ಇತ್ತೀಚಿನ ಸುದ್ದಿ
ಅನಂತಾಡಿ | 150 ವರ್ಷಗಳ ಹಳೆಯ ಕಾಲುದಾರಿ ಬಂದ್ ; ಜನರ ಓಡಾಟಕ್ಕೆ ತೊಂದರೆ : ತೆರವುಗೊಳಿಸುವಂತೆ ಗ್ರಾಮಸ್ಥರ ಆಗ್ರಹ
10/09/2026, 10:46
ಬಂಟ್ವಾಳ(reporterkarnataka.com): ಬಂಟ್ವಾಳ ತಾಲೂಕಿನ ಅನಂತಾಡಿ ಗ್ರಾಮದ ನಡುಮನೆ, ಸುದೆಕಟ್ಟೆಮಾರು ಹಾಗೂ ಪುಂಜಾವು ಭಾಗದ ಸಾರ್ವಜನಿಕರು ಸುಮಾರು 150ಕ್ಕೂ ಹೆಚ್ಚು ವರ್ಷಗಳಿಂದ ಬಳಸುತ್ತಿದ್ದ ಸರ್ವೆ ನಂಬರ್ 137ರ ಪ್ರಮುಖ ಕಾಲುದಾರಿಯನ್ನು ಬಂದ್ ಮಾಡಲಾಗಿದೆ. ಇದನ್ನು ತಕ್ಷಣವೇ ತೆರವುಗೊಳಿಸುವಂತೆ ಆಗ್ರಹಿಸಿ ಸ್ಥಳೀಯರು ಬಂಟ್ವಾಳ ತಹಶೀಲ್ದಾರರಿಗೆ ಮನವಿ ಸಲ್ಲಿಸಿದ್ದಾರೆ.




ಸುಮಾರು 50ಕ್ಕೂ ಹೆಚ್ಚು ಕುಟುಂಬಗಳು ಈ ಹಳೆಯ ಕಾಲುದಾರಿಯನ್ನೇ ಅವಲಂಬಿಸಿದ್ದು, ದಾರಿ ಬಂದ್ ಆಗಿರುವುದರಿಂದ ಶಾಲೆ, ಅಂಗನವಾಡಿ, ಹಾಲಿನ ಡೈರಿ, ಅಂಚೆ ಕಚೇರಿ ಹಾಗೂ ಆಸ್ಪತ್ರೆಗೆ ತೆರಳುವ ಸಾರ್ವಜನಿಕರು, ವಿಶೇಷವಾಗಿ ವೃದ್ಧರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ.
ವೃದ್ಧಾಪ್ಯ ವೇತನ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಪಡೆಯಲು ಅಂಚೆ ಕಚೇರಿಗೆ ತೆರಳಬೇಕಾದ ಹಿರಿಯ ನಾಗರಿಕರು ದಾರಿ ಬಂದ್ನಿಂದಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸಾರ್ವಜನಿಕರ ಹಿತದೃಷ್ಟಿಯಿಂದ ಬಂದ್ ಮಾಡಲಾಗಿರುವ ಕಾಲುದಾರಿಯನ್ನು ತಕ್ಷಣ ತೆರವುಗೊಳಿಸಿ, ಗ್ರಾಮಸ್ಥರಿಗೆ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಸ್ಥಳೀಯರು ತಹಶೀಲ್ದಾರರನ್ನು ಒತ್ತಾಯಿಸಿದ್ದಾರೆ.












