ಇತ್ತೀಚಿನ ಸುದ್ದಿ
ಕಾಫಿ ತೋಟವನ್ನೇ ಧ್ವಂಸಗೊಳಿಸುತ್ತಿರುವ ಹೊರ ರಾಜ್ಯದ ಕಾರ್ಮಿಕರು: ಅಸಹಾಯಕರಾದ ಮಾಲಿಕರು!
20/11/2026, 17:15
ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಕಾಫಿ ನಾಡು ಕೊಡಗಿನಲ್ಲಿ ಇದೀಗ ಕಾಫಿ ಕೊಯ್ಲು ಆರಂಭವಾಗಿದ್ದು, ಬೆಳೆಗಾರರಿಗೆ ಕಾರ್ಮಿಕರ ಕೊರತೆ ಹಾಗೂ ಗಗನಕ್ಕೇರಿರುವ ಕೂಲಿ ದರ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಸ್ಥಳೀಯ ಕಾರ್ಮಿಕರ ಅಭಾವ ಮತ್ತು ದುಬಾರಿ ಕೂಲಿಯಿಂದ ಕಂಗೆಟ್ಟಿರುವ ತೋಟದ ಮಾಲೀಕರು ಅನಿವಾರ್ಯವಾಗಿ ಅಸ್ಸಾಂ ಮೂಲದ ವಲಸೆ ಕಾರ್ಮಿಕರ ಮೊರೆ ಹೋಗಿದ್ದಾರೆ. ಆದರೆ, ಕಾಫಿ ಕೊಯ್ಲಿನ ಸರಿಯಾದ ವಿಧಾನ ತಿಳಿಯದ ಈ ಕಾರ್ಮಿಕರು ಗಿಡಗಳನ್ನೇ ಹಾಳು ಮಾಡುತ್ತಿರುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
*ಗಿಡಗಳಿಗೆ ಹಾನಿ, ಮಾಲೀಕರಿಗೆ ಅಸಹಾಯಕತೆ!*
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ, ವಲಸೆ ಕಾರ್ಮಿಕರು ಕಾಫಿ ಹಣ್ಣುಗಳನ್ನು ಬಿಡಿಸುವ ಭರದಲ್ಲಿ ಗಿಡದ ರೆಂಬೆ-ಕೊಂಬೆಗಳನ್ನು ಮುರಿಯುತ್ತಿರುವುದು ಮತ್ತು ಎಲೆಗಳ ಸಮೇತ ಕಿತ್ತು ಹಾಕುತ್ತಿರುವುದು ಕಂಡುಬಂದಿದೆ. ಕಾಫಿ ಗಿಡಗಳಿಗೆ ಹಾನಿಯಾದರೆ ಮುಂದಿನ ವರ್ಷದ ಫಸಲಿನ ಮೇಲೂ ನೇರ ಪರಿಣಾಮ ಬೀರುತ್ತದೆ. ‘ಕೊಡಗಿನಲ್ಲಿ ಇಂದು ಕಾರ್ಮಿಕರ ಕೂಲಿ ದರ ಗಗನಕ್ಕೇರಿದೆ. ಇಷ್ಟೊಂದು ದುಬಾರಿ ಕೂಲಿ ಕೊಟ್ಟರೂ ಕೆಲಸದ ಗುಣಮಟ್ಟ ಮಾತ್ರ ಹೀಗಿದೆ. ಆದರೆ, ಈಗಿರುವ ಪರಿಸ್ಥಿತಿಯಲ್ಲಿ ದೂರು ನೀಡುವ ಸ್ಥಿತಿಯಲ್ಲೂ ಬೆಳೆಗಾರರಿಲ್ಲ’ ಎಂಬ ಅಸಹಾಯಕತೆಯ ಮಾತುಗಳು ವಿಡಿಯೋ ಜೊತೆಗೆ ಹಂಚಿಕೊಳ್ಳಲಾಗುತ್ತಿದೆ.













