5:26 AM Wednesday17 - June 2026
ಬ್ರೇಕಿಂಗ್ ನ್ಯೂಸ್
ವಿದ್ಯಾರ್ಥಿನಿ ಜೊತೆ ಅನೈತಿಕ ಸಂಬಂಧ ಆರೋಪ: ಕರ್ನಾಟಕ ವಿವಿ ಪ್ರೊ. ದೇವರಾಜನ್ ತಂಗದುರೈ… ವಿಧಾನ ಪರಿಷತ್ ಚುನಾವಣೆ: ದೇವನಹಳ್ಳಿ ರೆಸಾರ್ಟ್‌ಗೆ ಜೆಡಿಎಸ್ ಶಾಸಕರು ಶಿಫ್ಟ್; ಜನಾರ್ದನ ರೆಡ್ಡಿ… ದೆಹಲಿ ಮಟ್ಟದಲ್ಲಿ ಹೈವೋಲ್ಟೇಜ್ ಸಂಧಾನ: ಬೆಂಗಳೂರು ಅಭಿವೃದ್ಧಿ ಸಚಿವರಾಗಿ ಕೃಷ್ಣ ಬೈರೇಗೌಡ ಅಧಿಕಾರ… ತೀರ್ಪು ಮುನ್ನವೇ ಶಂಕಿತ ಉಗ್ರ ಕೊಡಗು ಮೂಲದ ಅಬ್ದುಲ್ ಖಾದರ್ ಸಾವು ಮೈಸೂರು ದುರಂತ: ಅಕ್ರಮ ಪಬ್, ಬಾರ್, ರೆಸ್ಟೋರೆಂಟ್‌ಗಳ ಮೇಲೆ ಕ್ರಮ: ಸಚಿವ ಡಾ.… ವಿಜಯಪುರ | ಭೀಕರ ರಸ್ತೆ ಅಪಘಾತ: ಟಿಪ್ಪರ್-ಬಸ್ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ 3… ವಿರಾಜಪೇಟೆ ಸಮೀಪದ ರೆಸಾರ್ಟ್ ಈಜುಕೋಳದಲ್ಲಿ ಬಿದ್ದು ಗೋವಾದ ಪ್ರವಾಸಿಗ ಸಾವು ಇಂದಿರಾ ಲಂಕೇಶ್ ನಿಧನ: ಮಾಜಿ ಸಿಎಂ ಸಿದ್ಧರಾಮಯ್ಯ, ಖ್ಯಾತ ನಟ ಪ್ರಕಾಶ್ ರೈ… ಮೈಸೂರು ಪಬ್‌ನಲ್ಲಿ ಭೀಕರ ಅಗ್ನಿ ದುರಂತ: ಇಬ್ಬರು ಸಜೀವ ದಹನ; ಹಲವರ ಸ್ಥಿತಿ… ಶಬರಿಮಲೆ ಮಣಿಕಂಠನ ದರ್ಶನಕ್ಕಾಗಿ ಇರುಮುಡಿ ಹೊತ್ತು ಶಬರಿಮಲೆಗೆ ಹೊರಟ ಕೇಂದ್ರ ಸಚಿವ ಕುಮಾರಸ್ವಾಮಿ

ಇತ್ತೀಚಿನ ಸುದ್ದಿ

ಹುಟ್ಟಿದ್ದೆಲ್ಲಾ ಹೆಣ್ಣಾಯಿತೆಂದು ಬಿಟ್ಟು ಹೋದ ತಂದೆ!!: ಹಠಕ್ಕೆ ಬಿದ್ದು ‘ಕಿಕ್ ಬಾಕ್ಸರ್’ ಆದ ಪುತ್ರಿ; ಮೈಸೂರಿನ ಬೀಬಿ ಫಾತಿಮಾ ಎಂಬ ಗಟ್ಟಿಗಿತ್ತಿ!

12/03/2025, 20:43

ಮಂಗಳಮುಖಿ ಅಕ್ರಮ್ ಪಾಷಾ ಆಸರೆಯಲ್ಲಿ ಬೆಳೆದ ಅದ್ಭುತ ಸಾಧಕಿಯನ್ನು ಗೌರವಿಸಿದ ಮಂಗಳೂರ ಸಮಾಜ ಸೇವಕರು

ಮಂಗಳೂರು(reporterkarnataka.com):ಹುಟ್ಟಿದ್ದೆಲ್ಲಾ ಹೆಣ್ಣಾಯಿತೆಂದು ಪತ್ನಿ ಮತ್ತು ನಾಲ್ಕು ಹೆಣ್ಣು ಮಕ್ಕಳನ್ನು ಬಿಟ್ಟುಹೋದ ಗಂಡನಿಂದ ನೊಂದು ಆತ್ಮಹತ್ಯೆಗೆ ಯತ್ನಿಸಿದ ಕುಟುಂಬಕ್ಕೆ ಆಸರೆಯಾದ ಮಂಗಳಮುಖಿ ಅಕ್ರಮ್ ಪಾಷಾ ಮತ್ತು ಆ ಕುಟುಂಬದಲ್ಲಿ ಬೆಳೆದ ಹಿರಿಯ ಹೆಣ್ಮಗಳು ಬೀಬಿ ಫಾತಿಮಾಳ ಸಾಧನೆಯ ಕಲ್ಲು ಮುಳ್ಳಿನ ಹಾದಿ ರೋಚಕ. ಮೈಸೂರಿನ ಉದಯಗಿರಿ ಮಸ್ಜಿದೇ ತೌಹೀದ್ ಬಳಿಯಿರುವ ಗಲ್ಲಿಯಲ್ಲಿ ಸಿಮೆಂಟ್ ಶೀಟಿನ ಬಾಡಿಗೆ ಕೊಠಡಿಯಲ್ಲಿರುವ ಈ ಕುಟುಂಬವನ್ನು ಬುಧವಾರ (12-03-2025) ಮಂಗಳೂರಿನ ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಸ್ಥಾಪಕರಾದ ರಶೀದ್ ವಿಟ್ಲ ಮತ್ತವರ ತಂಡ ಭೇಟಿಯಾಗಿ ಸಹಾಯಧನ ನೀಡಿ ಸನ್ಮಾನಿಸಿತು. ಅಬೂಬಕರ್ ಪುತ್ತು ಉಪ್ಪಿನಂಗಡಿ, ಮಹಮ್ಮದ್ ಟಿ.ಕೆ. ಹಾಗೂ ಉಬೈದ್ ವಿಟ್ಲ ಬಝಾರ್ ತಂಡದಲ್ಲಿದ್ದರು.


ಬೀಬಿ ಫಾತಿಮಾ ತಾಯಿಗೆ ನಾಲ್ಕು ಹೆಣ್ಮಕ್ಕಳು. ಗಂಡು ಸಂತಾನವಿಲ್ಲ ಎಂಬ ಕಾರಣಕ್ಕೆ ಗಂಡನಾದವನು 19 ವರ್ಷದ ಹಿಂದೆ ಬಿಟ್ಟು ಹೋಗಿದ್ದ. ಇದರಿಂದ ನೊಂದ ಕುಟುಂಬ ಆ ಸಂದರ್ಭವೇ ಊರು ಬಿಟ್ಟು ಆತ್ಮಹತ್ಯೆಗೆ ಯತ್ನಿಸಿತ್ತು. ಆವಾಗ ಅವರ ನೆರವಿಗೆ ಬಂದವರು ಮಂಗಳಮುಖಿ ಬಿಕ್ಷುಕ ಅಕ್ರಮ್ ಪಾಷಾ. ಇವರು ಈ ಐದೂ ಮಂದಿಯನ್ನು ಮೈಸೂರಿಗೆ ಕರಕೊಂಡು ಬಂದು ಬಾಡಿಗೆ ಮನೆಯಲ್ಲಿಟ್ಟರು. ನಾಲ್ಕು ಮಕ್ಕಳಲ್ಲಿ ಹಿರಿಯವಳಾದ ಬೀಬಿ ಫಾತಿಮಾಳನ್ನು ದತ್ತು ತೆಗೆದುಕೊಂಡ ಮಂಗಳಮುಖಿ ಅಕ್ರಮ್ ಪಾಷಾ ಆಕೆಯ ಜೀವನ ಮತ್ತು ಸಾಧನೆಗೆ ಆಸರೆಯಾದರು. ಬಿಕ್ಷೆ ಬೇಡಿ ಸಾಕಿ ಸಲಹಿದ ಹುಡುಗಿ ಇದೀಗ ರಾಷ್ಟ್ರವೇ ಗುರುತಿಸುವ “ಕಿಕ್ ಬಾಕ್ಸರ್” ಆಗಿ ಹೊರಹೊಮ್ಮಿದ್ದಾರೆ.
ತಂದೆಯ ತಿರಸ್ಕಾರ ಬೀಬಿ ಫಾತಿಮಾಳ ಈ ಹಠ ಮತ್ತು ಛಲಕ್ಕೆ ಕಾರಣ. ಗಂಡು ಮಕ್ಕಳಿಲ್ಲವೆಂದು ಬಿಟ್ಟು ಹೋದವನ ಮುಂದೆ ಗಂಡೆದೆಯಿಂದ ಬೀಗಬೇಕೆಂಬ ಕನಸು ನನಸಾಗುತ್ತಿರುವ ಸಂಭ್ರಮ ಬೀಬಿ ಫಾತಿಮಾಳದ್ದು. ಮಂಗಳಮುಖಿ ಮತ್ತು ಈ ಸಾಧಕಿ ಇಬ್ಬರೇ ಬಾಡಿಗೆ ಕೊಠಡಿಯಲ್ಲಿ ಕಾಲ ಕಳೆಯುತ್ತಿದ್ದಾರೆ. ಫಾತಿಮಾ 10 ನೇ ತರಗತಿಗೆ ಓದುತ್ತಿದ್ದಾಳೆ. ಫಾತಿಮಾ ತಾಯಿ ಮತ್ತು ಇತರ 3 ಹೆಣ್ಮಕ್ಕಳಿಗೆ ಅಕ್ರಮ್ ಪಾಷಾ ಬೇರೆಯೇ ಬಾಡಿಗೆ ಮನೆ ಮಾಡಿಕೊಟ್ಟಿದ್ದಾರೆ. ಎರಡೂ ಮನೆಯ ಬಾಡಿಗೆಯನ್ನು 65ರ ಹರೆಯದ ಅಕ್ರಮ್ ಪಾಷಾ ಅವರೇ ಬಿಕ್ಷೆ ಬೇಡಿ ಕಟ್ಟುತ್ತಿದ್ದಾರೆ.
ಬೀಬಿ ಫಾತಿಮಾಳಿಗೆ ಈಗ 20ರ ಹರೆಯ. ಕೆಲ ವರ್ಷ ಕಾರಣಾಂತರ ಶಾಲೆ ಬಿಟ್ಟಿದ್ದಳು. ಕಳೆದ 12 ವರ್ಷದಿಂದ ಕಿಕ್ ಬಾಕ್ಸಿಂಗ್ ತರಬೇತಿಯನ್ನು ಪಡೆಯುತ್ತಿದ್ದಾರೆ. ಈತನಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರಾಷ್ಟ್ರ ಮಟ್ಟದಲ್ಲಿ 29 ಗೋಲ್ಡ್ ಮೆಡಲ್ ಪಡೆದಿದ್ದಾರೆ. ಇತ್ತೀಚೆಗೆ ದೆಹಲಿಯಲ್ಲಿ ನಡೆದ ಅಂತರಾಷ್ಟ್ರ ಸ್ಪರ್ಧೆಯಲ್ಲಿ ಕೈ ನೋವಿದ್ದರೂ ಎರಡು ಬೆಳ್ಳಿಪದಕವನ್ನು ಗಳಿಸಿದ್ದಾರೆ. ಮುಂದಕ್ಕೆ ಒಲಂಪಿಕ್ಸ್ ನಲ್ಲಿ ಸ್ಪರ್ಧಿಸಬೇಕೆಂಬ ಹೆಬ್ಬಯಕೆ ಆಕೆಯದ್ದು. ಜೊತೆಗೆ ತನ್ನ ಕುಟುಂಬವನ್ನು ಮತ್ತು ಸಾಕಿದ ವಯಸ್ಕರಾದ ಮಂಗಳಮುಖಿಯ ಜವಾಬ್ದಾರಿ ಬೀಬಿ ಫಾತಿಮಾ ಮೇಲಿದೆ. ಅದಕ್ಕಾಗಿ ಬಾಡಿಗೆ ಮನೆಯ ಮೇಲಿನ ಮಹಡಿಯಲ್ಲಿ ಶೀಟ್ ಹಾಕಿ ಕಿಕ್ ಬಾಕ್ಸಿಂಗ್ ಕೋಚಿಂಗ್ ಸೆಂಟರ್ ತೆರೆದು ದುಡಿಯಬೇಕೆಂಬ ಹಂಬಲ ಫಾತಿಮಾಳದ್ದು. ಆದರೆ ಇದಾವುದಕ್ಕೂ ಅವರಲ್ಲಿ ದುಡ್ಡಿಲ್ಲ. ಅದ್ಭುತ ಸಾಧಕಿಯ ಕನಸು ಕಮರದಂತೆ ನೋಡಬೇಕಾದ ಜವಾಬ್ದಾರಿ ಸಮಾಜದ ಮೇಲಿದೆ. ಸ್ವಂತ ಕಾಲಲ್ಲಿ ನಿಂತು ದುಡಿದು ಒಲಂಪಿಕ್ ತನಕ ತಲುಪಬೇಕೆಂಬ ಬೀಬಿ ಫಾತಿಮಾಳ ಕನಸು ನನಸು ಮಾಡಲು ನಾವೆಲ್ಲಾ ಸೇರಿ ಪ್ರಯತ್ನಿಸೋಣ.

ಇತ್ತೀಚಿನ ಸುದ್ದಿ

ಜಾಹೀರಾತು