ಇತ್ತೀಚಿನ ಸುದ್ದಿ
ಎಂಆರ್ ಪಿಎಲ್ ಸ್ಫೋಟ ಕಂಪೆನಿಯ ನಿರ್ಲಕ್ಷ್ಯ, ದುರಹಂಕಾರ, ಜನಪ್ರತಿನಿಧಿಗಳ ಬೇಜವಾಬ್ದಾರಿತನದ ಪ್ರತಿಫಲ: ಸಿಪಿಎಂ ಆರೋಪ
30/09/2026, 23:00
ಮಂಗಳೂರು(reporterkarnataka.com): ಎಂಆರ್ ಪಿಎಲ್ ನ ಮೂರನೆ ಹಂತದ ಘಟಕದಲ್ಲಿ ನಡೆದಿರುವ ಸ್ಫೋಟ ಹಾಗು ಹಾನಿಯು ಕಂಪೆನಿ ಹಾಗು ಜಿಲ್ಲಾಡಳಿತ ನೀಡುತ್ತಿರುವ ವಿವರಣೆಗಳಿಗಿಂತ ಹಲವು ಪಟ್ಟು ಗಂಭೀರವಾಗಿದೆ. ಕಂಪೆನಿಯು ಸ್ಪೋಟದ ತೀವ್ರತೆಯನ್ನು ಎಂದಿನಂತೆ ಲಘುಗೊಳಿಸಲು ಯತ್ನಿಸುತ್ತಿದೆ. ಈ ಹಿಂದೆಯು ಎಮ್ಆರ್ ಪಿಎಲ್ ಒಳಗಡೆ ಹಲವು ಅವಘಡಗಳು ನಡೆದಿವೆ, ಪ್ರಾಣ ಹಾನಿ ಸಂಭವಿಸಿದೆ. ಪರಿಸರ ನಿಯಮ, ಸುರಕ್ಷತಾ ನಿಯಮಗಳನ್ನು ಸತತವಾಗಿ ಉಲ್ಲಂಘಿಸಲಾಗಿದೆ. ಕಂಪೆನಿಯ ನಿರ್ಲಕ್ಷ್ಯ, ದುರಹಂಕಾರದ ನಡೆ, ಕಂಪೆನಿಯ ನಿಯಮ ಉಲ್ಲಂಘನೆ ಕುರಿತಾಗಿ ಜಿಲ್ಲಾಡಳಿತದ ಮೃದು ಧೋರಣೆ, ಜನಪ್ರತಿನಿಧಿಗಳ ಬೇಜವಾಬ್ದಾರಿ ನಡೆಗಳು ಇಂದಿನ ಭೀಕರ ಸ್ಪೋಟಕ್ಕೆ ಕಾರಣ ಎಂದು ಸಿಪಿಎಂ ದ.ಕ. ಜಿಲ್ಲಾ ಸಮಿತಿ ಆರೋಪಿಸಿದೆ.
ಇಂದು ಸ್ಪೋಟ ಸಂಭವಿಸಿರುವ ಮೂರನೆ ಹಂತದ ಕೋಕ್ ಸಲ್ಪರ್ ಘಟಕವಂತು ನಿಯಮಗಳ ಉಲ್ಲಂಘನೆಗೆ ಕುಖ್ಯಾತವಾಗಿದೆ. ಬಹುಷ, ಕಡ್ಡಾಯ ಹಸಿರು ವಲಯ ಇಲ್ಲದೆ ಕಾರ್ಯಾಚರಿಸುತ್ತಿರುವ ದೇಶದ ಏಕೈಕ ಬೃಹತ್ ಕೈಗಾರಿಕಾ ಘಟಕ ಇದಾಗಿದೆ. ಈ ಘಟಕ ಕಾರ್ಯಾಚರಣೆ ಆರಂಭಿಸಿದ 2014 ರಿಂದಲೂ ಸುತ್ತಲಿನ ಗ್ರಾಮಸ್ಥರ ಜೀವನದೊಂದಿಗೆ ಚೆಲ್ಲಾಟವಾಡುತ್ತಲೆ ಬಂದಿದೆ. ಜೋಕಟ್ಟೆ, ಕಳವಾರು ಗ್ರಾಮಗಳಂತು ಈ ಘಟಕದ ಮಾಲಿನ್ಯದಿಂದ ನರಕ ಸದೃಶ್ಯವಾಗಿದೆ. ಮಾರಕ ರೋಗಗಳ ಗೂಡಾಗಿದೆ. ಈ ಕುರಿತು 2016ರಲ್ಲಿ ಗ್ರಾಮಸ್ಥರ ಹೋರಾಟದ ಫಲವಾಗಿ ರಾಜ್ಯ ಸರಕಾರ ಹೊರಡಿಸಿದ ಆರು ಅಂಶಗಳ ಆದೇಶವನ್ನು ಕಂಪೆನಿ ಜಾರಿಗೊಳಿಸದೆ ಸತಾಯಿಸುತ್ತಿದೆ. ಜಿಲ್ಲಾಡಳಿತವು ಸಂತ್ರಸ್ತ ಗ್ರಾಮಸ್ಥರ ಬದಲಿಗೆ ಕಂಪೆನಿಯ ಪರವಾಗಿ ಮೃದುಧೋರಣೆ ತಾಳುತ್ತಾ ಬಂದಿದೆ. ಕಂಪೆನಿಯ ಕುರಿತಾದ ದೂರುಗಳನ್ನು ನಿರ್ಲಕ್ಷ್ಯವಹಿಸುತ್ತಾ ಬಂದಿದೆ. ಇದೆಲ್ಲದರ ಒಟ್ಟು ಪರಿಣಾಮ ಇಂದಿನ ಸ್ಪೋಟದ ಮೂಲಕ ಹೊರಬಂದಿದೆ ಎಂದು ಸಿಪಿಐಎಂ ದ.ಕ. ಜಿಲ್ಲಾ ಸಮಿತಿ ಆಪಾದಿಸಿದೆ. ಈಗಿನ ತೀವ್ರತರದ ಸ್ಪೋಟದ ಕುರಿತು ಪಾರದರ್ಶಕ ತನಿಖೆ ನಡೆಸುವಂತೆ, ಸಾರ್ವಜನಿಕರ ಮನೆ, ಕಟ್ಟಡಗಳಿಗೆ ಆಗಿರುವ ಹಾನಿಗೆ ಕಂಪೆನಿಯಿಂದ ಸೂಕ್ತ ಪರಿಹಾರ ಒದಗಿಸುವಂತೆ ಸಿಪಿಎಂ ಆಗ್ರಹಿಸಿದೆ.













