8:55 AM Friday2 - October 2026
ಬ್ರೇಕಿಂಗ್ ನ್ಯೂಸ್
ಉಸ್ತುವಾರಿ ಸಚಿವ ಖಾದರ್ ಮಧ್ಯಸ್ಥಿಕೆ: ಎಂಆರ್‌ಪಿಎಲ್ ಅವಘಡದಲ್ಲಿ ಮೃತಪಟ್ಟ ನೌಕರನ ಕುಟುಂಬಕ್ಕೆ 1.20… ಬೆಂಗಳೂರು | ಅಕ್ಟೋಬರ್ 2ರಂದು ಪ್ರಾಜೆಕ್ಟ್ ಶೆಲ್ಟರ್‌ನಿಂದ ‘ಅಸಹಾಯಕರಿಗೆ ಸೂರು’ ಅಭಿಯಾನಕ್ಕೆ 3… ಮೂಡಿಗೆರೆ | ನಿಶ್ಚಿತಾರ್ಥವಾದ ಯುವಕ ಆತ್ಮಹತ್ಯೆ: ಮುಂದಿನ ತಿಂಗಳು 25ಕ್ಕೆ ಮದುವೆ ಇತ್ತು ನೈಸ್ ಯೋಜನೆ | 1995ರಿಂದ ಯೋಜನೆ ನಡೆದು ಬಂದ ಹಾದಿಯನ್ನು ಜನರ ಮುಂದಿಡುತ್ತೇನೆ:… ಕಾಡಿನಲ್ಲಿ ಕಾದಾಟದಿಂದ ತೀವ್ರ ಗಾಯ | ದುಬಾರೆ ಶಿಬಿರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಂಡಾನೆ… ದೋಷಪೂರಿತ ಎಸ್‌ಐಆರ್ ಪ್ರಕ್ರಿಯೆ ಸ್ಥಗಿತಗೊಳಿಸಿ: ನಟ ಪ್ರಕಾಶ್ ರೈ ಆಗ್ರಹ ಜ್ಞಾನೇಶ್ ಕುಮಾರ್ ಅವರನ್ನು ತಕ್ಷಣ ಹುದ್ದೆಯಿಂದ ವಜಾಗೊಳಿಸಿ ಬಂಧಿಸಿ: ಕಾಂಗ್ರೆಸ್ ಪಾದಯಾತ್ರೆಯಲ್ಲಿ ಆಗ್ರಹ ಖಾಸಗಿ ಆಸ್ಪತ್ರೆ ಕೈಚೆಲ್ಲಿದ ಪ್ರಕರಣ: ಲೇಡೀಗೋಶನ್ ನಲ್ಲಿ ಪುನರ್ಜನ್ಮ ಪಡೆದ ಗರ್ಭಿಣಿ ಮಹಿಳೆ;… ಸೈಬರ್ ವಂಚನೆಗೆ ಬ್ರೇಕ್: 9,840 ಕೋಟಿ ಸ್ಪ್ಯಾಮ್ ಕರೆ ಪತ್ತೆಹಚ್ಚಿದ ಏರ್‌ಟೆಲ್ ಮಡಿಕೇರಿ ಮತ್ತು ಕುಶಾಲನಗರ ತಾಲೂಕು ಬರಪೀಡಿತ ಎಂದು ಘೋಷಣೆ: ಶಾಸಕ ಡಾ.ಮಂತರ್ ಗೌಡ…

ಇತ್ತೀಚಿನ ಸುದ್ದಿ

ಮಂಗಳೂರು | ಬಾವಿಗಳಲ್ಲಿ ಉಕ್ಕಿ ಬಂತು ಡೀಸೆಲ್; ನೀರು ಕುಡಿಯಲಾಗದೆ ಕಾವೂರು ನಿವಾಸಿಗಳು ಕಂಗಾಲು

19/05/2026, 15:42

ಮಂಗಳೂರು(reporterkarnataka.com): ಮಧ್ಯಪ್ರಾಚ್ಯ ಸಂಘರ್ಷದಿಂದಾಗಿ ತೈಲ ಬಿಕ್ಕಟ್ಟಿನ ಆತಂಕದ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಬಂದರು ನಗರಿ ಮಂಗಳೂರಿನಲ್ಲಿ ಅತ್ಯಂತ ವಿಲಕ್ಷಣ ಹಾಗೂ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ನಗರದ ಕಾವೂರು ಎಂಬ ಪ್ರದೇಶದ ಮೂರು ಮನೆಗಳ ಬಾವಿಗಳಲ್ಲಿ ದಿಢೀರನೆ ನೀರಿನೊಂದಿಗೆ ಡೀಸೆಲ್ ಉಕ್ಕಿ ಬರುತ್ತಿದ್ದು, ಸ್ಥಳೀಯ ನಿವಾಸಿಗಳು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಬಾವಿಯ ನೀರಿನಲ್ಲಿ ಬೇರೆ ಯಾವುದೇ ಕಲ್ಮಶಗಳಲ್ಲ, ಬರೋಬ್ಬರಿ ಶೇ 28ರಷ್ಟು ಶುದ್ಧ ಡೀಸೆಲ್ ಅಂಶ ಇರುವುದು ಪ್ರಯೋಗಾಲಯದ ತಪಾಸಣೆಯಲ್ಲಿ ದೃಢಪಟ್ಟಿದ್ದು, ಈ ವಿಚಿತ್ರ ವಿದ್ಯಮಾನ ಇಡೀ ಕರಾವಳಿ ಭಾಗದಲ್ಲಿ ಭಾರೀ ಸಂಚಲನ ಮೂಡಿಸಿದೆ.

*ಮುಖ್ಯಾಂಶಗಳು;*
ಬಾವಿ ನೀರಿನ ಮಾದರಿ ಪರೀಕ್ಷಿಸಿದಾಗ ಶೇಕಡಾ 28ರಷ್ಟು ಡೀಸೆಲ್ ಮಿಶ್ರಣವಾಗಿರುವುದು ದೃಢ.
ಬಾವಿಯಿಂದ ಮೇಲೆತ್ತಿದ ನೀರಿಗೆ ಕಾಗದವನ್ನು ಅದ್ದಿ ಬೆಂಕಿ ಹಚ್ಚಿದರೆ ಅದು ತಕ್ಷಣವೇ ಭುಗಿಲನೆ ಉರಿಯುತ್ತಿದೆ.
ಕಾವೂರು ಸುತ್ತಮುತ್ತಲಿನ ಅಂತರ್ಜಲ ಮೂಲಗಳು ವಿಷವಾಗುವ ಆತಂಕ.

*ಬಂಕ್‌ನಿಂದ ಸೋರಿಕೆ ಶಂಕೆ: ಅಧಿಕಾರಿಗಳ ನಿರ್ಲಕ್ಷ್ಯ*
ಬಾವಿಯ ನೀರನ್ನು ಎಷ್ಟು ಬಾರಿ ಮೋಟಾರ್ ಹಾಕಿ ಪೂರ್ತಿ ಖಾಲಿ ಮಾಡಿದರೂ ಸಹ, ಮತ್ತೆ ಜಿನುಗುವ ನೀರಿನೊಂದಿಗೆ ಡೀಸೆಲ್‌ನ ದಪ್ಪನೆಯ ಪದರ ಮೇಲೇಳುತ್ತಲೇ ಇದೆ. ಇದರಿಂದಾಗಿ ಕಾವೂರಿನ ಈ ಕುಟುಂಬಗಳಿಗೆ ಕುಡಿಯುವ ನೀರು ಇರಲಿ, ಕನಿಷ್ಠ ಮನೆ ಬಳಕೆ ಅಥವಾ ಪಾತ್ರೆ ತೊಳೆಯಲೂ ನೀರಿಲ್ಲದಂತಾಗಿದೆ. ಮನೆಗಳ ಅತ್ಯಂತ ಸಮೀಪದಲ್ಲೇ ಪೆಟ್ರೋಲ್ ಬಂಕ್‌ ಒಂದಿದ್ದು, ಅದರ ಅಂಡರ್‌ಗ್ರೌಂಡ್ ಟ್ಯಾಂಕ್‌ನಿಂದಲೇ ಡೀಸೆಲ್ ಲೀಕ್ ಆಗಿ ಅಂತರ್ಜಲ ಸೇರಿರಬಹುದು ಎಂದು ಸ್ಥಳೀಯರು ಶಂಕಿಸಿದ್ದಾರೆ.
ಆದರೆ, ಈ ಆರೋಪವನ್ನು ತಳ್ಳಿಹಾಕಿರುವ ಪೆಟ್ರೋಲ್ ಬಂಕ್ ಮಾಲೀಕರು ಮತ್ತು ಸಿಬ್ಬಂದಿ, ‘ನಮ್ಮ ಡೀಸೆಲ್ ಸ್ಟಾಕ್‌ನಲ್ಲಿ ಯಾವುದೇ ವ್ಯತ್ಯಾಸ ಬಂದಿಲ್ಲ, ಸೋರಿಕೆಯೂ ಆಗುತ್ತಿಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ. ಇತ್ತ ಬಾವಿ ನೀರು ಬಳಕೆಗೆ ಯೋಗ್ಯವಲ್ಲ ಎಂದು ವರದಿ ಬಂದಿದ್ದರೂ, ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲಿಸುವ ಸೌಜನ್ಯ ತೋರಿಲ್ಲ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಈ ರಹಸ್ಯ ಸೋರಿಕೆ ಹೇಗೆ ಆಗುತ್ತಿದೆ ಎಂಬುದನ್ನು ತಕ್ಷಣವೇ ಪತ್ತೆ ಹಚ್ಚಿ, ಇಡೀ ಪ್ರದೇಶದ ಅಂತರ್ಜಲ ಕಲುಷಿತಗೊಳ್ಳುವುದನ್ನು ತಡೆಯಬೇಕೆಂದು ಕಾವೂರು ನಿವಾಸಿಗಳು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

*’ಟ್ಯಾಂಕರ್ ನೀರೇ ನಮಗೆ ಆಸರೆ, ದಯವಿಟ್ಟು ನೆರವಿಗೆ ಬನ್ನಿ’: ಸಂತ್ರಸ್ತ ಸದಾಶಿವ ಅಳಲು*
ಬಾವಿ ನೀರಿನಲ್ಲಿ ಡೀಸೆಲ್ ಪತ್ತೆಯಾಗಿರುವ ಕುರಿತು ಕಾವೂರಿನ ಸಂತ್ರಸ್ತರಾದ ಸದಾಶಿವ ಎಂಬವರು ‘ಮಾತನಾಡಿ ಅಸಹಾಯಕತೆ ಮತ್ತು ಆಕ್ರೋಶ ಹೊರಹಾಕಿದ್ದಾರೆ. ‘ಬಾವಿಯಿಂದ ನೀರು ಸೇದುವಾಗಲೇ ಅದರಲ್ಲಿ ಡೀಸೆಲ್ ಮಿಕ್ಸ್ ಆಗಿರುವುದು ನಮಗೆ ಮೊದಲ ಬಾರಿಗೆ ಗೊತ್ತಾಯಿತು. ಬಳಸುವಾಗ ತೀವ್ರವಾದ ವಾಸನೆ ಬರುತ್ತಿತ್ತು. ಬಾವಿಯ ನೀರನ್ನು ಪೂರ್ತಿಯಾಗಿ ಖಾಲಿ ಮಾಡಿಸಿ ಕ್ಲೀನ್ ಮಾಡಿಸಿದರೂ ಸಹ ಮತ್ತೆ ಡೀಸೆಲ್ ಬರುತ್ತಲೇ ಇದೆ. ಈ ಆಯಿಲ್ ಭೂಮಿಯ ಒಳಗಿನಿಂದ ಎಲ್ಲಿಂದ ಜಿನುಗುತ್ತಿದೆ ಎಂಬುದು ನಮಗೆ ತಿಳಿಯುತ್ತಿಲ್ಲ. ಇದರಿಂದಾಗಿ ನಮಗೆ ದಿನಬಳಕೆಯ ನೀರಿಗೂ ಭಾರಿ ತೊಂದರೆಯಾಗಿದೆ. ಈಗ ಅನಿವಾರ್ಯವಾಗಿ ಹೊರಗಿನಿಂದ ಟ್ಯಾಂಕರ್ ಮೂಲಕ ನೀರು ತರಿಸಿ ಬಕೆಟ್‌ಗಳಲ್ಲಿ ತುಂಬಿಸಿಟ್ಟುಕೊಳ್ಳಬೇಕಾದ ದುಸ್ಥಿತಿ ಬಂದೊದಗಿದೆ’ ಎಂದು ಸದಾಶಿವ ಬೇಸರ ವ್ಯಕ್ತಪಡಿಸಿದ್ದಾರೆ.

*ಬಾವಿಯಿಂದ ತೆಗೆದ ನೀರಿಗೆ ಪೇಪರ್ ಮುಳುಗಿಸಿ ಬೆಂಕಿ ಹಚ್ಚಿದಾಗ ಉರಿಯುತ್ತಿರುವುದು!*
ಪೆಟ್ರೋಲ್ ಬಂಕ್ ಮಾಲೀಕರ ನಡೆಯ ಬಗ್ಗೆಯೂ ಮಾತನಾಡಿದ ಅವರು, ‘ನಾವು ಈ ಬಗ್ಗೆ ಪಕ್ಕದ ಪೆಟ್ರೋಲ್ ಬಂಕ್‌ನವರ ಗಮನಕ್ಕೆ ತಂದಿದ್ದೆವು. ಆದರೆ ಇದು ನಮ್ಮಿಂದ ಆಗಿರುವ ಸಮಸ್ಯೆಯಲ್ಲ; ನಮ್ಮ ಟ್ಯಾಂಕ್‌ನಿಂದ ಲೀಕ್ ಆಗಿದ್ದರೆ ಸ್ಟಾಕ್‌ನಲ್ಲಿ ವ್ಯತ್ಯಾಸ ಬರುತ್ತಿತ್ತು ಎಂದು ಅವರು ಹಾರಿಕೆ ಉತ್ತರ ನೀಡುತ್ತಿದ್ದಾರೆ. ಆದರೆ ಈಗಾಗಲೇ ಆರೋಗ್ಯ ಇಲಾಖೆಯ ಅಧಿಕಾರಿಗಳು ಬಂದು ನೀರಿನ ಮಾದರಿಯನ್ನು ತಪಾಸಣೆಗೆ ಕೊಂಡೊಯ್ದಿದ್ದು, ಇದರಲ್ಲಿ ಬರೋಬ್ಬರಿ ಶೇ 28 ರಷ್ಟು ಆಯಿಲ್ ಅಂಶ ಇರುವುದು ವರದಿಯಲ್ಲಿ ದೃಢಪಟ್ಟಿದೆ. ಅಲ್ಲದೆ ಈ ನೀರು ಕುಡಿಯಲು ಯೋಗ್ಯವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಬಾವಿಯಿಂದ ತೆಗೆದ ನೀರಿಗೆ ಪೇಪರ್ ಮುಳುಗಿಸಿ ಬೆಂಕಿ ಹಚ್ಚಿದರೆ ಅದು ಉರಿಯುತ್ತಿದೆ. ಇಂತಹ ಅಪಾಯಕಾರಿ ಪರಿಸ್ಥಿತಿಯಲ್ಲಿ ನಾವಿದ್ದೇವೆ, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕೇವಲ ವರದಿ ಪಡೆದು ಸುಮ್ಮನಾಗದೆ ತಕ್ಷಣವೇ ಸ್ಥಳಕ್ಕೆ ಬಂದು ನಮ್ಮ ನೆರವಿಗೆ ಧಾವಿಸಬೇಕು’ ಎಂದು ಸದಾಶಿವ ಮನವಿ ಮಾಡಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು