ಇತ್ತೀಚಿನ ಸುದ್ದಿ
ಮಂಗಳೂರು | ಬಾಳಂಭಟ್ ಸಭಾಭವನದಲ್ಲಿ ಶ್ರೀ ಶಂಕರ ವಿಜಯೋತ್ಸವದ ಆರಂಭೋತ್ಸವ
22/11/2026, 23:03
ಮಂಗಳೂರು(reporterkarnataka.com):ಉಡುಪಿಯಲ್ಲಿ ಡಿ.28ರಿಂದ 30ರವರೆಗೆ ನಡೆಯಲಿರುವ ಶ್ರೀ ಶಂಕರ ವಿಜಯೋತ್ಸವ ಕಾರ್ಯಕ್ರಮದಲ್ಲಿ ಶ್ರೀ ಶಂಕರರ ಎಲ್ಲ ಶಿಷ್ಯವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶಂಕರರ ವಿಚಾರಧಾರೆಗಳನ್ನು ಜನರಿಗೆ ತಲುಪಿಸುವ ಕಾರ್ಯವನ್ನು ಯಶಸ್ವಿಗೊಳಿಸಬೇಕು ಎಂದು ಶೃಂಗೇರಿ ಶಾರದಾ ಪೀಠದ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳ ಧರ್ಮಾಧಿಕಾರಿ ಬೊಳ್ಳಾವ ಸತ್ಯಶಂಕರ ಕರೆ ನೀಡಿದರು.
ಶ್ರೀ ಶೃಂಗೇರಿ ಶ್ರೀಗಳ ಮಾರ್ಗದರ್ಶನದಂತೆ ಶ್ರೀಶಂಕರ ಶಿಷ್ಯರ ಸಮ್ಮಿಲನದೊಂದಿಗೆ ಡಿಸೆಂಬರ್ 28, 29 ಮತ್ತು 30ರಂದು ಉಡುಪಿಯ ಎಂಜಿಎಂ ಕ್ರೀಡಾಂಗಣದಲ್ಲಿ ನಡೆಯಲಿರುವ ‘ಶ್ರೀಶಂಕರ ವಿಜಯೋತ್ಸವ -2026’ ಎಂಬ ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಭಾನುವಾರ ಮಂಗಳೂರಿನ ಬಾಳಂಭಟ್ ಸಭಾಭವನದಲ್ಲಿ ನಡೆದ ಶ್ರೀ ಶಂಕರ ವಿಜಯೋತ್ಸವದ ಆರಂಭೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತಾಯಿಗೆ ಕೊಟ್ಟ ಮಾತಿನಂತೆ ಸನ್ಯಾಸಿಯಾಗಿದ್ದರೂ ಅಂತ್ಯಕ್ರಿಯೆ ನೆರವೇರಿಸಿದವರು ಆದಿ ಶಂಕರರು. ಧರ್ಮ ಶಾಶ್ವತವಾಗಿ ಉಳಿಯಲು ನಾಲ್ಕು ಆಮ್ನಾಯ ಪೀಠಗಳನ್ನು ಸ್ಥಾಪಿಸಿದರು. ಶಂಕರಾಚಾರ್ಯರು ಇಲ್ಲದಿದ್ದರೆ ಇಂದು ನಾವು ಹಿಂದೂ ಧರ್ಮದ ಅನುಯಾಯಿಗಳಾಗಿರಲು ಸಾಧ್ಯವಿರುತ್ತಿರಲಿಲ್ಲ. ಅವರು ತಮ್ಮ ಮೇಧಾಶಕ್ತಿಯಿಂದ ಅದ್ವೈತ ಸಿದ್ಧಾಂತವನ್ನು ಜನರಿಗೆ ಪ್ರಚಾರಪಡಿಸಿ ಧರ್ಮದ ಉಳಿವಿಗೆ ಶ್ರಮಿಸಿದರು. ಅವರ ಕಾರ್ಯಗಳನ್ನು ವಿಮರ್ಶಿಸುವ ಮಟ್ಟದಲ್ಲಿ ನಾವಿಲ್ಲ. ಆದರೆ ಅವರ ಜೀವನವನ್ನು ತಿಳಿದುಕೊಂಡರೆ ಸಾಕು, ಒಬ್ಬ ಮನುಷ್ಯ ಹೇಗೆ ಇರಬೇಕು ಎಂಬುದಕ್ಕೆ ಅದೇ ಸಾಕ್ಷಿ ಎಂದರು.
ಶ್ರೀ ಶಂಕರ ವಿಜಯೋತ್ಸವ ಸಮಿತಿ ಕಾರ್ಯದರ್ಶಿ ಡಾ. ಸತ್ಯಕೃಷ್ಣ ಭಟ್ ಮಾತನಾಡಿ, ಉಡುಪಿಯಲ್ಲಿ ನಡೆಯಲಿರುವ ಶ್ರೀ ಶಂಕರ ವಿಜಯೋತ್ಸವ ಕಾರ್ಯಕ್ರಮವನ್ನು ಭಕ್ತರು ಹಾಗೂ ಶಿಷ್ಯವರ್ಗದವರು, ಗುರುಗಳ ಆಜ್ಞೆಯನ್ನು ಶಿರಸಾ ವಹಿಸಿ ಬೃಹತ್ ಮಟ್ಟದಲ್ಲಿ ಯಶಸ್ವಿಗೊಳಿಸಬೇಕು ಎಂದರು.
ಉತ್ತರ ಕನ್ನಡದಿಂದ ಕಾಸರಗೋಡಿನವರೆಗಿನ ಪ್ರದೇಶಕ್ಕೆ ಉಡುಪಿ ಮಧ್ಯಭಾಗದಲ್ಲಿದ್ದು, ಎಲ್ಲರಿಗೂ ಬಂದುಹೋಗಲು ಅನುಕೂಲಕರವಾಗಿದೆ. ಶಾಸ್ತ್ರೀಯ ಮತ್ತು ಐತಿಹಾಸಿಕ ಹಿನ್ನೆಲೆಯಲ್ಲಿ ನೋಡಿದರೆ, ಶಂಕರಾಚಾರ್ಯರ ನಾಲ್ಕು ಪ್ರಮುಖ ಶಿಷ್ಯರಲ್ಲಿ ಒಬ್ಬರಾದ ಹಸ್ತಮಲಕಾಚಾರ್ಯರು ಜನ್ಮತಾಳಿದ್ದು ಇದೇ ಉಡುಪಿ ಕ್ಷೇತ್ರದ ಶಿವಳ್ಳಿ ಗ್ರಾಮದಲ್ಲಿ. ಆದ್ದರಿಂದ ಈ ಕ್ಷೇತ್ರದಲ್ಲಿ ಕಾರ್ಯಕ್ರಮ ನಡೆಯುವುದು ಅತ್ಯಂತ ಅರ್ಥಪೂರ್ಣವಾಗಿದೆ ಎಂದು ಹೇಳಿದರು.
ಒಂದು ಲಕ್ಷ ಜನರ ನಿರೀಕ್ಷೆ:
ಈ ಬೃಹತ್ ಕಾರ್ಯಕ್ರಮದಲ್ಲಿ ಸುಮಾರು ಒಂದು ಲಕ್ಷ ಜನರನ್ನು ಸೇರಿಸುವ ಗುರಿ ಹೊಂದಲಾಗಿದೆ. ಉಡುಪಿಯ ಎಂ.ಜಿ.ಎಂ. ಕಾಲೇಜಿನ ಕ್ರೀಡಾಂಗಣದಲ್ಲಿ ಜಗದ್ಗುರು ಮಹಾಸ್ವಾಮಿಗಳ ದಿವ್ಯ ಉಪಸ್ಥಿತಿ ಮತ್ತು ಮಾರ್ಗದರ್ಶನದಲ್ಲಿ ಕಾರ್ಯಕ್ರಮ ಜರುಗಲಿದೆ ಎಂದರು.
ವಿವಿಧ ಕಾರ್ಯಕ್ರಮಗಳು:
ಶಂಕರ ವಿಜಯೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಮಹೇಶ್ ಠಾಕೂರ್ ಅವರು ಉತ್ಸವದ ರೂಪುರೇಷೆ ಮತ್ತು ವಿವಿಧ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು. ಡಿ.27ರಂದು ಉಡುಪಿ ಎಂ.ಜಿ.ಎಂ. ಕಾಲೇಜಿನ ಕ್ರೀಡಾಂಗಣದ ಹತ್ತಿರದ ಸಭಾಂಗಣದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಚಿತ್ರ ಬರೆಯುವ ಸ್ಪರ್ಧೆ ನಡೆಯಲಿದೆ. ಇದರಲ್ಲಿ ಸುಮಾರು 3ರಿಂದ 4 ಸಾವಿರ ಜನ ಸೇರುವ ನಿರೀಕ್ಷೆಯಿದೆ. ಶಂಕರಾಚಾರ್ಯ ವಿರಚಿತ ಸ್ತೋತ್ರಗಳ ಗಾಯನ, ಶಂಕರಾಚಾರ್ಯರ ಕುರಿತ ಭಾಷಣ ಮತ್ತು ಜೀವನ ಚರಿತ್ರೆಯ ರಸಪ್ರಶ್ನೆಯ ಅಂತಿಮ ಸ್ಪರ್ಧೆಗಳು ಇದೇ ದಿನ ನಡೆಯಲಿವೆ. ಡಿ.28ರಂದು ಮಹಾಗಣಪತಿ ಹೋಮದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದ್ದು, ಸಂಜೆ ನ್ಯಾಷನಲ್ ಹೈವೆಯಿಂದ ಜಗದ್ಗುರುಗಳ ವೈಭವದ ಶೋಭಾಯಾತ್ರೆ ಎಂ.ಜಿ.ಎಂ. ಕ್ರೀಡಾಂಗಣದವರೆಗೆ ಸಾಗಲಿದೆ. ಬಳಿಕ ವೇದಿಕೆಯಲ್ಲಿ ಶಂಕರ ವಿಜಯೋತ್ಸವದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ ಎಂದರು.
ಡಿ.29ರಂದು ಬೆಳಿಗ್ಗೆ ಚಂಡಿಕಾ ಹೋಮ ಹಾಗೂ ಮಹಿಳೆಯರಿಂದ ಲಲಿತಾ ಸಹಸ್ರನಾಮ, ಸೌಂದರ್ಯ ಲಹರಿ ಪಾರಾಯಣ ಮತ್ತು ಭಜನಾ ಸಮರ್ಪಣೆ ನಡೆಯಲಿದೆ. ಸುಮಾರು 7 ಸಾವಿರ ಮಹಿಳೆಯರು ಇದರಲ್ಲಿ ಪಾಲ್ಗೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಡಿ.30ರಂದು ಜಗದ್ಗುರುಗಳ ಸಮಕ್ಷಮದಲ್ಲಿ ಸಮಾರೋಪ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಪ್ರಚಾರ ಸಮಿತಿ ಅಧ್ಯಕ್ಷ ಚಂದ್ರಶೇಖರ ಉಚ್ಚಿಲ, ಶ್ರೀ ಶಂಕರ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಪ್ರೊ.ನರೇಶ ಮಲ್ಲಿಗೆಮಾರು ಮಾತನಾಡಿದರು.

ಶ್ರೀ ಶೃಂಗೇರಿ ಶಾರದಾ ಪೀಠಂ ಉಡುಪಿ ಪ್ರಾಂತ್ಯದ ಧರ್ಮಾಧಿಕಾರಿ ವೇ.ಮೂ.ವಾಗೀಶ ಶಾಸ್ತ್ರಿ, ಕುಂದಾಪುರ ಪ್ರಾಂತ್ಯದ ಧರ್ಮಾಧಿಕಾರಿ ವೇ.ಮೂ.ಲೋಕೇಶ ಅಡಿಗ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪ್ರಚಾರ ಸಾಹಿತ್ಯಗಳನ್ನು ಬಿಡುಗಡೆಗೊಳಿಸಿ, ತಾಲೂಕು ಸಮಿತಿಗೆ ಹಸ್ತಾಂತರಿಸಲಾಯಿತು.
ಡಾ. ಸತ್ಯಕೃಷ್ಣ ಭಟ್ ಸ್ವಾಗತಿಸಿದರು. ಆರ್ಥಿಕ ಸಮಿತಿ ಸಂಚಾಲಕ, ವಿಧಾನ ಪರಿಷತ್ ಮಾಜಿ ಸದಸ್ಯ ಬಾಲಕೃಷ್ಣ ಭಟ್ ವಂದಿಸಿದರು. ಮಹೇಶ್ ಮೂರ್ತಿ ಸುರತ್ಕಲ್ ನಿರೂಪಿಸಿದರು.
———
ಸಮಿತಿಯ ಜಿಲ್ಲಾ ಸಂಚಾಲಕ ರವೀಂದ್ರ ಶೆಟ್ಟಿ ಉಳಿದೊಟ್ಟು ಮಾತನಾಡಿ, ಶಂಕರರು ದೇಶದ ನಾಲ್ಕು ದಿಕ್ಕುಗಳಲ್ಲಿ ಪೀಠ ಸ್ಥಾಪಿಸಿ, ಅಲ್ಪ ವಯಸ್ಸಿನಲ್ಲಿ ಮಾಡಿದ ಸಾಧನೆಯಿಂದ ಇಂದು ಹಿಂದೂ ಧರ್ಮ ತಲೆಯೆತ್ತಿ ನಿಂತಿದೆ. ಶೃಂಗೇರಿ ದಕ್ಷಿಣಾಮ್ನಾಯ ಪೀಠದ ಉಭಯ ಜಗದ್ಗುರುಗಳ ಮಾರ್ಗದರ್ಶನ ಮತ್ತು ನೇತೃತ್ವದಲ್ಲಿ ನಡೆಯುವ ಶ್ರೀ ಶಂಕರ ವಿಜಯೋತ್ಸವ
ಕಾರ್ಯಕ್ರಮವು ಎಲ್ಲರ ಪಾಲ್ಗೊಳ್ಳುವಿಕೆಯಿಂದ ಯಶಸ್ವಿಯಾಗಲಿ ಎಂದರು.












