8:54 PM Wednesday23 - September 2026
ಬ್ರೇಕಿಂಗ್ ನ್ಯೂಸ್
ಅ.11ರಿಂದ ಕೆಆರ್‌ಎಸ್‌ನಲ್ಲಿ ಸಂಪ್ರದಾಯಬದ್ಧ ಕಾವೇರಿ ಆರತಿ: ಮುಖ್ಯಮಂತ್ರಿ ಉದ್ಘಾಟನೆ *ರೈತರ ಬದುಕು ಉಳಿಸಲು ನಮ್ಮ ಸರ್ಕಾರ ಕೆಲಸ ಮಾಡಲಿದೆ: ಸಿಎಂ ಡಿ ಕೆ… *ರಾಜ್ಯದ ಹಿತವೇ ಸರ್ಕಾರದ ಮೊದಲ ಆದ್ಯತೆ: ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ* ಕೊಳತ್ತಮಜಲು ಅಬ್ದುಲ್ ರಹ್ಮಾನ್ ಕೊಲೆ ಆರೋಪಿಗಳಿಗೆ ಜಾಮೀನು: ಸರ್ಕಾರದ ವಿರುದ್ಧ ಎಸ್‌ಡಿಪಿಐ ಆಕ್ರೋಶ ಮಂಗಳೂರು ಜಿಲ್ಲಾ ಕಾರಾಗೃಹದ ಸುತ್ತಮುತ್ತ ಮೊಬೈಲ್ ನೆಟ್‌ವರ್ಕ್ ವ್ಯತ್ಯಯ ತಗ್ಗಿಸಲು ಕ್ರಮ: ಗೃಹ… ಶಾರ್ಜಾದ ‘ಸ್ಟ್ರಿಂಗ್ ಟ್ರಾನ್ಸ್‌ಪೋರ್ಟ್’ ವ್ಯವಸ್ಥೆ: ಟೂರಿಸಂ ಸಚಿವ ಕೆ.ಜೆ. ಜಾರ್ಜ್ ನೇತೃತ್ವದ ನಿಯೋಗ… ರಾಜ್ಯ ಸಚಿವ ಸಂಪುಟ ಸಭೆ | ಸಂಚಾರ ವ್ಯತ್ಯಯ; ಬದಲಿ ಮಾರ್ಗ ವ್ಯವಸ್ಥೆ ಹ್ಯಾಂಡ್ಪಿಕ್ಡ್: ಬೆಂಗಳೂರಿನಲ್ಲಿ ತಾಜಾ ಹಿಟ್ಟು, ಮಸಾಲೆ ಹಾಗೂ ಎಣ್ಣೆ ಉತ್ಪನ್ನ ಮಾರಾಟ ಆರಂಭ ‘ಮಂಗಳೂರು ಟೆಕ್ನೋವಾಂಜಾ 2026’: ಕರಾವಳಿಯಲ್ಲಿ ತಂತ್ರಜ್ಞಾನ ಕ್ರಾಂತಿ ಸೆ. 23ರಂದು ಅನಾವರಣ ಬಹುರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೊ ದಾಖಲೆ ಸಾಧನೆ: 2025-26ನೇ ಸಾಲಿನಲ್ಲಿ 3,735 ಕೋಟಿ…

ಇತ್ತೀಚಿನ ಸುದ್ದಿ

ಅ.11ರಿಂದ ಕೆಆರ್‌ಎಸ್‌ನಲ್ಲಿ ಸಂಪ್ರದಾಯಬದ್ಧ ಕಾವೇರಿ ಆರತಿ: ಮುಖ್ಯಮಂತ್ರಿ ಉದ್ಘಾಟನೆ

23/09/2026, 20:12

*6 ದಿನಗಳ ಕಾಲ ವೈಭವದ ಕಾರ್ಯಕ್ರಮ - ಲೋಪವಿಲ್ಲದೆ ಅಚ್ಚುಕಟ್ಟಾಗಿ ಆಯೋಜಿಸಲು ಸಚಿವ ಚಲುವರಾಯಸ್ವಾಮಿ ಖಡಕ್ ಸೂಚನೆ*

*ಅ.11ರಿಂದ ಕೆಆರ್‌ಎಸ್‌ನಲ್ಲಿ ಸಂಪ್ರದಾಯಬದ್ಧ ಕಾವೇರಿ ಆರತಿ: ಸಚಿವ ಎನ್.ಚಲುವರಾಯಸ್ವಾಮಿ*

ಬೆಂಗಳೂರು(reporterkarnataka.com): ಶ್ರೀರಂಗಪಟ್ಟಣ ದಸರಾ ಅಂಗವಾಗಿ ಕೆಆರ್‌ಎಸ್‌ನಲ್ಲಿ ಅಕ್ಟೋಬರ್ 11ರಿಂದ ಸಂಪ್ರದಾಯಬದ್ಧ ಕಾವೇರಿ ಆರತಿ ಆಯೋಜಿಸಲಾಗಿದ್ದು, ಕಾರ್ಯಕ್ರಮವನ್ನು ಮುಖ್ಯಮಂತ್ರಿಗಳೇ ಉದ್ಘಾಟಿಸಲಿದ್ದಾರೆ ಎಂದು ಜಲಸಂಪನ್ಮೂಲ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.
ವಿಕಾಸಸೌಧದಲ್ಲಿ ಬುಧವಾರ ಕಾವೇರಿ ಆರತಿ ಆಯೋಜನೆ ಕುರಿತು ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಬಾರಿ ಕಾವೇರಿ ಆರತಿ ಆಯೋಜನೆಯಲ್ಲಿ ತೊಡಗಿಸಿಕೊಂಡಿದ್ದ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನೇ ಬಳಸಿಕೊಂಡು ಸಂಪ್ರದಾಯಬದ್ಧವಾಗಿ, ಯಾವುದೇ ಲೋಪವಿಲ್ಲದೆ ಅಚ್ಚುಕಟ್ಟಾಗಿ ಕಾರ್ಯಕ್ರಮ ನಡೆಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.


ಮುಖ್ಯಮಂತ್ರಿಗಳ ನಿರ್ದೇಶನದಂತೆ ಕಾವೇರಿ ಆರತಿಯನ್ನು ಅರ್ಥಪೂರ್ಣವಾಗಿ ನೆರವೇರಿಸಬೇಕು. ಈ ಹಿಂದೆ ಅವರೇ ಜಲಸಂಪನ್ಮೂಲ ಸಚಿವರಾಗಿದ್ದ ಸಂದರ್ಭದಲ್ಲಿ ಆರಂಭಿಸಿದ್ದ ಈ ಕಾರ್ಯಕ್ರಮವನ್ನು ಈ ಬಾರಿ ಇನ್ನಷ್ಟು ಅರ್ಥಪೂರ್ಣವಾಗಿ ಆಯೋಜಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
ಕಳೆದ ವರ್ಷ ಮೊದಲ ಬಾರಿಗೆ ಕೆಆರ್‌ಎಸ್‌ನಲ್ಲಿ ಕಾವೇರಿ ಆರತಿ ಆರಂಭಿಸಲಾಗಿತ್ತು. ಇಂತಹ ಸಾಂಪ್ರದಾಯಿಕ ಆಚರಣೆಗಳು ನಿಲ್ಲಬಾರದು ಎಂಬ ಸದುದ್ದೇಶದಿಂದ ಈ ವರ್ಷವೂ ಮುಂದುವರಿಸಲಾಗುತ್ತಿದೆ. ರಾಜ್ಯದಲ್ಲಿ ಬರ ಮತ್ತು ತಮಿಳುನಾಡು ನೀರು ಹಂಚಿಕೆ ವಿವಾದಗಳಿದ್ದರೂ, ನಾಡಿನ ಸಂಸ್ಕೃತಿಯನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದರು.
ಅಕ್ಟೋಬರ್ 11ರಿಂದ ಆರಂಭವಾಗಲಿರುವ ಕಾವೇರಿ ಆರತಿ ಒಟ್ಟು 6 ದಿನಗಳ ಕಾಲ ಜರುಗಲಿದೆ.
ಪಾರ್ಕಿಂಗ್ ಸ್ಥಳದಿಂದ ವೇದಿಕೆವರೆಗೂ ಉಚಿತ ಬಸ್ ಸೌಲಭ್ಯ, ಲೋಕೋಪಯೋಗಿ ಇಲಾಖೆಯಿಂದ ರಸ್ತೆ ನಿರ್ಮಾಣ, ವಾರ್ತಾ ಇಲಾಖೆಯಿಂದ ಪ್ರಚಾರ, ಮುಜರಾಯಿ ಇಲಾಖೆಯಿಂದ ಪಂಡಿತರ ನೇಮಕ, ಎಲ್‌ಇಡಿ ಪರದೆಗಳು, ಭವ್ಯ ವೇದಿಕೆ, ಧ್ವನಿ-ಬೆಳಕು ವ್ಯವಸ್ಥೆ, ವಾದ್ಯ, ಪೂಜಾ ಪರಿಕರಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ವ್ಯವಸ್ಥಿತವಾಗಿರಬೇಕು. ಯಾವುದೇ ಶಿಷ್ಟಾಚಾರ ಉಲ್ಲಂಘನೆಯಾಗದಂತೆ ಮತ್ತು ಕಳೆದ ಬಾರಿಯ ಲೋಪದೋಷಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಲು ಸೂಚಿಸಿದರು.
ಮುಖ್ಯಮಂತ್ರಿಗಳು ಆಗಮಿಸುವುದರಿಂದ ‘ಡಿ-ಝೋನ್’ ಭದ್ರತಾ ನಿಯಮಗಳ ಪಾಲನೆಯಾಗಬೇಕು ಮತ್ತು ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಮುಕ್ತ ಅವಕಾಶ ಕಲ್ಪಿಸಬೇಕು ಎಂದು ನಿರ್ದೇಶಿಸಿದರು.

*ವಿಡಿಯೋ ಕರೆ ಮೂಲಕ ಸಲಹೆ*
ಕಳೆದ ಬಾರಿಯ ಕಾವೇರಿ ಆರತಿಯ ಮೇಲ್ವಿಚಾರಣೆ ವಹಿಸಿದ್ದ ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ರಾಮಪ್ರಸಾದ್ ಅವರೊಂದಿಗೆ ವಿಡಿಯೋ ಕಾಲ್ ಮೂಲಕ ಸಮಾಲೋಚನೆ ನಡೆಸಿದ ಸಚಿವರು, ಈ ವರ್ಷವೂ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ 6 ದಿನಗಳ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ರೂಪಿಸುವಂತೆ ಮತ್ತು ಸ್ಥಳೀಯ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡುವಂತೆ ಕೋರಿದರು.
ಸಭೆಯಲ್ಲಿ ಕಾವೇರಿ ಪ್ರತಿಮೆ ನಿರ್ಮಾಣ, ಪೂಜಾ ವಿಧಿವಿಧಾನಗಳು, ವಾರಣಾಸಿಯ ಅರ್ಚಕರ ತಂಡದ ವಾಸ್ತವ್ಯ ಮೊದಲಾದ ವಿವರಗಳನ್ನು ಪರಿಶೀಲಿಸಲಾಯಿತು. 6 ದಿನವೂ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಂಗೀತ ಸಂಜೆ, ಹಾಸ್ಯ ಸಂಜೆ ನಡೆಯಲಿದೆ.
ಸಭೆಯಲ್ಲಿ ಶ್ರೀರಂಗಪಟ್ಟಣ ಶಾಸಕ ರಮೇಶ್ ಬಂಡಿಸಿದ್ದೇಗೌಡ, ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ನಂದಿನಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯುಕ್ತೆ ಮಂಜುಶ್ರೀ ಹಾಗೂ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು