10:33 PM Tuesday28 - April 2026
ಬ್ರೇಕಿಂಗ್ ನ್ಯೂಸ್
ರಾಜ್ಯದಲ್ಲಿ ಹೊಸ ಕನಿಷ್ಠ ವೇತನ ಜಾರಿಗೆ ತರಲು ಯತ್ನ: ಸಂಡೂರಿನಲ್ಲಿ ಕಾರ್ಮಿಕ ಸಚಿವ… ಬಿಜೆಪಿ ಪಕ್ಷದಿಂದಲೇ ಮಹಿಳೆಯರಿಗೆ ಶೇ. 30ರಷ್ಟು ಮೀಸಲಾತಿ ಪ್ರಕಟಿಸಲಿ: ಸಚಿವ ಸಂತೋಷ್ ಲಾಡ್… Mangaluru | ಕುಕ್ಕರ್‌ ಬಾಂಬ್‌ ಸ್ಫೋಟದ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕಿತ್ತು: ಸಂತ್ರಸ್ತ… ಗಾದಿ ಪೈಪೋಟಿ | ದೆಹಲಿಗೆ ಹೋಗಲು 50 ಶಾಸಕರ ಟಿಕೆಟ್‌ ಬುಕ್ಕಿಂಗ್‌: ಕೇಂದ್ರ… Koppala | ಕುಷ್ಟಗಿಯಲ್ಲಿ ಗುಡುಗು ಸಹಿತ ಮಳೆ: ಸಿಡಿಲು ಬಡಿದು ವ್ಯಕ್ತಿ ಬಲಿ ಕೊಡಗು-ಮೈಸೂರು ರಾಜ್ಯ ಹೆದ್ದಾರಿ ಬಳಿ ಹುಲಿ ದಾಳಿಗೆ ಹಸು ಬಲಿ: ರೊಚ್ಚಿಗೆದ್ದ ಗ್ರಾಮಸ್ಥರಿಂದ… New Delhi | 228 ಪ್ರಯಾಣಿಕರಿದ್ದ ವಿಮಾನದಲ್ಲಿ ಬೆಂಕಿ: ಸ್ವಲ್ಪದರಲ್ಲೇ ತಪ್ಪಿತು ಮತ್ತೊಂದು… ಶಿಕ್ಷಕರೇ ಇಲ್ಲದ ಶಾಲೆಗಳಿಗೆ ಶೇ. 94 ಬಂದಿದ್ದು ಹೇಗೆ? ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ದೊಡ್ಡ… ತಂದೆ ಬೈದ ಕ್ಷುಲ್ಲಕ ಕಾರಣಕ್ಕೆ ಯುವತಿ ಆತ್ಮಹತ್ಯೆಗೆ ಶರಣು ಬಳ್ಳಾರಿ | ಪೊಲೀಸ್ ಶ್ವಾನಗಳ ಬಗ್ಗೆ ವಿಶೇಷ ಕಾಳಜಿ: ತಂಪಿಗಾಗಿ ಕೂಲರ್; ಕುಡಿಯಲು…

ಇತ್ತೀಚಿನ ಸುದ್ದಿ

ರಾಜ್ಯದಲ್ಲಿ ಹೊಸ ಕನಿಷ್ಠ ವೇತನ ಜಾರಿಗೆ ತರಲು ಯತ್ನ: ಸಂಡೂರಿನಲ್ಲಿ ಕಾರ್ಮಿಕ ಸಚಿವ ಘೋಷಣೆ

28/04/2026, 22:33

ಗಣೇಶ್ ಇನಾಂದಾರ್ ಬಳ್ಳಾರಿ

info.reporterkarnataka@gmail.com

ಸುಪ್ರೀಂ ಕೋರ್ಟ್ ಮಾರ್ಗಸೂಚಿಯಂತೆ, ಕಾರ್ಮಿಕರ ಆಹಾರ, ಬಟ್ಟೆ ಮತ್ತು ವಸತಿ ಅಗತ್ಯತೆಗಳನ್ನು ಪರಿಗಣಿಸಿ, ಚರ್ಚಿಸಿ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಹೊಸ ಕನಿಷ್ಠ ವೇತನ ಜಾರಿಗೆ ತರಲು ಪ್ರಯತ್ನಿಸಲಾಗುವುದು ಎಂದು ಕಾರ್ಮಿಕ ಸಚಿವ ಸಂತೋಷ್ ಎಸ್.ಲಾಡ್ ಹೇಳಿದರು.
ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ, ಕಾರ್ಮಿಕ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಸಂಡೂರು ತಾಲ್ಲೂಕಿನ ತಾಳೂರು ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಭಾನುವಾರ ಏರ್ಪಡಿಸಿದ್ದ ಸಂಡೂರು ಸಂಕಲ್ಪ ಸಮರ್ಪಣಾ ಸಮಾವೇಶ-2 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕರ್ನಾಟಕ ರಾಜ್ಯ ಸರ್ಕಾರವು ಅಸಂಘಟಿತ ವಲಯದ ಕಾರ್ಮಿಕರ ಏಳಿಗೆಗೆ ಬದ್ಧವಾಗಿದ್ದು, ಅಂಬೇಡ್ಕರ್ ಸಹಾಯಹಸ್ತ ಕಾರ್ಯಕ್ರಮದ ಮೂಲಕ ವಿವಿಧ ಅಸಂಘಟಿತ ವಲಯಗಳ ಜನರನ್ನು ಮುಖ್ಯವಾಹಿನಿಗೆ ತರಲಾಗುತ್ತಿದೆ ಎಂದರು.
ಅಮೆಜಾನ್, ಜೊಮ್ಯಾಟೊ, ಸ್ವಿಗ್ಗಿ ಮುಂತಾದ ಆನ್‌ಲೈನ್ ಕಂಪನಿಗಳಲ್ಲಿ ಕೆಲಸ ಮಾಡುವ ಡೆಲಿವರಿ ಬಾಯ್‌ಗಳ ಹಿತರಕ್ಷಣೆಗಾಗಿ ಭಾರತದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಗಿಗ್ ವರ್ಕರ್ಸ್ ಬಿಲ್ ಕಾನೂನು ತರಲಾಗಿದೆ. ಚಾಲಕರು ಮತ್ತು ಕ್ಲೀನರ್‌ಗಳ ಹಿತದೃಷ್ಟಿಯಿಂದ ಸ್ಮಾರ್ಟ್ ಕಾರ್ಡ್ ವಿತರಿಸುವ ಟ್ರಾನ್ಸ್‌ಪೋರ್ಟ್ ಬಿಲ್ ಯೋಜನೆ ಜಾರಿಯಲ್ಲಿದೆ. ಅದರಂತೆ ಚಿತ್ರರಂಗದ ಕಾರ್ಮಿಕರು ಹಾಗೂ ಮನೆಗೆಲಸ ಮಾಡುವ ಮಹಿಳೆಯರ ಸಾಮಾಜಿಕ ಭದ್ರತೆಗಾಗಿ ಸಿನಿ ಬಿಲ್ ಮತ್ತು ಡೊಮೆಸ್ಟಿಕ್ ಬಿಲ್ ನಂತಹ ಹೊಸ ಕಾನೂನುಗಳನ್ನು ರೂಪಿಸಲಾಗುತ್ತಿದೆ ಎಂದು ತಿಳಿಸಿದರು.
ಇಡೀ ದೇಶದಲ್ಲೇ ಇಂತಹ ಬೃಹತ್ ಜನಪರ ಯೋಜನೆಗಳು ಎಲ್ಲಿಯೂ ಇಲ್ಲ. ಗ್ಯಾರಂಟಿ ಯೋಜನೆಗಳಿಗಾಗಿ ವರ್ಷಕ್ಕೆ ಸುಮಾರು 60,000 ಕೋಟಿ ರೂಪಾಯಿಗಳನ್ನು ವ್ಯಯಿಸಲಾಗುತ್ತಿದೆ. ಐದು ವರ್ಷಕ್ಕೆ ಇದು ಸುಮಾರು 3 ಲಕ್ಷ ಕೋಟಿ ರೂಪಾಯಿಗಳಾಗುತ್ತದೆ ಎಂದು ತಿಳಿಸಿದರು.
ನಾವು ನಮ್ಮ ಮಕ್ಕಳಿಗೆ ಸ್ಥಳೀಯ ಮಾತ್ರವಲ್ಲದೆ, ಬೇರೆ ಬೇರೆ ಕಡೆಗಳಲ್ಲಿ ಉದ್ಯೋಗ ಅವಕಾಶಗಳನ್ನು ಹುಡುಕಬೇಕು. ಸ್ಥಳೀಯರಿಗೆ ಉದ್ಯೋಗ ಕೊಡಿಸುವಲ್ಲಿ ನಾವು ನಮ್ಮ ಪ್ರಯತ್ನವನ್ನು ಮುಂದುವರಿಸುತ್ತೇವೆ. ಅಗತ್ಯವಾದಲ್ಲಿ ಈ ಭಾಗದಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗುವುದು ಎಂದು ಸಚಿವರು ಹೇಳಿದರು.
ಸಂಡೂರು ವಿಧಾನಸಭೆ ಕ್ಷೇತ್ರದ ಶಾಸಕರಾದ ಈ.ಅನ್ನಪೂರ್ಣ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಡೂರು ತಾಲ್ಲೂಕಿನಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದ್ದು, ತಾಲೂಕಿನ ಒಟ್ಟು 175 ಶಾಲೆಗಳ ಪೈಕಿ 65 ಶಾಲೆಗಳನ್ನು ‘ಮಾದರಿ ಶಾಲೆ’ಗಳನ್ನಾಗಿ ರೂಪಿಸಲಾಗಿದೆ. ಉಳಿದ 110 ಶಾಲೆಗಳ ಅಭಿವೃದ್ಧಿಗಾಗಿ ಈಗಾಗಲೇ ರೂಪರೇಷೆಗಳನ್ನು ಸಿದ್ಧಪಡಿಸಲಾಗಿದೆ. ಅಂಗನವಾಡಿಯಿಂದ ಸ್ನಾತಕೋತ್ತರ ಪದವಿಯವರೆಗೆ ಗುಣಮಟ್ಟದ ಶಿಕ್ಷಣ ನೀಡಲು ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ಹೇಳಿದರು.
ಬಳ್ಳಾರಿ ಲೋಕಸಭೆ ಕ್ಷೇತ್ರದ ಸಂಸದ ಈ.ತುಕಾರಾಮ್ ಅವರು ಮಾತನಾಡಿ, ಎರಡನೇ ಸಂಡೂರು ಸಂಕಲ್ಪ ಸಮರ್ಪಣಾ ಸಮಾವೇಶ ಈ ಕಾರ್ಯಕ್ರಮವು ಪ್ರಜಾಪ್ರಭುತ್ವದ ಮೌಲ್ಯಗಳು, ಸಂವಿಧಾನದ ವ್ಯವಸ್ಥೆ ಮತ್ತು ಕಳೆದ ಎರಡು ದಶಕಗಳಲ್ಲಿ ಸಂಡೂರು ತಾಲ್ಲೂಕಿನಲ್ಲಿ ನಡೆದ ಅಭಿವೃದ್ಧಿ ಪಥವನ್ನು ಬಿಂಬಿಸುವ ಉದ್ದೇಶ ಹೊಂದಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ವಿಧಾನಪರಿಷತ್ ಸದಸ್ಯ ಕೆ.ಎಸ್.ಎಲ್. ಸ್ವಾಮಿ, ವಿಜಯನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಷಯ ಲಾಡ್, ಬಳ್ಳಾರಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ.ಚಿದಾನಂದಪ್ಪ, ಉಪಾಧ್ಯಕ್ಷೆ ಆಶಾಲತಾ ಸೋಮಪ್ಪ, ಸಂಡೂರು ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ನೂರುದ್ದೀನ್.ಎಸ್., ಸಂಡೂರು ತಹಶೀಲ್ದಾರ ಅನಿಲ್ ಕುಮಾರ್.ಜಿ, ಸಂಡೂರು ತಾಪಂ ಇಓ ಮಡಗಿನ ಬಸಪ್ಪ, ಬಳ್ಳಾರಿ ಉಪವಿಭಾಗದ ಕಾರ್ಮಿಕ ಅಧಿಕಾರಿ ಎಸ್.ಜಿ.ಖೈನೂರು ಸೇರಿದಂತೆ ಜನಪ್ರತಿನಿಧಿಗಳು, ಸಾರ್ವಜನಿಕರು ಹಾಗೂ ಇತರರು ಉಪಸ್ಥಿತರಿದ್ದರು

ಇತ್ತೀಚಿನ ಸುದ್ದಿ

ಜಾಹೀರಾತು