ಇತ್ತೀಚಿನ ಸುದ್ದಿ
ಮಂಗಳೂರು ಮಹಾನಗರ ಪಾಲಿಕೆಗೆ 25 ಕಾಮಗಾರಿಗಳಿಗೆ 200 ಕೋಟಿ ರೂ. ಅನುದಾನ ಬಿಡುಗಡೆ: ಸಚಿವ ಬೈರತಿ ಸುರೇಶ್
18/04/2026, 22:08
ಮಂಗಳೂರು(reporterkarnataka.com): ರಾಜ್ಯದಲ್ಲಿ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆ ಮೂಲಕ ನಗರಾಭಿವೃದ್ಧಿ ಯೋಜನೆಗೆ 2, 600 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆ ಹಂತ 2ರ ಮೂಲಕ ಜಿಎಸ್ ಟಿ ಸೇರಿ ಮಂಗಳೂರು ಮಹಾನಗರ ಪಾಲಿಕೆಗೆ 25 ಕಾಮಗಾರಿಗಳಿಗೆ 200 ಕೋಟಿ ರೂ. ಅನುದಾನ ಬಿಡುಗಡೆ ಮಾಡಿರುವುದಾಗಿ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಹೇಳಿದ್ದಾರೆ.



ಅವರು ಶನಿವಾರ ನಗರದ ಉರ್ವಸ್ಟೋರ್ .ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡ ಮಂಗಳೂರು ನಗರಾಭಿವೃದ್ಧಿಯ 25 ಕಾಮಗಾರಿಗಳಿಗೆ ಶಿಲಾನ್ಯಾಸ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ರಾಜ್ಯದಲ್ಲಿ ನಗರದ ಸಮಗ್ರ ಅಭಿವೃದ್ಧಿಗೆ ವಿವಿಧ ಯೋಜನೆಗಳಿಗೆ ರಾಜ್ಯ ಸರಕಾರ 24 ಸಾವಿರ ಕೋಟಿ ರೂಪಾಯಿಗೆ ಅನುಮೋದನೆ ನೀಡಿದೆ. ದೇಶದಲ್ಲಿ ಅತ್ಯಂತ ಹೆಚ್ಚು ತೆರಿಗೆ ಪಾವತಿ ಮಾಡುವ ರಾಜ್ಯಗಳ ಪೈಕಿ ಮಹಾರಾಷ್ಟ್ರ, ತಮಿಳುನಾಡು ಹಾಗೂ ಕರ್ನಾಟಕ ರಾಜ್ಯ ಸೇರಿದೆ .ಈ ಪೈಕಿ 10ರಿಂದ 12 ಶೇ. ಮೊತ್ತವನ್ನು ಮಾತ್ರ ರಾಜ್ಯ ಹಿಂಪಡೆಯುತ್ತಿದೆ ಎಂದು ಹೇಳಿದರು.
ರಾಜ್ಯದ 13 ಮಹಾನಗರ ಪಾಲಿಕೆಗಳಿಗೂ ಸಮಾನವಾಗಿ ಅನುದಾನ ಹಂಚಿಕೆ ಮಾಡಿದ್ದೇವೆ, ಪಕ್ಷಾತೀತವಾಗಿ, ಜಾತ್ಯತೀತವಾಗಿ ರಾಜ್ಯ ಸರಕಾರ ಕಾರ್ಯನಿರ್ವಹಿಸುತ್ತಿದೆ. ಮಂಗಳೂರು ನಗರದ ಒಳಚರಂಡಿ ನಿರ್ಮಾಣಕ್ಕೆ 40 ಕೋಟಿ ರೂ. ಅನುದಾನ ಈಗಾಗಲೇ ಬಿಡುಗಡೆ ಮಾಡಲಾಗಿದೆ ಎಂದು ಬೈರತಿ ಸುರೇಶ್ ಹೇಳಿದರು.
ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಮಂಗಳೂರು ನಗರದ ಅಭಿವೃದ್ಧಿಗೆ 165 ಕೋಟಿ ರೂಪಾಯಿಗಳ ವಿಶೇಷ ಅನುದಾನ ಬಿಡುಗಡೆ ಮಾಡಿರುವುದಕ್ಕೆ ನಗರಾಭಿವೃದ್ಧಿ ಸಚಿವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.
ಜಿಲ್ಲೆಯಲ್ಲಿ ಸುಮಾರು 100 ಕೋಟಿ ರೂ. ವೆಚ್ಚದಲ್ಲಿ ಕಿಯೋನಿಕ್ಸ್ ಮೂಲಕ ಐಟಿ ಪಾರ್ಕ್ ರೂಪಿಸಲು ಯೋಜನೆ ಸಿದ್ಧವಾಗಿದೆ. ಕರಾವಳಿಯ ರಸ್ತೆ ಅಭಿವೃದ್ಧಿ ಗೆ ಯೋಜನೆ ರೂಪಿಸಲಾಗಿದೆ. ನದಿ ಪ್ರದೇಶದ ಅಭಿವೃದ್ಧಿಗೆ ಅತಿಕ್ರಮಣ ತಡೆಯಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ವೆನ್ಲಾಕ್ ನಲ್ಲಿ 70 ಕೋಟಿ ರೂ. ವೆಚ್ಚದಲ್ಲಿ ಒಪಿಡಿ ಬ್ಲಾಕ್ ನಿರ್ಮಾಣವಾಗಲಿದೆ. ಕುದ್ಮಲ್ ರಂಗರಾವ್ ಸ್ಮಾರಕ ಅಭಿವೃದ್ಧಿ, .ಅಂಬೇಡ್ಕರ್ ವೃತ್ತದ ಅಭಿವೃದ್ಧಿ ಸೇರಿದಂತೆ ಮಂಗಳೂರು ನಗರದಸ ಎಲ್ಲಾ ರೀತಿಯ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಉಸ್ತುವಾರಿ ಸಚಿವರು ತಿಳಿಸಿದರು.
ಸರಕಾರದ ಹಣವೆಂದರೆ ಜನರ ಹಣ. ಈ ವಿಚಾರದಲ್ಲಿ ಸಣ್ಣತನ ಬೇಡ. ರಾಜ್ಯ, ಕೇಂದ್ರದ ಅನುದಾನ ಎನ್ನಬಾರದು. ಒಳ ಚರಂಡಿಗೆ ಇನ್ನೂ ಅನುದಾನದ ಅಗತ್ಯವಿದೆ. ಈ ಬಗ್ಗೆ ನಗರಾಭಿವೃದ್ಧಿ ಸಚಿವರ ಸಹಕಾರ ಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ವೇದ ವ್ಯಾಸ ಕಾಮತ್ ಮಾತನಾಡಿ, ಮಂಗಳೂರು ನಗರದ ಒಳಚರಂಡಿ ನಿರ್ಮಾಣಕ್ಕೆ 1000 ಕೋಟಿ ರೂ. ಅನುದಾನ ನೀಡುವಂತೆ ಆಗ್ರಹಿಸಿದರು. ಹಿಂದಿನ ಅವಧಿಯಲ್ಲಿ ತಡೆಹಿಡಿಯಲಾದ ಕಾಮಗಾರಿಗಳನ್ನು ಮುಂದುವರಿಸುವಂತೆ ಕೋರಿದರು.
ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮಾಜಿ ಶಾಸಕ ಜೆ.ಆರ್.ಲೋಬೊ, ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ.ಗಫೂರ್ , ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಅಧ್ಯಕ್ಷ ಭರತ್ ಮುಂಡೋಡಿ, ರಾಜ್ಯ ಪರಿಸರ ಪ್ರವಾಸೋದ್ಯಮ ನಿಗಮದ ಅಧ್ಯಕ್ಷೆ ಶ್ಯಾಲೆಟ್ ಲವೀನಾ ಪಿಂಟೊ, ರಾಜ್ಯ ಬೀಜ ನಿಗಮದ ಅಧ್ಯಕ್ಷೆ ಲಾವಣ್ಯಾ ಬಲ್ಲಾಳ್, ಗಾಣಿಗ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿಶ್ವಾಸ್ ದಾಸ್, ಕೊಂಕಣಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಅಲ್ವಾರಿಸ್, ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್, ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಮನಪಾ ಆಯುಕ್ತ ರವಿಚಂದ್ರ ನಾಯಕ್, ಮಾಜಿ ಮೇಯರ್ ಗಳಾದ ಶಶಿಧರ ಹೆಗ್ಡೆ, ಭಾಸ್ಕರ ಕೆ., ಮನಪಾ ಮಾಜಿ ಸದಸ್ಯ ರಾದ ಅಪ್ಪಿ, ಲ್ಯಾನ್ಸಿ ಲೋಟ್ ಪಿಂಟೋ, ಅನಿಲ್, ಪ್ರಕಾಶ್ ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು.












