ಇತ್ತೀಚಿನ ಸುದ್ದಿ
ವಿದ್ಯಾರ್ಥಿ ಪ್ರತಿಭಟನೆ ವೇಳೆ ಎಕೆ-47 ನಿಂದ ಗುಂಡಿನ ದಾಳಿ: ಮೂವರಿಗೆ ಗಂಭೀರ ಗಾಯ; ಬಿಹಾರ ಪೊಲೀಸ್ ಅಮಾನತು
27/07/2026, 22:05
ಪಾಟ್ನಾ(reporterkarnataka.com): ಬಿಹಾರ ಬಂದ್ ವೇಳೆ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಅಟೋಮ್ಯಾಟಿಕ್ ಎಕೆ-47 ಬಂದೂಕಿನಿಂದ ಗುಂಡಿನ ದಾಳಿ ನಡೆಸಿದ್ದ ಪೊಲೀಸ್ ಪೇದೆಯನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಘಟನೆಯ ಭೀಕರ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈರಲ್ ಆದ ಬೆನ್ನಲ್ಲೇ ಬಿಹಾರ ಪೊಲೀಸ್ ಕೇಂದ್ರ ಕಚೇರಿ ಈ ಕಠಿಣ ಕ್ರಮ ಕೈಗೊಂಡಿದೆ. ಜುಲೈ 25 ರಂದು ‘ಬಿಹಾರ ಬಂದ್’ ಅಂಗವಾಗಿ ಸಿವಾನ್ ಜಿಲ್ಲೆಯಲ್ಲಿ ವಿದ್ಯಾರ್ಥಿ ಸಂಘಟನೆಗಳು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದವು. ಗಾಂಧಿ ಮೈದಾನದತ್ತ ಮೆರವಣಿಗೆ ಸಾಗುತ್ತಿದ್ದಾಗ ಪೊಲೀಸರು ಹಾಗೂ ವಿದ್ಯಾರ್ಥಿಗಳ ನಡುವೆ ತೀವ್ರ ಘರ್ಷಣೆ ಸಂಭವಿಸಿತ್ತು. ಈ ವೇಳೆ ಪೊಲೀಸ್ ಸಿಬ್ಬಂದಿಯೊಬ್ಬರು ನೇರವಾಗಿ ವಿದ್ಯಾರ್ಥಿಗಳತ್ತ ಎಕೆ-47 ನಿಂದ ಗುಂಡು ಹಾರಿಸಿದ್ದು ಕ್ಯಾಮೆರಾದಲ್ಲಿ ಸೆರೆಯಾಗಿತ್ತು.
*ಮೂವರಿಗೆ ಗಂಭೀರ ಗಾಯ: ಆಸ್ಪತ್ರೆಗೆ ದಾಖಲು*
ಪೋಲಿಸರ ಗುಂಡಿನ ದಾಳಿಯಿಂದ ಗಾಯಗೊಂಡ ಮೂವರು ಪ್ರತಿಭಟನಾಕಾರರನ್ನು ಪಾಟ್ನಾದ ಜಯಪ್ರಭಾ ಮೇದಾಂತ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಅವರ ಸ್ಥಿತಿ ಸ್ಥಿರವಾಗಿದೆ. ಗಾಯಗೊಂಡವರಲ್ಲಿ 15 ವರ್ಷದ ಮೊಹಮ್ಮದ್ ಆರಿಫ್ ಎಂಬ ಬಾಲಕನೂ ಸೇರಿದ್ದಾನೆ. ಬಂದ್ ಹಿನ್ನೆಲೆಯಲ್ಲಿ ಅಂಗಡಿ ಮುಚ್ಚಿ ಮನೆಗೆ ಮರಳುತ್ತಿದ್ದಾಗ ಆರಿಫ್‌ನ ಕತ್ತಿನ ಭಾಗಕ್ಕೆ ಗುಂಡು ತಗಲಿತ್ತು. ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ಗುಂಡನ್ನು ಹೊರತೆಗೆದಿದ್ದಾರೆ.












