ಇತ್ತೀಚಿನ ಸುದ್ದಿ
ಬಿಎಂಟಿಸಿ ಕಂಡಕ್ಟರ್ ಟಿಕೆಟ್ ಬ್ಯಾಗ್ ಕದ್ದ ಚಾಲಾಕಿ ಮಹಿಳೆ!: ನೋಡೋಕೆ ಸೈಲೆಂಟು, ಮಾಡಿದ ಕೆಲಸ ವೈಲೆಂಟೂ!
16/07/2026, 10:44
ಬೆಂಗಳೂರು(reporterkarnataka.com): ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಬಸ್ಗಳಲ್ಲಿ ಸರಗಳ್ಳರು, ಜೇಬುಗಳ್ಳರನ್ನು ನೋಡಿದ್ದೇವೆ. ಟಿಕೆಟ್ ಪಡೆಯದೇ ಹತ್ತಿಳಿದವರನ್ನು ನೋಡಿರುತ್ತೇವೆ. ಆದರೆ ಇಲ್ಲೊಬ್ಬ ಚಾಲಾಕಿ ಮಹಿಳೆ ಬಿಎಂಟಿ ಬಸ್ ಕಂಡಕ್ಟರ್ ಟಿಕೆಟ್ ಬ್ಯಾಗ್ನ್ನೇ ಕದ್ದು ತಗಲಾಕಿಕೊಂಡ ಘಟನೆ ಬೆಳಕಿಗೆ ಬಂದಿದೆ.
ಬಸ್ ಚಾಲಕ ಮಾತ್ರ ಪೊಲೀಸರು ಬರುವವರೆಗೂ ಬಸ್ ಬಾಗಿಲು ತೆಗೆಯದೇ ರೆಡ್ ಆಗಿ ಮಹಿಳೆ ಹಿಡಿದಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ‘ಡ್ಯೂಟಿ ಕಂಡಕ್ಟರ್ ಹೊಟ್ಟೆ ಮೇಲ್ಯಾಕೆ ಹೊಡಿತೀರಾ!’ ಎಂದು ನೆಟ್ಟಿಗರು ಛೀಮಾರಿ ಹಾಕುತ್ತಿದ್ದಾರೆ.

ಬಸ್ ಕಂಡಕ್ಟರ್ ಟಿಕೆಟ್ ಬ್ಯಾಗ್ ಕದ್ದು ರೆಡ್ ಹ್ಯಾಂಡ್ ಆಗಿ ತಗಲಾಕಿಕೊಂಡ ಈ ಮಧ್ಯವಯಸ್ಸಿನ ಮಹಿಳೆ ನೋಡಲು ಸಾಮಾನ್ಯಳಂತೆ ಕಾಣುತ್ತಾಳೆ. ‘ಮಕ್ಕಳಿದ್ದಾರೆ ನನ್ನ ಬಿಟ್ಟು ಬಿಡಿ’ ಎಂದು ಬೇಡಿಕೊಳ್ಳುತ್ತಾಳೆ. ಈಕೆ ಮಾಡಿದ ಕೆಲಸಕ್ಕೆ ಬಸ್ ಚಾಲಕ, ನಿರ್ವಾಹಕರಿಬ್ಬರು ಕೆಲಸ ಕುತ್ತು ಬರುವುದಿತ್ತು. ಅದೃಷ್ಟವಶಾತ್ ಕಳ್ಳತನ ಸಾಬೀತಾಗುತ್ತಿದ್ದಂತೆ ಪೊಲೀಸರನ್ನು ಕರೆಸಲಾಗಿದೆ. ನಿರ್ವಾಹಕ ವಿಡಿಯೋ ಮಾಡಿದ್ದು, ಇಂಟರ್ನೆಟ್ನಲ್ಲಿ ವೈರಲ್ ಆಗುತ್ತಿದೆ.
ಬಿಎಂಟಿಸಿ ಸೇರಿದಂತೆ ಇತರ ಬಸ್ಗಳಲ್ಲೂ ನಿಮ್ಮ ಲಗೇಜಿಗೆ ನೀವೆ ಜವಾಬ್ದಾರರು, ಕಳ್ಳರಿದ್ದಾರೆ ಎಚ್ಚರಿಕೆ ಸಂದೇಶ ನೋಡಿರುತ್ತೇವೆ. ಜನ ಸಾಮಾನ್ಯರಂತೆ ವರ್ತಿಸಿ ಸಹ ಪ್ರಯಾಣಿಕ ಮೊಬೈಲ್, ಹಣ, ಪರ್ಸ್, ಬೆಲೆ ಬಾಳುವ ವಸ್ತುಗಳನ್ನು ಕದಿಯುವವರನ್ನು ನೋಡಿದ್ದೇವೆ. ಆದರೆ ಈ ಮಹಿಳೆ ಮಾತ್ರ ಕಂಡಕ್ಟರ್ ಟಿಕೆಟ್ ಬ್ಯಾಗ್ನಲ್ಲಿ ಹಣ ಇದೆ ಎಂದು ತಿಳಿದು ಅದನ್ನು ಎಗರಿಸಿ ಪರಾರಿಯಾಗಲು ಯತ್ನಿಸಿ ಸಿಕ್ಕಿಬಿದ್ದಿದ್ದಾಳೆ.
*ಬಸ್ ಸೈಡ್ಗೆ ಹಾಕಿದ ಚಾಲಕ, ವಿಡಿಯೋದಲ್ಲಿ ಏನಿದೆ?*
ವಿಡಿಯೋದಲ್ಲಿ, ಕಳ್ಳತನ ಸಾಬೀತಾಗುತ್ತಿದ್ದಂತೆ ಚಾಲಕ ಬಸ್ ರಸ್ತೆಗೆ ಬದಿಗೆ ನಿಲ್ಲಿಸಿದ್ದಾರೆ. ಮಹಿಳೆಯನ್ನು ತಡೆದ ಬಸ್ ಚಾಲಕ, ನಿರ್ವಾಹಕರು ಬಾಗಿಲು ತೆರೆಯದೇ ಇಲ್ಲಿಯೇ ನಿಲ್ಲುವಂತೆ ಹೇಳುತ್ತಾರೆ. ಈ ವೇಳೆ ಪ್ರಯಾಣಿಕರೆಲ್ಲರು ಬಸ್ನಿಂದ ಕೆಳೆಗೆ ಇಳಿದಿರುವುದು ಕಾಣಿಸುತ್ತದೆ. ಎರಡು ಕಡೆಯ ಬಾಗಿಲು ಬಳಿ ಹೋಗಿ ತೆರೆಯುವಂತೆ ಕಳ್ಳತನ ಮಾಡಿದ ಮಹಿಳೆ ಕೇಳುತ್ತಾರೆ. ಪ್ರಶ್ನಿಸಿದ ಬಸ್ ಸಿಬ್ಬಂದಿಗೆ ಆವಾಜ್ ಸಹ ಹಾಕಿದ್ದಾಳೆ. ಮಹಿಳೆ ಪೊಲೀಸ್ ಸಿಬ್ಬಂದಿ ಬಸ್ ಒಳಬಂದು ಮಹಿಳೆಗೆ ಚಳಿ ಬಿಡಿಸಿದ್ದಾರೆ. ಹೆಗಲಿಗೊಂದು ವ್ಯಾನಿಟಿ ಬ್ಯಾಗ್, ಕೈಯಲ್ಲೊಂದು ಚೀಲ ಹಿಡಿದ್ದ ಮಹಿಳೆಗೆ ತಾನು ಕದ್ದಿದ್ದ ಟಿಕೆಟ್ ಬ್ಯಾಗ್ ಅನ್ನು ಕೈಲಿದ್ದ ಚೀಲದಿಂದ ತೆಗೆಯುವುದು ವಿಡಿಯೋದಲ್ಲಿ ಕಾಣಿಸುತ್ತದೆ. ಬ್ಯಾಗ್ ತೆಗೆದಿದ್ದೇ ತಡ ಏನು ಗೊತ್ತಿಲ್ಲದಂತೆ, ‘ಇದು ನನ್ನದಲ್ಲ ಎಂದು ವರಸೆ ಬದಲಿಸಿದ್ದಾಳೆ’. ತನ್ನ ಕಳ್ಳತನ ಬಯಲಾಗುತ್ತಿದ್ದಂತೆ ನಾಟಕವಾಡಲು, ಮುಗ್ಧೆಯ ರೀತಿ ವರ್ತಿಸುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಇದೆಕ್ಕೆಲ್ಲ ಬಗ್ಗದ ಪೊಲೀಸ್ ಹಾಗೂ ಬಸ್ ಸಿಬ್ಬಂದಿ ಪ್ರಕರಣ ದಾಖಲಿಸುತ್ತೇನೆ. ಪೊಲೀಸ್ ಠಾಣೆಗೆ ಬಸ್ ಒಯ್ಯುವುದಾಗಿ ಹೆದರಿಸಿದ್ದಾರೆ. ಇದನ್ನು ನೋಡಿ ಚಡಪಡಿಸಿದಂತೆ ಕಾಣುವ ಮಹಿಳೆ ‘ಮನೇಲಿ ಮಕ್ಕಳಿದ್ದಾರೆ. ಹೋಗಬೇಕು ಬಾಗಿಲು ತೆರೆಯಿರಿ’ ಎಂದು ಕೇಳಿಕೊಳ್ಳುತ್ತಾಳೆ. ಬಳಿಕ ಮಹಿಳಾ ಪೊಲೀಸ್ ಸಿಬ್ಬಂದಿ ಬಿರುಸಿನ ಮಾತಿಗೆ ಮಹಿಳೆ ಮೌನವಾಗುತ್ತಾಳೆ. ‘ಈಕೆ ಬ್ಯಾಗ್ ಪರಿಶೀಲಿಸಿ, ಟಿಕೆಟ್ ಬ್ಯಾಗ್ ಅನ್ನು ತನ್ನ ಚೀಲದಲ್ಲಿ ಇಟ್ಟುಕೊಳ್ಳುವುದನ್ನು ನೋಡಿದ್ದೇನೆ ‘ಎಂದು ಇನ್ನೊಬ್ಬ ಸಹ ಮಹಿಳಾ ಪ್ರಯಾಣಿಕರು ಸಾಕ್ಷಿ ಹೇಳಿರುವುದು ವಿಡಿಯೋದಲ್ಲಿ ಕಾಣಿಸುತ್ತದೆ.
*ನಾವ್ ಕೆಲಸ ಕಳೆದುಕೊಳ್ಳಬೇಕಾ? ಕಂಡಕ್ಟರ್ ಆಕ್ರೋಶ*
ಯಾವುದೇ ಕಾರಣಕ್ಕೂ ಬಾಗಿಲು ತೆರೆಯಬೇಡಿ. ಠಾಣೆಗೆ ಹೋದ್ರೆ ಇವಳಿಗೆ ಬುದ್ಧಿ ಬರುತ್ತೆ. ನೀವು ಮಾಡಿರುವ ಘನಂದಾರಿ ಕೆಲಸಕ್ಕೆ ಸಾಕ್ಷಿ ಇದೆ. ಬಸ್ನಲ್ಲಿದ್ದ ಇತರ ಪ್ರಯಾಣಿಕರು ಕಳ್ಳತನ ನೋಡಿದ್ದಾರೆ. ನಿನ್ನಿಂದ ಮಕ್ಕಳು, ಮರಿ ಇರುವ ನಾವೆಲ್ಲ ಕೆಲಸ ಕಳೆದುಕೊಳ್ಳಬೇಕಾ? ಎಂದು ಕಂಡಕ್ಟರ್ ಆಕ್ರೋಶದಿಂದ ಮಾತನಾಡಿದ್ದಾರೆ.













