ಇತ್ತೀಚಿನ ಸುದ್ದಿ
ಬಗೆಹರಿಯದ ದಸರಾ ವಿವಾದ | ಪ್ರಮೋದಾದೇವಿ ಪತ್ರಕ್ಕೆ ಪೊಲೀಸ್ ಕಮಿಷನರ್ ಕೌಂಟರ್: ಸುದೀರ್ಘ ಪತ್ರ ಬರೆದ ಸೀಮಾ ಲಾಟ್ಕರ್
29/10/2026, 14:23
ಮೈಸೂರು(reporterkarnataka.com): ದಸರಾ ಮುಗಿದು ಒಂದು ವಾರಕ್ಕಿಂತ ಹೆಚ್ಚಾಯ್ತು. ಆದ್ರೂ ಕೂಡಾ ದಸರಾ ಸುತ್ತ ಸುತ್ತಿಕೊಂಡ ಗೊಂದಲಗಳು ಇನ್ನೂ ಕಡಿಮೆ ಆಗ್ತಿಲ್ಲ. ದಸರಾದಲ್ಲಿ ಪೊಲೀಸರು ದರ್ಪ ಮೆರೆದಿದ್ರು. ಸಚಿವರಿಗೇ ಕವಡೆ ಕಾಸಿನ ಕಿಮ್ಮತ್ತು ಕೊಡ್ಲಿಲ್ಲ ಅನ್ನೋ ಆರೋಪ ಕೇಳಿ ಬಂದಿತ್ತು. ಇದರ ಬೆನ್ನಲ್ಲೇ ರಾಜಮಾತೆ ಪ್ರಮೋದಾದೇವಿ ಸಿಡಿದೆದ್ದಿದ್ದಾರೆ. ಸರ್ಕಾರಕ್ಕೆ ನಾಲ್ಕು ಪುಟಗಳ ಸುದೀರ್ಘ ಪತ್ರ ಬರೆದು ಅಸಮಾಧಾನ ಹೊರ ಹಾಕಿದ್ರು. ಇದಕ್ಕೆ ಯತೀಂದ್ರ ಕೊಟ್ಟ ಹೇಳಿಕೆ ಉರಿಯೋ ಬೆಂಕಿಗೆ ತುಪ್ಪ ಸುರಿದಿದೆ.. ಮೈಸೂರು ಅರಮನೆ ಹಾಗೂ ಅಂಬಾರಿ ಸುತ್ತ ವಿವಾದ ಹೊತ್ತಿಕೊಂಡಿದೆ.
ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರು ಸರ್ಕಾರಕ್ಕೆ ಸುದೀರ್ಘ ಪತ್ರವೊಂದನ್ನ ಬರೆದಿದ್ರು. ಇದ್ರಲ್ಲಿ ದಸರಾ ವೇಳೆ ಆದ ಎಡವಟ್ಟುಗಳನ್ನ ಉಲ್ಲೇಖಿಸಿ ಸರ್ಕಾರದ ವಿರುದ್ಧ ಅಸಮಾಧಾನ ಹೊರ ಹಾಕಿದ್ರು. ನಮ್ಮ ಸಹಕಾರವನ್ನ ಸರ್ಕಾರ ಗಂಭೀರವಾಗಿ ಪರಿಗಣಿಸಲಿಲ್ಲ. ರಾಜಮನೆತನದವರಿಗೆ ಮೀಸಲಿಟ್ಟಿದ್ದ ಜಾಗ ಹಾಗೂ ಪಾರ್ಕಿಂಗ್ ಜಾಗ ಸೇರಿದಂತೆ ಎಲ್ಲವನ್ನೂ ಅತಿಕ್ರಮಣ ಮಾಡಿದ್ರು. ಅಂಬಾರಿ ಸುತ್ತ ಅನಧಿಕೃತ ವ್ಯಕ್ತಿಗಳು ಓಡಾಟ ನಡೆಸಿದ್ರು. ಚಿನ್ನದ ಅಂಬಾರಿಯ ಸೆಲ್ಫಿ ತೆಗೆದುಕೊಳ್ಳೋದಕ್ಕೆ ಪೊಲೀಸರು ಹಾಗೂ ಅವ್ರ ಕುಟುಂಬಸ್ಥರು ಮುಗಿ ಬಿದ್ದಿದ್ರು. ಅಂಬಾರಿ ಆನೆಯ ಬಗ್ಗೆ ಕೊನೇ ಗಳಿಗೆಯಲ್ಲಿ ನಮಗೆ ಹೇಳಿದ್ರು. 45 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಈ ರೀತಿಯಾಗಿದೆ ಅಂತಾ ಆಕ್ರೋಶ ವ್ಯಕ್ತಪಡಿಸಿದ್ರು.













