ಇತ್ತೀಚಿನ ಸುದ್ದಿ
ಮಂಗಳೂರು | ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಸುರೇಶ್ ರಾವ್ ಅವರಿಗೆ ಸನ್ಮಾನ
08/11/2026, 17:28
ಮಂಗಳೂರು(reporterkarnataka.com): ವೈದ್ಯಕೀಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿ 2026ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿರುವ ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಆಂಕಾಲಜಿ (ಎಂಐಒ) ಸಂಸ್ಥೆಯ ನಿರ್ದೇಶಕ ಹಾಗೂ ಖ್ಯಾತ ವೈದ್ಯ ಡಾ. ಡಿ. ಸುರೇಶ್ ರಾವ್ ಅವರನ್ನು ಮಂಗಳೂರಿನಲ್ಲಿ ಅಭಿನಂದಿಸಿ ಸನ್ಮಾನಿಸಲಾಯಿತು.

ವೈದ್ಯಕೀಯ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಸಲ್ಲಿಸುತ್ತಿರುವ ವಿಶಿಷ್ಟ ಸೇವೆ, ಕ್ಯಾನ್ಸರ್ ಚಿಕಿತ್ಸೆಯಲ್ಲಿ ಅವರು ತೋರಿರುವ ಬದ್ಧತೆ ಹಾಗೂ ರೋಗಿಗಳ ಆರೈಕೆಯಲ್ಲಿ ಹೊಂದಿರುವ ಮಾನವೀಯ ಕಾಳಜಿಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ. ಕ್ಯಾನ್ಸರ್ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ಒದಗಿಸುವುದರ ಜೊತೆಗೆ, ಆರ್ಥಿಕವಾಗಿ ಹಿಂದುಳಿದವರಿಗೂ ಚಿಕಿತ್ಸೆಯ ಸೌಲಭ್ಯ ತಲುಪಿಸುವ ನಿಟ್ಟಿನಲ್ಲಿ ಡಾ. ಸುರೇಶ್ ರಾವ್ ಅವರ ಕೊಡುಗೆ ಮಹತ್ವದ್ದಾಗಿದೆ.
ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ ಮಾತನಾಡಿ, ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳು ಹಾಗೂ ಅವರ ಕುಟುಂಬದವರಲ್ಲಿ ಆತ್ಮವಿಶ್ವಾಸ ಮತ್ತು ಭರವಸೆ ಮೂಡಿಸುವುದು ವೈದ್ಯಕೀಯ ಕ್ಷೇತ್ರದ ಮಹತ್ವದ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಡಾ. ಸುರೇಶ್ ರಾವ್ ಅವರು ಕರಾವಳಿ ಭಾಗದಲ್ಲಿ ಸಲ್ಲಿಸುತ್ತಿರುವ ಸೇವೆ ಶ್ಲಾಘನೀಯವಾಗಿದೆ. ವೈದ್ಯಕೀಯ ಸೇವೆಯನ್ನು ಕೇವಲ ವೃತ್ತಿಯಾಗಿ ಪರಿಗಣಿಸದೆ, ಮಾನವೀಯ ಕಾಳಜಿಯೊಂದಿಗೆ ಸಮಾಜಕ್ಕೆ ಕೊಡುಗೆ ನೀಡುತ್ತಿರುವ ಅವರ ಕಾರ್ಯ ಇತರರಿಗೆ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಉದ್ಯಮಿ ವಾಲ್ಟರ್ ಡಿಸೋಜಾ ಮಾತನಾಡಿ, ಜನರ ನೋವುಗಳಿಗೆ ಸ್ಪಂದಿಸುವ ಡಾ. ಸುರೇಶ್ ರಾವ್ ಅವರಿಗೆ ಅರ್ಹವಾಗಿ ಪ್ರಶಸ್ತಿ ದೊರೆತಿದೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಡಿ.ಸುರೇಶ್ ರಾವ್, ಈ ಪ್ರಶಸ್ತಿ ಸಂಸ್ಥೆಯ ಎಲ್ಲ ವೈದ್ಯರು, ಸಿಬ್ಬಂದಿ ಹಾಗೂ ರೋಗಿಗಳ ಸೇವೆಯಲ್ಲಿ ತೊಡಗಿಸಿಕೊಂಡಿರುವ ತಂಡದ ಸಾಮೂಹಿಕ ಪ್ರಯತ್ನಕ್ಕೆ ಸಂದ ಗೌರವವಾಗಿದೆ. ವೈದ್ಯಕೀಯ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳಲು ಇಂತಹ ಗೌರವಗಳು ಮತ್ತಷ್ಟು ಪ್ರೇರಣೆ ನೀಡುತ್ತವೆ ಎಂದು ಹೇಳಿದರು.
ಸಮಾರಂಭದಲ್ಲಿ ವಿವಿಧ ಗಣ್ಯರು ಮಾತನಾಡಿ, ಡಾ.ಸುರೇಶ್ ರಾವ್ ಅವರ ವೈದ್ಯಕೀಯ ಸೇವೆ, ಸಿಬಂದಿ ಹಾಗೂ ರೋಗಿಗಳೊಂದಿಗೆ ಅವರು ಹೊಂದಿರುವ ಆತ್ಮೀಯ ಸಂಬಂಧ ಮತ್ತು ಸಮಾಜಮುಖಿ ಕಾರ್ಯಗಳನ್ನು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಡಾ. ಸುರೇಶ್ ರಾವ್ ಅವರ ಪತ್ನಿ ಡಾ. ಪ್ರತಿಮಾ ರಾವ್, ಪುತ್ರ ರಾಹುಲ್,ಹಿರಿಯ ನರರೋಗ ತಜ್ಞ ಡಾ. ಐ.ಜಿ.ಭಟ್, ಎಂಐಒ ಸಂಸ್ಥೆಯ ನಿರ್ದೇಶಕ ಡಾ.ಸನತ್ ಹೆಗ್ಡೆ, ಡಾ.ರೋಹನ್ ಗಟ್ಟಿ, ಡಾ.ಜಲಾಲುದ್ದೀನ್ ಅಕ್ಬರ್, ಡಾ.ಕ್ರಷ್ಣ ಪ್ರಸಾದ್ ಸೇರಿದಂತೆ ವೈದ್ಯಕೀಯ ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಉಪಸ್ಥಿತರಿದ್ದರು.












