ಇತ್ತೀಚಿನ ಸುದ್ದಿ
ರಾಜ್ಯದಲ್ಲಿ ಬರ ಪರಿಸ್ಥಿತಿ | ಮೈಸೂರಿನಲ್ಲಿ ದಸರಾ ಕಂಬಳ ಬೇಡ: ‘ಪರಿಸರಕ್ಕಾಗಿ ನಾವು’ ಸಂಘಟನೆಯ ರಾಜ್ಯಾಧ್ಯಕ್ಷ ಎ.ಟಿ.ರಾಮಸ್ವಾಮಿ ಆಗ್ರಹ
12/10/2026, 22:32
ಮಂಗಳೂರು(reporterkarnataka.com): ರಾಜ್ಯ ಬರ ಪರಿಸ್ಥಿತಿಯನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ ಮೈಸೂರು ದಸರಾದಲ್ಲಿ ಕಂಬಳ ಕ್ರೀಡೆ ನಡೆಸಬೇಡ ಎಂದು ‘ಪರಿಸರಕ್ಕಾಗಿ ನಾವು’ ಸಂಘಟನೆಯ ರಾಜ್ಯಾಧ್ಯಕ್ಷ ಹಾಗೂ ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಆಗ್ರಹಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರಾವಳಿಯ ಗ್ರಾಮೀಣ ಕ್ರೀಡೆಯಾದ ಕಂಬಳದ ಬಗ್ಗೆ ನಮಗೆಲ್ಲ ಅಪಾರ ಗೌರವದ ಜೊತೆಗೆ ಅಭಿಮಾನವಿದೆ.
ರಾಜ್ಯದ 200ಕ್ಕೂ ಹೆಚ್ಚು ತಾಲೂಕುಗಳು ಭೀಕರ ಬರಗಾಲಕ್ಕೆ ತುತ್ತಾಗಿದ್ದು, ರೈತರು ಮತ್ತು ಇತರ ಜನಸಾಮಾನ್ಯರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಂತರ್ಜಲ ಪಾತಾಳ ಮುಟ್ಟಿದೆ. ನೂರಾರು ಹಳ್ಳಿಗಳಲ್ಲಿ ಕುಡಿಯುವ ನೀರಿಗೂ ತತ್ವಾರವಾಗಿದೆ. ದನಕರು ಆಡುಕುರಿಗಳಿಗೆ ನೀರು ಮತ್ತು ಮೇವಿನ ಅಭಾವ ಉಂಟಾಗಿದೆ. ಅಕ್ಟೋಬರ್ ತಿಂಗಳಲ್ಲೇ ಇಂತಹ ಪರಿಸ್ಥಿತಿ ಇದೆ. ಮುಂದಿನ ದಿನಗಳಲ್ಲಿ ಎದುರಾಗುವ ಸಂಕಷ್ಟಗಳನ್ನು ಊಹಿಸಲೂ ಸಾಧ್ಯವಿಲ್ಲ. ಸೂಪರ್ ಎಲ್ ನಿನೋ ಪರಿಣಾಮ ಭಯಾನಕವಾಗಿರುತ್ತದೆ ಎಂಬ ವರದಿಗಳಿವೆ. ಬೆಳೆ ನಷ್ಟದಿಂದ ಕಂಗಾಲಾಗಿರುವ ರೈತರಿಗೆ ಸರ್ಕಾರ ಕೇವಲ 2500 ರೂ ಬರ ಪರಿಹಾರ ಘೋಷಿಸಿದ್ದು, ಇದು ಸರ್ಕಾರ ತಮಗೆ ಮಾಡಿರುವ ಅವಮಾನ ಎಂದು ರೈತರು ಆಕ್ರೋಶಗೊಂಡಿದ್ದಾರೆ. ಈ ಹಣ ಬಂದ ಕೂಡಲೇ ಆ ಮೊತ್ತಕ್ಕೆ ಒಂದು ರೂ ಸೇರಿಸಿ 2501 ರೂಗಳನ್ನು ಮುಖ್ಯ ಮಂತ್ರಿಗಳ ನಿಧಿಗೆ ಕೊಡುವ ತೀರ್ಮಾನವನ್ನು ರಾಜ್ಯದ ರೈತರು ಮಾಡಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು, ಪರಿಸರಕ್ಕಾಗಿ ನಾವು ಸಂಘಟನೆಯ ಪ್ರಧಾನ ಕಾರ್ಯದರ್ಶಿ ಪರಶುರಾಮೇಗೌಡ, ಪರಿಸರ ಹೋರಾಟಗಾರ್ತಿ ಲೀಲಾ ಶಿವಕುಮಾರ್, ಲೇಖಕಿ ಹಾಗೂ ಅಂಕಣಗಾರ್ತಿ ಕುಸುಮ ಆಯರಹಳ್ಳಿ ಮತ್ತು ಪ್ರಧಾನ ಕಾರ್ಯದರ್ಶಿ ರವಿಕಿರಣ ಪುಣಚ ಉಪಸ್ಥಿತರಿದ್ದರು.













