ಇತ್ತೀಚಿನ ಸುದ್ದಿ
ಚಿಕ್ಕಮಗಳೂರು: ಕೈ ಕೈ ಮಿಲಾಯಿಸುವ ಮಟ್ಟಿಗೆ ತಲುಪಿದ ಕಾಂಗ್ರೆಸ್ – ಬಿಜೆಪಿ ಕಾರ್ಯಕರ್ತರ ಗಲಾಟೆ
22/05/2026, 22:39
ಚಿಕ್ಕಮಗಳೂರು(reporterkarnataka.com): ಅಭಿವೃದ್ಧಿ ಕೆಲಸಗಳ ಕ್ರೆಡಿಟ್ ಪಡೆಯುವ ವಿಚಾರವಾಗಿ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಭಾರೀ ಹೈಡ್ರಾಮಾ ನಡೆದಿದ್ದು, ಇದು ಕೈ ಕೈ ಮಿಲಾಯಿಸುವ ಮಟ್ಟಿಗೆ ತಲುಪಿತ್ತು.
ನೂರಾರು ಪೊಲೀಸರ ಸಮ್ಮುಖದಲ್ಲೇ ಉಭಯ ಪಕ್ಷಗಳ ಕಾರ್ಯಕರ್ತರು ಸರಿಸಮನಾಗಿ ಸೇರಿದ ಘಟನೆ ನಡೆದಿದೆ. ರಾಂಗುರ ಟು ಕೆ.ಆರ್.ಪೇಟೆ ಮಾರ್ಗದ ರಸ್ತೆ ಕಾಮಗಾರಿ ವೀಕ್ಷಣೆಗಾಗಿ ಮಾಜಿ ಶಾಸಕ ಸಿ.ಟಿ.ರವಿ ಅವರು ಭೇಟಿ ನೀಡಿದ್ದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಕಾಂಗ್ರೆಸ್ ಕಾರ್ಯಕರ್ತರು ಸಿ.ಟಿ.ರವಿ ವಿರುದ್ಧ ಧಿಕ್ಕಾರ ಕೂಗಿ, ಕಪ್ಪು ಬಾವುಟ ಪ್ರದರ್ಶಿಸಲು ಯತ್ನಿಸಿದರು. ಇದರಿಂದ ಆಕ್ರೋಶಗೊಂಡ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ತಿರುಗಿಬಿದ್ದಿದ್ದಾರೆ.
ಗಲಾಟೆ ತಾರಕಕ್ಕೇರಿದಾಗ ಕಾಂಗ್ರೆಸ್ ಕಾರ್ಯಕರ್ತರು ಸಿ.ಟಿ.ರವಿ ಅವರ ಮೇಲೆ ಹಲ್ಲೆ ನಡೆಸಲು ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ ಕಮಲ ಪಾಳಯದ ಕಾರ್ಯಕರ್ತರು ಸಿ.ಟಿ.ರವಿ ಸುತ್ತ ರಕ್ಷಣಾ ಕೋಟೆಯಂತೆ ನಿಂತು, ಅವರನ್ನು ಮುಟ್ಟದಂತೆ ತಡೆದಿದ್ದಾರೆ. ಈ ನೂಕಾಟ-ತಳ್ಳಾಟದ ಮಧ್ಯೆಯೂ ಸಿ.ಟಿ.ರವಿ ಅವರು ಸ್ಥಳದಿಂದ ಕದಲದೇ, ರಸ್ತೆ ಮಧ್ಯೆಯೇ ಕುಳಿತು ಪ್ರತಿಭಟನೆ ನಡೆಸಿದರು. “ಬಾರೋ… ಬಾ… ಹೊಡೀ…” ಎಂದು ಎದುರಾಳಿಗಳಿಗೆ ಸವಾಲು ಎಸೆದಿದ್ದಾರೆ.












