೆಗೆ ಕಪ್ಪುಚುಕ್ಕೆ. ಅವರಲ್ಲಿ ತಾಲಿಬಾನ್ ಡಿಎನ್‌ಎ ಇರಬೇಕು ಎಂದು ಯು.ಟಿ. ಖಾದರ್ ವ್ಯಂಗ್ಯವಾಡಿದರು. ಸುದ್ದಿಗೋಷ್ಠಿಯಲ್ಲಿ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಮತಾ ಗಟ್ಟಿ, ಕಾಂಗ್ರೆಸ್ ಮುಖಂಡರಾದ ಎಂ.ಎಸ್. ಮುಹಮ್ಮದ್, ಕೆ.ಕೆ. ಶಾಹುಲ್ ಹಮೀದ್, ಅಪ್ಪಿ ಮತ್ತಿತರರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು