ಇತ್ತೀಚಿನ ಸುದ್ದಿ
ಮುಲ್ಕಿ | ಕಿಲ್ಪಾಡಿ ಕೊರ್ದಬ್ಬು ದೈವಸ್ಥಾನ ಕಳವು ಪ್ರಕರಣ: ಕುಖ್ಯಾತ ಅಂತರ ಜಿಲ್ಲಾ ಆರೋಪಿಗಳ ಬಂಧನ
10/09/2026, 22:49
ಮಂಗಳೂರು (reporterkarnataka.com): ಮುಲ್ಕಿ ಕಿಲ್ಪಾಡಿ ಗ್ರಾಮದ ಕೊರ್ದಬ್ಬು ದೈವಸ್ಥಾನ ಕಳವು ಪ್ರಕರಣ ಸಂಬಂಧಿಸಿದಂತೆ ಕುಖ್ಯಾತ ಅಂತರ ಜಿಲ್ಲಾ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು,ಆರೋಪಿಗಳಿಂದ 17.20 ಲಕ್ಷ ಮೌಲ್ಯದ ಸ್ವತ್ತು ವಶಪಡಿಸಿಕೊಳ್ಳಲಾಗಿದೆ.
ಹೆಜಮಾಡಿ ಗ್ರಾಮ ಜಾಹೀದ್ ಸಿನಾನ್ (36),ಕಾರ್ಕಳ ತಾಲೂಕಿನ ನಿಟ್ಟೆಯ ಯಾಸೀನ್ (36),ದಾವಣಗೆರೆ ಛಲವಾದಿಕೇರಿಯ ಗೋಕುಲನಗರದ ಮಹಮದ್ ಅಫ್ರಿದಿ (26) ಹಾಗೂ ದಾವಣಗೆರೆ ಜಾಲಿನಗರದ ಎಸ್.ಕೆ. ಅಬ್ದುಲ್ ಜುಮ್ಮಾನ್ (26)ಆರೋಪಿಗಳು ಉಳ್ಳಾಲ ಮತ್ತು ಉಡುಪಿ ಜಿಲ್ಲೆಯ ಪಡುಬಿದ್ರೆ ದೇವಸ್ಥಾನದಲ್ಲಿ ನಡೆದ ಕಳವು ಪ್ರಕರಣದಲ್ಲಿಯೂ ಭಾಗಿಯಾಗಿದ್ದಾರೆ.
ಸೆ.1ರಂದು ಮಧ್ಯರಾತ್ರಿ, ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕಿಲ್ಪಾಡಿ ಗ್ರಾಮದ ಆದಿ ಕಿಲ್ಲಾಡಿ ಕೊರ್ದಬ್ಬು ದೈವಸ್ಥಾನದ ಗರ್ಭಗುಡಿಯ ಮುಖ್ಯ ದ್ವಾರಕ್ಕೆ ಹಾಕಲಾಗಿದ್ದ ಬೀಗವನ್ನು ತುಂಡರಿಸಿ, ಗರ್ಭಗುಡಿಯಲ್ಲಿದ್ದ ಬೆಲೆಬಾಳುವ ಕೊರ್ದಬ್ಬು ದೈವದ ಮೂರ್ತಿಗಳು ಹಾಗೂ ದೈವದ ಚಿನ್ನಾಭರಣಗಳನ್ನು ಕಳವು ಮಾಡಲಾಗಿತ್ತು. ಈ ಬಗ್ಗೆ ಮುಲ್ಕಿ ಠಾಣೆಯಲ್ಲಿ ಅ.ಕ್ರ 65/2026 ಕಲಂ 331(3), 331(4), 305 ಬಿ.ಎನ್.ಎಸ್ ರಂತೆ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಪತ್ತೆಯ ಕುರಿತು ವಿಶೇಷ ತಂಡವನ್ನು ರಚಿಸಿದ್ದು, ದಿನಾಂಕ 06-09-2026 ರಂದು ಆರೋಪಿ ಜಾಹೀದ್ ಸಿನಾನ್ ಮತ್ತು ಯಾಸೀನ್ ಎಂಬಾತನ್ನು ಮುಲ್ಕಿ ಕಾರ್ನಾಡು ಎಂಬಲ್ಲಿ ಹಾಗೂ ದಿನಾಂಕ 07-09-2026 ರಂದು ಆರೋಪಿ ಮಹಮದ್ ಅಫ್ರಿದಿ ಮತ್ತು ಎಸ್.ಕೆ. ಅಬ್ದುಲ್ ಜುಮ್ಮಾನ್ ಎಂಬಾತನನ್ನು ದಾವಣಗೆರೆಯಲ್ಲಿ ಪತ್ತೆಹಚ್ಚಿ ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿದ್ದರು.
ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ ಪೊಲೀಸ್ ಕಸ್ಟಡಿಗೆ ಪಡೆದುಕೊಂಡು ಆರೋಪಿಗಳಿಂದ ಕಳವು ಮಾಡಲಾದ ಸುಮಾರು 4 ಕೆ.ಜಿ. 521 ಗ್ರಾಂ ತೂಕದ ಬೆಳ್ಳಿ ಹಾಗೂ 34.820 ಗ್ರಾಂ ತೂಕದ ಚಿನ್ನ, ಒಟ್ಟು ಅಂದಾಜು ₹11,20,000/- ಮೌಲ್ಯದ ಚಿನ್ನಾಭರಣ/ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ, ಕೃತ್ಯಕ್ಕೆ ಬಳಸಿದ ಬೈಕ್ ಮತ್ತು ಕಾರು ಸೇರಿದಂತೆ ಸುಮಾರು ₹6,00,000/- ಮೌಲ್ಯದ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಹೀಗಾಗಿ, ಆರೋಪಿಗಳಿಂದ ಒಟ್ಟು ₹17,20,000/- ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳ ಪತ್ತೆಯಿಂದ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಲಾಪು ಶ್ರೀ ಮಹಾಲಕ್ಷ್ಮೀ ಮಹಾಗಣಪತಿ ದೇವಸ್ಥಾನದಲ್ಲಿ ನಡೆದ ಕಳವು ಪ್ರಕರಣ, ಅ.ಕ್ರ.154/2026, ಕಲಂ 331(1), 305 ಬಿಎನ್ಎಸ್, ಹಾಗೂ ಉಡುಪಿ ಜಿಲ್ಲೆಯ ಪಡುಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯ ಇನ್ನಾ ಗ್ರಾಮದ ವ್ಯಾಘ್ರ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ನಡೆದ ಕಳವು ಪ್ರಕರಣ, ಅ.ಕ್ರ.88/2026, ಕಲಂ 331(4), 305 ಬಿಎನ್ಎಸ್ ಪ್ರಕರಣಗಳು ಸಹ ಪತ್ತೆಯಾಗಿರುತ್ತವೆ.




ಪ್ರಕರಣದ 1ನೇ ಆರೋಪಿಯಾದ ಜಾಹೀದ್ ಸಿನಾನ್ ಎಂಬಾತನ ವಿರುದ್ಧ ಈ ಹಿಂದೆ ಉಡುಪಿ, ಶಿವಮೊಗ್ಗ, ದಕ್ಷಿಣ ಕನ್ನಡ, ದಾವಣಗೆರೆ ಹಾಗೂ ಮಂಗಳೂರು ನಗರ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 18 ಪ್ರಕರಣಗಳು ದಾಖಲಾಗಿರುವುದು ತನಿಖೆಯಿಂದ ತಿಳಿದುಬಂದಿದೆ.
ಈ ಪತ್ತೆ ಕಾರ್ಯದಲ್ಲಿ ಮಂ.ಉತ್ತರ ಉಪ ವಿಭಾಗದ ಎಸಿಪಿ ಶೀಕಾಂತ್.ಕೆ ರವರ ನೇತೃತ್ವದಲ್ಲಿ ಸುರತ್ಕಲ್ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಪ್ರಮೋದ್ ಕುಮಾರ್, ಮುಲ್ಕಿ ಠಾಣಾ ಪಿ.ಎಸ್.ಐ ರಾಘವೇಂದ್ರ ನಾಯಕ್ ಹಾಗೂ ಮುಲ್ಕಿ ಪೊಲೀಸ್ ಠಾಣೆಯ ಸಿಬ್ಬಂದಿಯವರು ಪ್ರಕರಣವನ್ನು ಯಶಸ್ವಿಯಾಗಿ ಪತ್ತೆಹಚ್ಚಿ ಆರೋಪಿಗಳನ್ನು ಬಂಧಿಸಿ, ಕಳವು ಮಾಡಲಾದ ಹಾಗೂ ಕೃತ್ಯಕ್ಕೆ ಬಳಸಿದ ಸ್ವತ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಶ್ರಮಿಸಿದ್ದಾರೆ.












