ಇತ್ತೀಚಿನ ಸುದ್ದಿ
ಮೇಕೆದಾಟು ಯೋಜನೆ : ಪರಿಸರ ಪರಿಣಾಮಗಳ ಅಧ್ಯಯನಕ್ಕೆ ಕೇಂದ್ರ ವನ್ಯಜೀವಿ ಮಂಡಳಿ ಒಪ್ಪಿಗೆ
24/11/2026, 19:35
ಬೆಂಗಳೂರು(reporterkarnataka.com): ಬಹುನಿರೀಕ್ಷಿತ ಮೇಕೆದಾಟು ಸಮತೋಲನ ಜಲಾಶಯ ಮತ್ತು ಕುಡಿಯುವ ನೀರಿನ ಯೋಜನೆಯ ಅನುಷ್ಠಾನದ ಹಾದಿಯಲ್ಲಿ ಮಹತ್ವದ ಹೆಜ್ಜೆಯೊಂದು ಮೂಡಿದೆ. ಮೇಕೆದಾಟು ಜಲಾಶಯ ಯೋಜನೆ ಪ್ರದೇಶದಲ್ಲಿ ಅಣೆಕಟ್ಟು ನಿರ್ಮಾಣದಿಂದ ಪರಿಸರದ ಮೇಲಾಗುವ ಪರಿಣಾಮಗಳ ಮೌಲ್ಯಮಾಪನದ ಅಧ್ಯಯನ ನಡೆಸಲು ಕೇಂದ್ರ ವನ್ಯಜೀವಿ ಮಂಡಳಿ ಒಪ್ಪಿಗೆ ನೀಡಿದೆ.ದೆಹಲಿಯಲ್ಲಿ ನಡೆದ ಕೇಂದ್ರ ವನ್ಯಜೀವಿ ಮಂಡಳಿಯ ಸಭೆಯಲ್ಲಿ ಈ ನಿರ್ಧಾರಕ್ಕೆ ಸಮ್ಮತಿ ಸೂಚಿಸಲಾಗಿದೆ.
ಈ ಹಿಂದೆ 2026ರ ಜೂನ್ 30ರಂದು ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿಯು ಈ ಸಮೀಕ್ಷೆಗೆ ಒಪ್ಪಿಗೆ ನೀಡಿ, ಅಂತಿಮ ಅನುಮತಿಗಾಗಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಇದರ ನಡುವೆಯೇ, ಮೇಕೆದಾಟು ಯೋಜನೆಗೆ ಯಾವುದೇ ಕಾನೂನು ತೊಡಕಿಲ್ಲ ಹಾಗೂ ವಿವರವಾದ ಯೋಜನಾ ವರದಿ (ಡಿಪಿಆರ್) ಸಿದ್ಧತೆಯನ್ನು ವಿರೋಧಿಸಿ ತಮಿಳುನಾಡು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ ಎಂದು ಕರ್ನಾಟಕ ಸರ್ಕಾರ ಇತ್ತೀಚೆಗೆ ಕೇಂದ್ರ ಅರಣ್ಯ ಸಚಿವಾಲಯಕ್ಕೆ ಸ್ಪಷ್ಟನೆ ನೀಡಿತ್ತು. ಸುಪ್ರೀಂಕೋರ್ಟ್ ತಮಿಳುನಾಡಿನ ಅರ್ಜಿಯನ್ನು ವಜಾಗೊಳಿಸಿದ ಬೆನ್ನಲ್ಲೇ ಕೇಂದ್ರ ವನ್ಯಜೀವಿ ಮಂಡಳಿಯ ಈ ನಿರ್ಧಾರ ಹೊರಬಿದ್ದಿರುವುದು ಯೋಜನೆಗೆ ಹೊಸ ಚೈತನ್ಯ ನೀಡಿದೆ.













