12:08 PM Friday11 - September 2026
ಬ್ರೇಕಿಂಗ್ ನ್ಯೂಸ್
ಬಹುರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೊ ದಾಖಲೆ ಸಾಧನೆ: 2025-26ನೇ ಸಾಲಿನಲ್ಲಿ 3,735 ಕೋಟಿ… ಮಹಿಳಾ ಉದ್ಯೋಗಿಗಳಿಗೆ ಕಾರ್ಪೊರೇಟ್ ಎನ್‌ಪಿಎಸ್: ಪೆನ್ಷನ್‌ ಬಜಾರ್ -ಉಬುಂಟು ಒಪ್ಪಂದ ಪುತ್ತೂರು ಶಾಸಕರ ಆರೋಪ | ಕೆಆರ್ ಐಡಿಎಲ್ ಸಂಸ್ಥೆಗೆ ಗುತ್ತಿಗೆ: ಉಸ್ತುವಾರಿ ಸಚಿವ… ಕ್ರೈಂ ಡೈರಿ | ಸೆರೆ ಸಿಕ್ಕ ‘ರಿಪ್ಪರ್ ಚಂದ್ರನ್’ ಎಂಬ ಸರಣಿ ಹಂತಕ:… ತುಮಕೂರು-ರಾಯದುರ್ಗ- ಚಿತ್ರದುರ್ಗ | 2027 ಡಿಸೆಂಬರ್ ಅಂತ್ಯಕ್ಕೆ ರೈಲು ಮಾರ್ಗ ಆರಂಭ ಕಸ್ತೂರಿ ರಂಗನ್ ವರದಿ ವಿರೋಧಿಸಿ ನವೆಂಬರ್ 16ರಿಂದ ತೀರ್ಥಹಳ್ಳಿ ಟು ಶಿವಮೊಗ್ಗ ಪಾದಯಾತ್ರೆ:… *ಡಿಸೆಂಬರ್ ಒಳಗೆ ಜಗತ್ತಿಗೆ ಗಂಡಾತರ: ‘ಅಷ್ಟಮಂಗಲ ಪ್ರಶ್ನೆ’ಯಲ್ಲಿ ಕಾಳಸರ್ಪ ದೋಷದ ಭವಿಷ್ಯ* ಚಾಮರಾಜನಗರ | ಒಂಟಿ ಸಲಗದ ಜತೆ ಪ್ರಾಣ ಪಣಕ್ಕಿಟ್ಟು ಸೆಲ್ಫಿ; ಬೈಕ್ ಸವಾರರ… ಸೆಪ್ಟೆಂಬರ್ 8 ಮಾತೆ ಮರಿಯಮ್ಮನವರ ಜನ್ಮದಿನ ಹಬ್ಬಕ್ಕೆ ಸಾರ್ವತ್ರಿಕ ರಜೆ ಘೋಷಿಸಲು ಆಗ್ರಹ ಕುಡಿದು ಗಾಡಿ ಚಲಾಯಿಸಿದ ಯುವಕನ ತಡೆಯಲೆತ್ನಿಸಿದ ಪೊಲೀಸ್ ಸಿಬ್ಬಂದಿ: ಖಾಕಿಗೆ ಕುಡುಕನಿಂದ ಅವಾಜ್;…

ಇತ್ತೀಚಿನ ಸುದ್ದಿ

ಬೆಟ್ಟ-ಗುಡ್ಡ ದಾಟಿ 20 ವರ್ಷದ ನಂತರ ಶತಾಯುಷಿ ತಾಯಿಯ ಭೇಟಿಯಾದ 85 ವರ್ಷದ ಪುತ್ರಿ!; ಅಜ್ಜಿ-ಮುತ್ತಜ್ಜಿ ಭಾವನಾತ್ಮಕ ಭೇಟಿಗೆ ಮೊಮ್ಮಕ್ಕಳು ಸಾಕ್ಷಿ!

11/09/2026, 12:06

ಮಂಗಳೂರು(reporterkarnataka.com): ತಾಯಿಗೆ 105 ವರ್ಷ, ಮಗಳಿಗೆ 85 ವರ್ಷ. ತಾಯಿಯನ್ನು ನೋಡಬೇಕೆಂಬ ಮಗಳ ಹಂಬಲ ಒಂದೆಡೆಯಾದರೆ, ವಯಸ್ಸು ಹಾಗೂ ದುರ್ಗಮ ದಾರಿ ಮತ್ತೊಂದೆಡೆ. ಹೀಗಾಗಿ ಎರಡು ದಶಕಗಳಿಂದ ತಾಯಿ- ಮಗಳ ಭೇಟಿ ಸಾಧ್ಯವಾಗಿರಲಿಲ್ಲ. ಕೊನೆಗೂ ಮೊಮ್ಮಕ್ಕಳು ಅಜ್ಜಿಯ ಆಸೆಯನ್ನು ಈಡೇರಿಸಿದರು.ಈ ಅಪರೂಪದ ಭಾವನಾತ್ಮಕ ಕ್ಷಣಕ್ಕೆ ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮದ ಮಕ್ಕಿ ಸಾಕ್ಷಿಯಾಯಿತು.


ಮಕ್ಕಿಯಲ್ಲಿ ಮಕ್ಕಳೊಂದಿಗೆ ವಾಸವಾಗಿರುವ 105 ವರ್ಷದ ಸೀತಮ್ಮ ಅವರಿಗೆ 11 ಮಂದಿ ಮಕ್ಕಳು. ಅವರಲ್ಲಿ ಹಿರಿಯ ಪುತ್ರಿ ಸುಶೀಲಾ ಅವರಿಗೆ 85 ವರ್ಷ. ಸೀತಮ್ಮ ಅವರ ಮನೆಗೆ ತೆರಳಲು ಇಂದಿಗೂ ಸರಿಯಾದ ರಸ್ತೆ ವ್ಯವಸ್ಥೆ ಇಲ್ಲ. ಫೋರ್‌ವೀಲ್‌ ಜೀಪಿನಲ್ಲಿ ದುರ್ಗಮ ಕಾಡಿನ ಕಲ್ಲು- ಮಣ್ಣಿನ ರಸ್ತೆಯಲ್ಲಿ ಸಾಗಿದ ಬಳಿಕ ಸುಮಾರು ಒಂದೂವರೆ ಕಿ.ಮೀ. ಬೆಟ್ಟ ಇಳಿದು, ಬಂಡೆ ಹತ್ತಿ, ಹೊಳೆ ದಾಟಿ ಕಾಲ್ನಡಿಗೆಯಲ್ಲಿ ಸಾಗಬೇಕು. ಇತ್ತ ಸುಶೀಲಾ ಅವರು ಮಿತ್ತಬಾಗಿಲು ಗ್ರಾಮದ ಫಗರೆ ಎಂಬಲ್ಲಿ ಮಕ್ಕಳೊಂದಿಗೆ ವಾಸವಾಗಿದ್ದಾರೆ. ದೂರದ ಕಾರಣದಿಂದ ತಾಯಿ- ಮಗಳ ಭೇಟಿ ಬರೋಬ್ಬರಿ 20 ವರ್ಷಗಳಿಂದ ಸಾಧ್ಯವಾಗಿರಲಿಲ್ಲ.
ಹಿಂದೆ ವರ್ಷಕ್ಕೊಮ್ಮೆಯಾದರೂ ತಾಯಿಯನ್ನು ನೋಡಲು ಬೆಟ್ಟ- ಗುಡ್ಡ ಹತ್ತಿ ಇಳಿದು ಹೋಗುತ್ತಿದ್ದ ಸುಶೀಲಾ ಅವರಿಗೆ ವಯಸ್ಸಾದಂತೆ ಆ ದಾರಿ ಕ್ರಮಿಸುವುದು ಕಷ್ಟವಾಯಿತು. ಅನಾರೋಗ್ಯವೂ ಕಾಡಿದ್ದರಿಂದ ತಾಯಿಯನ್ನು ನೋಡಬೇಕೆಂಬ ಆಸೆ ಇದ್ದರೂ ಕನಸಾಗಿಯೇ ಉಳಿದಿತ್ತು. ಮೊಮ್ಮಕ್ಕಳ ಬಳಿ ಆಗಾಗ ತಾಯಿಯನ್ನು ನೋಡಬೇಕೆಂಬ ಬಯಕೆ ವ್ಯಕ್ತಪಡಿಸುತ್ತಿದ್ದರು.ಕನಸು ನನಸಾಯಿತು
ಅಂತೂ ಆ ದಿನ ಬಂತು. ಸೆ.7ರಂದು ಬೆಳಗ್ಗೆ ಮೊಮ್ಮಕ್ಕಳು ಅಜ್ಜಿ ಸುಶೀಲಾ ಅವರನ್ನು ಮನೆಯಿಂದ ಕರೆದುಕೊಂಡು ಜೀಪಿನಲ್ಲಿ ಹೊರಟರು. ದಟ್ಟ ಕಾಡಿನ ಕಚ್ಚಾ ರಸ್ತೆಯಲ್ಲಿ ಜೀಪು ಸಾಗಿದರೂ ಮುತ್ತಜ್ಜಿ ಮನೆಗೆ ನೇರವಾಗಿ ವಾಹನ ತೆರಳಲು ಸಾಧ್ಯವಾಗಲಿಲ್ಲ. ಅಲ್ಲಿಂದ ಅಜ್ಜಿಯನ್ನು ನಿಧಾನವಾಗಿ ಕಾಡುದಾರಿಯಲ್ಲಿ ನಡೆಸಿಕೊಂಡು ಹೋಗಬೇಕಾಯಿತು. ಕಲ್ಲು, ಬಂಡೆ ಹತ್ತಿ, ಬೆಟ್ಟ ಇಳಿದು, ಹೊಳೆ ದಾಟಿ ಸಾಗಬೇಕಾಯಿತು.
ಕಾಡುದಾರಿಯಲ್ಲಿ ಸಾಗುವಾಗ ಜಿಗಣೆಗಳು ಅಜ್ಜಿಯ ಕಾಲಿಗೆ ಅಂಟಿ ರಕ್ತ ಹೀರಿದರೂ ತಾಯಿಯನ್ನು ಕಾಣುವ ತವಕದ ಮುಂದೆ ಆ ನೋವು ಅವರಿಗೆ ಲೆಕ್ಕವಾಗಲಿಲ್ಲ. ನೋವನ್ನು ತೋರಿಸದೆ ನಗುಮುಖದಲ್ಲೇ ಸಾಗಿದರು. ಇಪ್ಪತ್ತು ವರ್ಷಗಳ ಬಳಿಕ ತಾಯಿಯನ್ನು ಕಣ್ಣಾರೆ ಕಂಡ ಸುಶೀಲಾ ಅವರ ಕಣ್ಣಂಚು ಒದ್ದೆಯಾಯಿತು. ಆನಂದಭಾಷ್ಪ ಸುರಿಯಿತು. ಇತ್ತ ಶತಾಯುಷಿ ಸೀತಮ್ಮ ವಯಸ್ಸಿನ ಕಾರಣದಿಂದ ಮಗುವಿನಂತಾಗಿದ್ದು, ಹಿಂದಿನ ನೆನಪುಗಳು ಬಹುತೇಕ ಮಸುಕಾಗಿದ್ದವು. ಆದರೂ ಕರುಳಕುಡಿಯೊಂದಿಗಿನ ಆಪ್ತತೆಯ ಕ್ಷಣ ಎಲ್ಲರ ಮನ ತಟ್ಟಿತು.

ಇತ್ತೀಚಿನ ಸುದ್ದಿ

ಜಾಹೀರಾತು