ಇತ್ತೀಚಿನ ಸುದ್ದಿ
ಮಂಗಳೂರಿನಲ್ಲಿ ಸೈಂಟ್ ಜೋಸೆಫ್ ವಿಶ್ವವಿದ್ಯಾಲಯದ ಏಥೀರಿಯಾ 2026ಕ್ಕೆ ಚಾಲನೆ
11/09/2026, 22:36
ಮಂಗಳೂರು(reporterkarnataka.com): ಸೇಂಟ್ ಜೋಸೆಫ್ ವಿಶ್ವವಿದ್ಯಾಲಯದ ಸಂವಹನ ಮತ್ತು ಮಾಧ್ಯಮ ಅಧ್ಯಯನ ಶಾಲೆ ಆಯೋಜಿಸಿರುವ ಮಾಧ್ಯಮ, ವಿನ್ಯಾಸ ಮತ್ತು ಕಲಾ ಉತ್ಸವ ‘ಏಥೀರಿಯಾ 2026’ಕ್ಕೆ ವಿಶ್ವವಿದ್ಯಾಲಯದ ಮುಖ್ಯ ಸಭಾಂಗಣದಲ್ಲಿ ಚಾಲನೆ ನೀಡಲಾಯಿತು.
ಕನ್ನಡ ಚಿತ್ರರಂಗದ ನಟರಾದ ನಿರೂಪ್ ಭಂಡಾರಿ ಹಾಗೂ ಶಾನ್ವಿ ಶ್ರೀವಾಸ್ತವ ಅವರು ಉತ್ಸವಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಆರ್ಟಿಸ್ಟಿಕಾ, ಅಲ್ಯೂರಾ ಹಾಗೂ ರಶಸ್ ರಾಷ್ಟ್ರೀಯ ಚಲನಚಿತ್ರೋತ್ಸವಕ್ಕೂ ಚಾಲನೆ ನೀಡಲಾಯಿತು. ನಟರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಚಿತ್ರರಂಗದಲ್ಲಿನ ತಮ್ಮ ಅನುಭವ ಹಾಗೂ ಪಯಣವನ್ನು ಹಂಚಿಕೊಂಡರು.
ನಟ ನಿರೂಪ್ ಭಂಡಾರಿ ಅವರು ಎಂಜಿನಿಯರಿಂಗ್ ವ್ಯಾಸಂಗದ ಬಳಿಕ ಎಸ್ಎಪಿ ಲ್ಯಾಬ್ಸ್ನಲ್ಲಿ ಕೆಲಸ ಮಾಡುತ್ತಾ ನಟನೆಯತ್ತ ಆಸಕ್ತಿ ಬೆಳೆಸಿಕೊಂಡ ತಮ್ಮ ಪಯಣವನ್ನು ವಿವರಿಸಿದರು. ಕೃತಕ ಬುದ್ಧಿಮತ್ತೆಯ ಬಳಕೆ ಹೆಚ್ಚುತ್ತಿರುವ ಇಂದಿನ ಸಂದರ್ಭದಲ್ಲಿ ತಂತ್ರಜ್ಞಾನವು ಚಿತ್ರಕಥೆ ಹಾಗೂ ಕಥೆಯನ್ನು ರೂಪಿಸಲು ನೆರವಾಗಬಹುದು. ಆದರೆ ಮಾನವೀಯ ಭಾವನೆಗಳು ಮತ್ತು ಉತ್ತಮ ಬರವಣಿಗೆ ಚಿತ್ರವೊಂದರ ಯಶಸ್ಸಿಗೆ ಅತ್ಯಂತ ಮುಖ್ಯ ಎಂದು ಅವರು ಹೇಳಿದರು.

ಚಿತ್ರ ನಿರ್ಮಾಣ ಕೇವಲ ಕಲೆಯಲ್ಲ, ಅದರಲ್ಲಿ ವಾಣಿಜ್ಯ ಅಂಶವೂ ಇದೆ. ಆದ್ದರಿಂದ ಯುವ ಚಿತ್ರನಿರ್ಮಾಪಕರು ತಮ್ಮ ಮೊದಲ ಚಿತ್ರ ಮಾಡುವಾಗ ಸೃಜನಶೀಲತೆ ಮತ್ತು ವಾಣಿಜ್ಯ ಎರಡನ್ನೂ ಸಮನ್ವಯಗೊಳಿಸಬೇಕು ಎಂದು ಅವರು ಸಲಹೆ ನೀಡಿದರು.
ನಟಿ ಶಾನ್ವಿ ಶ್ರೀವಾಸ್ತವ ಅವರು ಸುಮಾರು 15ನೇ ವಯಸ್ಸಿನಲ್ಲೇ ನಟನಾ ಕ್ಷೇತ್ರಕ್ಕೆ ಪ್ರವೇಶಿಸಿದ ತಮ್ಮ ಸುದೀರ್ಘ ಪಯಣವನ್ನು ಹಂಚಿಕೊಂಡರು. ವಿವಿಧ ಭಾಷೆಗಳ ಚಿತ್ರಗಳಲ್ಲಿ ಕೆಲಸ ಮಾಡಿರುವ ಅವರು, ಚಿತ್ರರಂಗದ ಪಯಣ ಸವಾಲಿನದ್ದಾಗಿದ್ದರೂ ಅದೇ ವೇಳೆ ಸಂತಸದ ಅನುಭವವನ್ನೂ ನೀಡಿದೆ ಎಂದರು. ಯಶಸ್ಸಿನ ಸ್ಪರ್ಧೆಯಲ್ಲಿ ಓಡುವಾಗ ಕಲೆಯ ಮೇಲಿನ ಪ್ರೀತಿಯನ್ನು ಕಳೆದುಕೊಳ್ಳಬಾರದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಏಥೀರಿಯಾ 2026ರ ಅಂಗವಾಗಿ ನಟರ ಮುಂಬರುವ ‘ಅಮೆರಿಕಾ ಅಮೆರಿಕಾ 2’ ಚಿತ್ರದ ಪ್ರಚಾರವೂ ನಡೆಯಿತು. ಕನ್ನಡ ಚಿತ್ರರಂಗದ ಪ್ರಮುಖ ನಟರೊಂದಿಗೆ ಸಂವಾದ ನಡೆಸಿ, ಅವರ ಅನುಭವಗಳಿಂದ ಕಲಿಯಲು ವಿದ್ಯಾರ್ಥಿಗಳಿಗೆ ಈ ಉತ್ಸವ ಅವಕಾಶ ಕಲ್ಪಿಸಿತು.












