ಇತ್ತೀಚಿನ ಸುದ್ದಿ
ಸೈಬರ್ ವಂಚನೆಗೆ ಬ್ರೇಕ್: 9,840 ಕೋಟಿ ಸ್ಪ್ಯಾಮ್ ಕರೆ ಪತ್ತೆಹಚ್ಚಿದ ಏರ್ಟೆಲ್
25/09/2026, 21:56
440 ಕೋಟಿ ನಕಲಿ ಸಂದೇಶ, 16.2 ಲಕ್ಷಕ್ಕೂ ಅಧಿಕ ವಂಚನೆಯ ಲಿಂಕ್ಗಳನ್ನು ಬ್ಲಾಕ್ ಮಾಡಿದ ಎಐ ತಂತ್ರಜ್ಞಾನ
ಮಂಗಳೂರು(reporterkarnataka.com): ದೇಶದಲ್ಲಿ ಡಿಜಿಟಲ್ ವಂಚನೆ ಪ್ರಕರಣಗಳು ದಿನದಿಂದ ದಿನಕ್ಕೆ ಆತಂಕಕಾರಿ ರೀತಿಯಲ್ಲಿ ಹೆಚ್ಚುತ್ತಿರುವ ನಡುವೆಯೇ, ಪ್ರಮುಖ ಟೆಲಿಕಾಂ ಸಂಸ್ಥೆ ಭಾರ್ತಿ ಏರ್ಟೆಲ್ ತನ್ನ ಅತ್ಯಾಧುನಿಕ ಎಐ ತಂತ್ರಜ್ಞಾನದ ಮೂಲಕ ಬರೋಬ್ಬರಿ 9,840 ಕೋಟಿ ಸ್ಪ್ಯಾಮ್ ಕರೆಗಳನ್ನು ಯಶಸ್ವಿಯಾಗಿ ಪತ್ತೆಹಚ್ಚಿರುವುದಾಗಿ ಪ್ರಕಟಿಸಿದೆ.
ಅಷ್ಟೇ ಅಲ್ಲದೆ, ಸಂಸ್ಥೆಯ ಸೇಫ್ ನೆಟ್ವರ್ಕ್ ಪರಿಹಾರಗಳು 440 ಕೋಟಿ ಸ್ಪ್ಯಾಮ್ ಸಂದೇಶಗಳನ್ನು ಗುರುತಿಸಿದ್ದು, 16.2 ಲಕ್ಷಕ್ಕೂ ಹೆಚ್ಚು ಅಪಾಯಕಾರಿ ಲಿಂಕ್ಗಳನ್ನು ನಿರ್ಬಂಧಿಸಿವೆ.
ಭಾರತದ ಡಿಜಿಟಲ್ ಆರ್ಥಿಕತೆಯು ಸಮೃದ್ಧವಾಗಿ ಮುನ್ನಡೆಯುತ್ತಿದ್ದರೂ, ಅದರ ಬೆನ್ನಲ್ಲೇ ಸೈಬರ್ ವಂಚನೆಯು ಬೃಹತ್ ಪ್ರಮಾಣದಲ್ಲಿ ಹಾಗೂ ಸಂಕೀರ್ಣ ತಂತ್ರಜ್ಞಾನಗಳೊಂದಿಗೆ ವಿಸ್ತರಿಸುತ್ತಿದೆ. ಈ ಹಿಂದೆ ಕೇವಲ ಸ್ಪ್ಯಾಮ್ ಕರೆಗಳು ಹಾಗೂ ಫಿಶಿಂಗ್ ಸಂದೇಶಗಳಿಗೆ ಸೀಮಿತವಾಗಿದ್ದ ಈ ವಂಚನೆಗಳು, ಇಂದು ಇನ್ನೊಬ್ಬರ ಸೋಗಿನಲ್ಲಿ ಮೋಸ ಮಾಡುವುದು (ಇಂಪರ್ಸನೇಶನ್ ಸ್ಕ್ಯಾಮ್), ನಕಲಿ ಬ್ಯಾಂಕಿಂಗ್ ರಿಕ್ವೆಸ್ಟ್ಗಳು, ಅಪಾಯಕಾರಿ ಲಿಂಕ್ಗಳು, ಹೂಡಿಕೆ ವಂಚನೆಗಳು ಹಾಗೂ ಒಟಿಪಿ ಆಧಾರಿತ ಹಣಕಾಸು ಲೂಟಿಯಂತಹ ವಿಶಾಲ ಜಾಲವಾಗಿ ಬದಲಾಗಿದೆ.
ಸರ್ಕಾರ ಮತ್ತು ಉದ್ಯಮ ವಲಯದ ದತ್ತಾಂಶಗಳ ಪ್ರಕಾರ, ಈ ಅಪಾಯವು ದೇಶಾದ್ಯಂತ ವ್ಯಾಪಕವಾಗಿದ್ದು, ವ್ಯವಸ್ಥಿತವಾಗಿ ಆಯೋಜಿಸಲ್ಪಡುತ್ತಿದೆ. ಭಾರತೀಯ ಸೈಬರ್ ಕ್ರೈಮ್ ಸಮನ್ವಯ ಕೇಂದ್ರದ (ಐ4ಸಿ) ವರದಿ ಅನ್ವಯ, ಕಳೆದ ಆರು ವರ್ಷಗಳ ಅವಧಿಯಲ್ಲಿ ಭಾರತೀಯರು ಸೈಬರ್ ವಂಚನೆಯಿಂದ ಬರೋಬ್ಬರಿ ₹52,976 ಕೋಟಿಗೂ ಅಧಿಕ ಮೊತ್ತವನ್ನು ಕಳೆದುಕೊಂಡಿದ್ದಾರೆ. ದೇಶಾದ್ಯಂತ ಒಟ್ಟಾರೆ ಅಪರಾಧ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದ್ದರೂ, ಸೈಬರ್ ಅಪರಾಧಗಳು ಮಾತ್ರ ನಿರಂತರವಾಗಿ ಏರಿಕೆಯಾಗುತ್ತಿರುವುದನ್ನು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್ ಸಿ ಆರ್ ಬಿ) ಅಂಕಿಅಂಶಗಳು ಸ್ಪಷ್ಟಪಡಿಸಿವೆ.
ಬ್ಯಾಂಕಿಂಗ್, ಹಣ ವರ್ಗಾವಣೆ, ಆರೋಗ್ಯ ಸೇವೆ, ವಾಣಿಜ್ಯ ಹಾಗೂ ಸರ್ಕಾರಿ ಸೇವೆಗಳು ಸೇರಿದಂತೆ ಪ್ರತಿಯೊಂದು ಕ್ಷೇತ್ರವೂ ಡಿಜಿಟಲ್ ಮಯವಾಗಿರುವುದರಿಂದ, ಡಿಜಿಟಲ್ ಸುರಕ್ಷತೆಯಲ್ಲಿ ಟೆಲಿಕಾಂ ಸಂಸ್ಥೆಗಳು ದೊಡ್ಡ ಪಾತ್ರ ವಹಿಸಬೇಕೆಂಬ ನಿರೀಕ್ಷೆ ಸಾರ್ವಜನಿಕರಲ್ಲಿ ಮೂಡಿದೆ. ಟೆಲಿಕಾಂ ಕಂಪನಿಗಳು ಕೇವಲ ನೆಟ್ವರ್ಕ್ ಕನೆಕ್ಷನ್ ನೀಡಿದರೆ ಸಾಲದು, ಡಿಜಿಟಲ್ ಸಂವಹನದಲ್ಲಿ ಎದುರಾಗುವ ಸಂಭಾವ್ಯ ಅಪಾಯಗಳನ್ನು ಗುರುತಿಸಿ ರಕ್ಷಣೆ ಒದಗಿಸಬೇಕು ಎಂದು ಬಳಕೆದಾರರು ಬಯಸುತ್ತಿದ್ದಾರೆ.
ಎರಡು ವರ್ಷಗಳ ಹಿಂದೆಯೇ ಈ ವಿದ್ಯಮಾನವನ್ನು ಗ್ರಹಿಸಿದ್ದ ಏರ್ಟೆಲ್, ಗ್ರಾಹಕರ ಸುರಕ್ಷತೆಗಾಗಿ ಮುಂಚೂಣಿ ಕ್ರಮಕ್ಕೆ ಮುಂದಾಯಿತು. 2024ರಲ್ಲಿ ಭಾರತದ ಪ್ರಪ್ರಥಮ ನೆಟ್ವರ್ಕ್-ಆಧಾರಿತ ಹಾಗೂ ಎಐ-ಚಾಲಿತ ಸ್ಪ್ಯಾಮ್ ಪತ್ತೆ ಪರಿಹಾರವನ್ನು ಪರಿಚಯಿಸಿತು. ನೆಟ್ವರ್ಕ್ ಸಾಮರ್ಥ್ಯ ಮತ್ತು ಕೃತಕ ಬುದ್ಧಿಮತ್ತೆಯನ್ನು ಸಂಯೋಜಿಸಿ, ಬಳಕೆದಾರರನ್ನು ಅನಗತ್ಯ ಕರೆಗಳು ಹಾಗೂ ಎಸ್ಎಂಎಸ್ಗಳಿಂದ ರಕ್ಷಿಸುವ ವ್ಯವಸ್ಥೆಗೆ ಚಾಲನೆ ನೀಡಿತು.
ಕಳೆದ 2 ವರ್ಷಗಳಲ್ಲಿ ಈ ಎಐ-ಆಧಾರಿತ ಸೇಫ್ ನೆಟ್ವರ್ಕ್ ಯೋಜನೆಯನ್ನು ಏರ್ಟೆಲ್ ಮತ್ತಷ್ಟು ವಿಸ್ತರಿಸಿದೆ. ನೆಟ್ವರ್ಕ್ ಹಂತದಲ್ಲೇ ವಂಚನೆಯನ್ನು ತಡೆಗಟ್ಟುವುದು ಇದರ ಗುರಿಯಾಗಿದೆ. ವಿಶೇಷವೆಂದರೆ, ಗ್ರಾಹಕರು ಯಾವುದೇ ಪ್ರತ್ಯೇಕ ಆ್ಯಪ್ ಡೌನ್ಲೋಡ್ ಮಾಡುವ ಅಗತ್ಯವಿಲ್ಲದೆ ಅಥವಾ ದೂರುಗಳನ್ನು ಸಲ್ಲಿಸಬೇಕಿಲ್ಲದೆ, ನೆಟ್ವರ್ಕ್ನ ಹಿನ್ನೆಲೆಯಲ್ಲೇ ಈ ಭದ್ರತಾ ವ್ಯವಸ್ಥೆ ಸ್ವಯಂಚಾಲಿತವಾಗಿ ಕಾರ್ಯನಿರ್ವಹಿಸುತ್ತದೆ.
ಏರ್ಟೆಲ್ ಸೇಫ್ ನೆಟ್ವರ್ಕ್ ನ ಪ್ರಮುಖ ಅಸ್ತ್ರಗಳು:
ಒಟಿಪಿ ವಂಚನೆ ತಡೆ ವ್ಯವಸ್ಥೆ: ಬಳಕೆದಾರರೊಂದಿಗೆ ಅನುಮಾನಾಸ್ಪದ ಸಂಭಾಷಣೆ ನಡೆಸಿ, ಅವರಿಂದ ಒಟಿಪಿ ಅಥವಾ ಸೂಕ್ಷ್ಮ ಬ್ಯಾಂಕಿಂಗ್ ಮಾಹಿತಿಗಳನ್ನು ಪಡೆಯಲು ಯತ್ನಿಸುವ ಸಂದರ್ಭಗಳನ್ನು ಗುರುತಿಸಿ, ತಕ್ಷಣವೇ ಮಧ್ಯಪ್ರವೇಶಿಸಿ ತಡೆಯುವ ಎಐ ರಕ್ಷಣಾ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.
ಹಾನಿಕಾರಕ ಲಿಂಕ್ಗಳ ಪತ್ತೆ: ಒಟಿಪಿ ವಂಚನೆ ತಡೆ ವ್ಯವಸ್ಥೆಗಿಂತ ಮೊದಲೇ ಏರ್ಟೆಲ್ ನಕಲಿ ವೆಬ್ಸೈಟ್ಗಳು ಹಾಗೂ ಅಪಾಯಕಾರಿ ಲಿಂಕ್ಗಳನ್ನು ರಿಯಲ್-ಟೈಮ್ನಲ್ಲಿ ಗುರುತಿಸುವ ತಂತ್ರಜ್ಞಾನವನ್ನು ಆರಂಭಿಸಿತ್ತು. ಇದುವರೆಗೆ ಮೊಬೈಲ್ ಮತ್ತು ವೈ-ಫೈ ಬ್ರಾಡ್ಬ್ಯಾಂಡ್ ಬಳಕೆದಾರರಿಗೆ ಎಸ್ಎಂಎಸ್, ಮೆಸೇಜಿಂಗ್ ಆ್ಯಪ್ಗಳು, ಇಮೇಲ್ಗಳು ಮತ್ತು ಬ್ರೌಸರ್ ರಿಡೈರೆಕ್ಟ್ಗಳ ಮೂಲಕ ಹರಿದುಬಂದ 16.2 ಲಕ್ಷಕ್ಕೂ ಹೆಚ್ಚು ಹಾನಿಕಾರಕ ಲಿಂಕ್ಗಳನ್ನು ಬ್ಲಾಕ್ ಮಾಡಲಾಗಿದೆ.
ಸ್ಪ್ಯಾಮ್ ಕರೆ ಮತ್ತು ಮೆಸೇಜ್ ಡಿಟೆಕ್ಷನ್: ಸೆಪ್ಟೆಂಬರ್ 2024ರಲ್ಲಿ ನೆಟ್ವರ್ಕ್ ಮಟ್ಟದ ಎಐ ಸ್ಪ್ಯಾಮ್ ಪತ್ತೆ ವ್ಯವಸ್ಥೆಯನ್ನು ಪ್ರಾರಂಭಿಸಿದ ನಂತರ, ಇದುವರೆಗೆ 9,840 ಕೋಟಿಗೂ ಹೆಚ್ಚು ಸ್ಪ್ಯಾಮ್ ಕರೆಗಳು ಹಾಗೂ 440 ಕೋಟಿ ಸ್ಪ್ಯಾಮ್ ಮೆಸೇಜ್ಗಳನ್ನು ಯಶಸ್ವಿಯಾಗಿ ಪತ್ತೆಹಚ್ಚಲಾಗಿದೆ ಎಂದು ಕಂಪನಿ ಮಾಹಿತಿ ನೀಡಿದೆ.
ಕರೆ ಮಾಡುವ ಸಂಸ್ಥೆಯ ಹೆಸರು ಪ್ರದರ್ಶನ: ಗ್ರಾಹಕರು ನಕಲಿ ಸಂಖ್ಯೆಗಳು ಹಾಗೂ ಪರಿಶೀಲಿಸಿದ ಅಧಿಕೃತ ಕಂಪನಿ ಕರೆಗಳ ನಡುವಿನ ವ್ಯತ್ಯಾಸವನ್ನು ಸುಲಭವಾಗಿ ತಿಳಿಯಲು ಅನುಕೂಲವಾಗುವಂತೆ ಸಂಸ್ಥೆಯ ಹೆಸರು ತೋರಿಸುವ ವ್ಯವಸ್ಥೆಯನ್ನು ತರಲಾಗಿದೆ. ಇದರಿಂದ ಬ್ಯಾಂಕ್ ಅಥವಾ ಗ್ರಾಹಕ ಸೇವಾ ಕೇಂದ್ರಗಳ ಹೆಸರಿನಲ್ಲಿ ನಡೆಯುವ ನಕಲಿ ಕರೆಗಳಿಗೆ ಕಡಿವಾಣ ಬಿದ್ದಿದೆ.
ಟೆಲಿಕಾಂ ಕಂಪನಿಗಳು ಕೇವಲ ನೆಟ್ವರ್ಕ್ ಸಂಪರ್ಕ ಕಲ್ಪಿಸುವುದಷ್ಟೇ ಅಲ್ಲದೆ, ಭಾರತದ ವೇಗದ ಡಿಜಿಟಲ್ ಜಗತ್ತನ್ನು ಸುರಕ್ಷಿತವಾಗಿಡಲು ಸಕ್ರಿಯ ಜವಾಬ್ದಾರಿ ಹೊರಬೇಕೆಂಬ ದಿಕ್ಕಿನಲ್ಲಿ ಏರ್ಟೆಲ್ನ ಈ ಸೇಫ್ ನೆಟ್ವರ್ಕ್ ಹೊಸ ದಿಕ್ಸೂಚಿಯಾಗಿದೆ.












