ಇತ್ತೀಚಿನ ಸುದ್ದಿ
ಮುಖ್ಯಮಂತ್ರಿ ಡಿಕೆಶಿ ಹಾಸನಾಂಬೆ ದರ್ಶನ ಪಡೆಯುತ್ತಿರುವ ವೀಡಿಯೋಗೆ ಭಕ್ತರಿಂದ ಚಪ್ಪಲಿ ಎಸೆತ: ಸರತಿ ಸಾಲಿನಲ್ಲಿ ತಾಸುಗಟ್ಟಲೆ ನಿಂತವರ ಆಕ್ರೋಶ
08/11/2026, 21:45
ಹಾಸನ(reporterkarnataka.com): ವರ್ಷಕ್ಕೊಮ್ಮೆ ಮಾತ್ರ ಬಾಗಿಲು ತೆರೆಯುವ ಪ್ರಸಿದ್ಧ ಹಾಸನಾಂಬೆ ದರ್ಶನೋತ್ಸವಕ್ಕೆ ಬಂದು ಭಕ್ತರನ್ನು ಗಂಟೆಗಟ್ಟಲೆ ಕಾಯಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಸರತಿ ಸಾಲಿನಲ್ಲಿ ಭಕ್ತರ ಆಕ್ರೋಶ ಮುಗಿಲುಮುಟ್ಟಿದೆ. ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತು ಕಾದು ಸುಸ್ತಾಗಿದ್ದ ಭಕ್ತರು, ಮುಖ್ಯಮಂತ್ರಿಗಳು ಗರ್ಭಗುಡಿಯಲ್ಲಿ ಪೂಜೆ ಸಲ್ಲಿಸುತ್ತಿದ್ದ ದೃಶ್ಯ ಪ್ರಸಾರವಾಗುತ್ತಿದ್ದ ಎಲ್‌ಇಡಿ (LED) ಪರದೆಗೆ ಚಪ್ಪಲಿ ಎಸೆಯುವ ಮೂಲಕ ತಮ್ಮ ತೀವ್ರ ಪ್ರತಿರೋಧ ವ್ಯಕ್ತಪಡಿಸಿದ್ದಾರೆ.
*ದೀರ್ಘ ಕಾಯುವಿಕೆಯಿಂದ ಭಕ್ತರ ಬೇಸರ:*
ಹಾಸನಾಂಬೆಯ ದರ್ಶನಕ್ಕಾಗಿ ರಾಜ್ಯದ ಮೂಲೆ ಮೂಲೆಯಿಂದ ಆಗಮಿಸಿದ್ದ ಸಾವಿರಾರು ಸಾರ್ವಜನಿಕರು ಹಾಗೂ ಶ್ರದ್ಧಾಳುಗಳು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ಕಾಯುತ್ತಿದ್ದರು. ಈ ವೇಳೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಅವರ ಕುಟುಂಬ ಸದಸ್ಯರು ದೇವಾಲಯಕ್ಕೆ ಭೇಟಿ ನೀಡಿದ್ದರಿಂದ ಸಾಮಾನ್ಯ ಭಕ್ತರ ದರ್ಶನಕ್ಕೆ ವಿಳಂಬವಾಗಿತ್ತು. ಮುಖ್ಯಮಂತ್ರಿಗಳು ಗರ್ಭಗುಡಿಯಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಿರುವ ನೇರ ದೃಶ್ಯವನ್ನು ದೇವಾಲಯದ ಆವರಣದ ಸಾರ್ವಜನಿಕ ಸಾಲಿನಲ್ಲಿ ಅಳವಡಿಸಲಾಗಿದ್ದ ಎಲ್‌ಇಡಿ ಪರದೆಯಲ್ಲಿ ಪ್ರಸಾರ ಮಾಡಲಾಗುತ್ತಿತ್ತು.ಸಾಲಿನಲ್ಲಿ ಕಾದು ಸುಸ್ತಾಗಿದ್ದ ಹಾಗೂ ವಿಐಪಿ (VIP) ಸಂಸ್ಕೃತಿಯಿಂದ ಬೇಸತ್ತ ಭಕ್ತರು, ಈ ದೃಶ್ಯ ಕಂಡು ದಿಢೀರನೆ ಆಕ್ರೋಶಗೊಂಡರು. ತಕ್ಷಣವೇ ತ ತಮ್ಮ ಚಪ್ಪಲಿಗಳನ್ನು ತೆಗೆದು ಪರದೆಯತ್ತ ತೂರಿದರು. ಈ ಮೂಲಕ ಸಿಎಂ ಹಾಗೂ ಅವರ ಕುಟುಂಬ ಸದಸ್ಯರಿಗೆ ಹಿಡಿಶಾಪ ಹಾಕಿದರು.
ಮುಖ್ಯಮಂತ್ರಿಯಾದವರು ಜನರಿಗೆ ತೊಂದರೆ ಕೊಡಬಾರದು:
ಸ್ಥಳದಲ್ಲಿದ್ದ ಭಕ್ತರು ಆಡಳಿತದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ‘ಮುಖ್ಯಮಂತ್ರಿಯಾದವರು ಜನರಿಗೆ ಒಳ್ಳೆಯದನ್ನು ಮಾಡುವುದಕ್ಕಾಗಿ ಆ ಹುದ್ದೆಯಲ್ಲಿದ್ದಾರೆ ಹೊರತು ಹೀಗೆ ಸಾಮಾನ್ಯ ಜನರಿಗೆ ತೊಂದರೆ ಕೊಡುವುದಕ್ಕಲ್ಲ. ‘ನಾನು ದೇವಸ್ಥಾನಕ್ಕೆ ಹೋಗುತ್ತೇನೆ, ಸಾರ್ವಜನಿಕರಿಗೆ ತೊಂದರೆಯಾಗಬಾರದು ಆದ್ದರಿಂದ ಯಾರೂ ಬರಬೇಡಿ’ ಎಂದು ಅವರು ಹೇಳಬೇಕಿತ್ತು. ಅದನ್ನು ಬಿಟ್ಟು ಗಂಟೆಗಟ್ಟಲೆ ಜನರನ್ನು ಕಾಯಿಸಿ ವಿಶೇಷ ದರ್ಶನ ಪಡೆಯುವುದು ಎಷ್ಟು ಸರಿ?’ ಎಂದು ತಮ್ಮ ಆಕ್ರೋಶ ಹೊರಹಾಕಿದರು.












