ಇತ್ತೀಚಿನ ಸುದ್ದಿ
ವರ್ಗಾವಣೆ ಆದೇಶವಿದ್ದರೂ ಪೊಲೀಸ್ ಕಮಿಷನರ್ ಕರ್ತವ್ಯದಿಂದ ಬಿಡುಗಡೆಗೊಳಿಸಿಲ್ಲ: ಮಂಗಳೂರಿನಲ್ಲಿ ಪೊಲೀಸ್ ಮಹಾ ನಿರ್ದೇಶಕ ಸಲೀಂ ಪ್ರತಿಕ್ರಿಯೆ
22/04/2026, 14:46
ಮಂಗಳೂರು(reporterkarnataka.com):;ಸುಮಾರು ಮೂರು ತಿಂಗಳಿನಿಂದ ವರ್ಗಾವಣೆಯ ಆದೇಶ ಪತ್ರ ಬಂದರೂ ಕೂಡ ನಗರ ಪೊಲೀಸ್ ಕಮಿಷನರ್ ಕರ್ತವ್ಯದಿಂದ ಬಿಡುಗಡೆಗೊಳಿಸಿಲ್ಲ ಎಂದು ವರ್ಗಾವಣೆ ಆದೇಶ ಪಡೆದ ಪೊಲೀಸರ ಕುಟುಂಬಸ್ಥರು ಆರೋಪಿಸಿದ್ದಾರೆ.
ಮಂಗಳವಾರ ನಡೆದ ಪಶ್ಚಿಮ ವಲಯ ಪೊಲೀಸ್ ಅಧಿಕಾರಿಗಳ ಸಭೆಗೆ ಆಗಮಿಸಿದ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ. ಸಲೀಂ ಅವರನ್ನು ಭೇಟಿ ಮಾಡಿದ ಪೊಲೀಸ್ ಕುಟುಂಬದ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿ ಸೂಕ್ತ ಕ್ರಮಕ್ಕಾಗಿ ಅಹವಾಲು ಸಲ್ಲಿಸಿದರು.
ವರ್ಗಾವಣೆಯ ಆದೇಶ ಬಂದು ಮೂರು ತಿಂಗಳು ಕಳೆದಿದೆ. ಆದರೆ ಇನ್ನೂ ನಿಯುಕ್ತಿ ಮಾಡಿಲ್ಲ. ಆದಷ್ಟು ಬೇಗ ವರ್ಗಾವಣೆ ಆದೇಶ ಜಾರಿಗೊಳಿಸಿ ಎಂದು ವರ್ಗಾವಣೆಗೊಂಡ ಪೊಲೀಸ್ ಕುಟುಂಬಸ್ಥರು ಪೊಲೀಸ್ ಮಹಾನಿರ್ದೇಶಕರನ್ನು ಆಗ್ರಹಿಸಿದರು.
ಸುಮಾರು 10 ವರ್ಷ ಸೇವೆ ಪೂರ್ಣಗೊಂಡ ಪೊಲೀಸ್ ಸಿಬ್ಬಂದಿಗೆ ವರ್ಗಾವಣೆ ಆದೇಶ ಬಂದಿದೆ. ಕೋಮುಗಲಭೆ, ಸಿಬ್ಬಂದಿ ಕೊರತೆ ನೆಪ ಮುಂದಿರಿಸಿ ಪೊಲೀಸ್ ಕಮಿಷನರ್ ವರ್ಗಾವಣೆ ಪ್ರಕ್ರಿಯೆ ಮಾಡುತ್ತಿಲ್ಲ ಎಂದು ಪೊಲೀಸ್ ಕುಟುಂಬಸ್ಥರು ಅಳಲು ತೋಡಿಕೊಂಡರು.
ಕುಟುಂಬದಲ್ಲಿ ಆರೋಗ್ಯ ಸಮಸ್ಯೆಗಳಿವೆ. ನಮ್ಮೂರಿನಲ್ಲಿ ಹಿರಿಯರಿದ್ದಾರೆ. ಅವರನ್ನು ನೋಡಿಕೊಳ್ಳಬೇಕಿದೆ. ಮಕ್ಕಳ ಶಾಲಾ, ಕಾಲೇಜು ಶಿಕ್ಷಣಕ್ಕೆ ಪ್ರವೇಶ ಪ್ರಕ್ರಿಯೆಗೂ ತೊಂದರೆಯಾಗಿದೆ. ಹಾಗಾಗಿ ನಮಗೆ ನ್ಯಾಯ ಬೇಕು. ಇಲ್ಲದಿದ್ದರೆ ಪ್ರತಿಭಟನೆ ನಡೆಸುವ ಅನಿವಾರ್ಯತೆ ಇದೆ ಎಂದು ಪೊಲೀಸ್ ಕುಟುಂಬದ ಸದಸ್ಯರು ಎಚ್ಚರಿಕೆ ನೀಡಿದರು.
ಇದಕ್ಕೆ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಡಾ.ಸಲೀಂ ಉತ್ತರ ಕರ್ನಾಟಕ ಭಾಗದ ಅನೇಕ ಪೊಲೀಸ್ ಸಿಬ್ಬಂದಿ ಮತ್ತವರ ಕುಟುಂಬಸ್ಥರು ವರ್ಗಾವಣೆ ಕೋರಿ ಮನವಿ ಸಲ್ಲಿಸಿದ್ದಾರೆ. ಈ ಬಗ್ಗೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಲಾಗಿದೆ. ಹಂತ ಹಂತವಾಗಿ ವರ್ಗಾವಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
*ವರ್ಗಾವಣೆ ಆದೇಶ ಪಡೆದ ಪೊಲೀಸ್ ಕಾನ್‌ಸ್ಟೇಬಲ್‌ಗಳ ಬಿಡುಗಡೆಗೆ ಸರಕಾರಿ ನಿಯಮ ಅಡ್ಡಿ: ಪೊಲೀಸ್ ಕಮಿಷನರ್*
ಮಂಗಳೂರು ನಗರ ಪೊಲೀಸ್ ಆಯುಕ್ತಾಲಯ ವ್ಯಾಪ್ತಿಗೆ 801 ಪೊಲೀಸ್ ಸಿಬ್ಬಂದಿಯ ಮಂಜೂರಾತಿ ಆಗಿದೆ. ಆದರೆ ಇದೀಗ 685 ಮಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. 116 ಕಾನ್‌ಸ್ಟೆಬಲ್‌ಗಳ ಹುದ್ದೆಗಳು ಅಂದರೆ ಶೇ. 14.4 ಹುದ್ದೆಗಳು ಖಾಲಿ ಇವೆ. ವರ್ಗಾವಣೆಗೊಂಡ 63 ಸಿವಿಲ್ ಪೊಲೀಸ್ ಕಾನ್‌ಸ್ಟೆಬಲ್‌ಗಳನ್ನು ಬಿಡುಗಡೆ ಮಾಡಿದರೆ, ಖಾಲಿ ಹುದ್ದೆಗಳು ಶೇ.22.1 ಆಗುತ್ತವೆ. ಇದು 15 ಪ್ರತಿಶತ ದಾಟುತ್ತಿರುವುದರಿಂದ ಸರಕಾರದ ನಿಯಮಾನುಸಾರ ಅವರನ್ನು ಇಲ್ಲಿಂದ ಬಿಡುಗಡೆ ಸಾಧ್ಯವಾಗುತ್ತಿಲ್ಲ ಎಂದು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಸ್ಪಷ್ಟಪಡಿಸಿದರು.
ವರ್ಗಾವಣೆಗೊಂಡ ಪೊಲೀಸ್ ಸಿಬ್ಬಂದಿ ಕುಟುಂಬಸ್ಥರ ಆರೋಪಕ್ಕೆ ಸಂಬಂಧಿಸಿ ಮಂಗಳವಾರ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆಗೊಳಿಸಿದ ಅವರು, ಇಲ್ಲಿನ ಜನರು ರಸ್ತೆ, ಟ್ರಾಫಿಕ್, ಬಂದೋಬಸ್ತ್, ಕಾನೂನು ಮತ್ತು ಸುವ್ಯವಸ್ಥೆ, ಅಪರಾಧ ತಡೆಯಲು, ಅಪರಾಧ ಪತ್ತೆ ಮಾಡಲು, ತನಿಖೆ ಮಾಡಲು, ಬೀಟ್ ಮೀಟಿಂಗ್ ಮಾಡಲು ಪೊಲೀಸರನ್ನು ನಿರೀಕ್ಷಿಸುತ್ತಾರೆ. ಜನತೆಯ ಸಹಕಾರದಿಂದಾಗಿ ಪ್ರಸಕ್ತ ನಗರ ಶಾಂತಿಯುತವಾಗಿದೆ ಎಂದು ಸುಧೀರ್ ಕುಮಾರ್ ರೆಡ್ಡಿ ಹೇಳಿದರು.
ಅಂತರ್ ಜಿಲ್ಲಾ ವರ್ಗಾವಣೆ ಪಡೆಯಲು ಬಡ್ತಿಯನ್ನೂ ಕೈಬಿಟ್ಟಿದ್ದಾರೆ. ಕಾನ್‌ಸ್ಟೆಬಲ್ ಮತ್ತವರ ಕುಟುಂಬಸ್ಥರ ನೋವು ಸಹಜವಾಗಿದೆ. ನಾವು ಅವರ ಯೋಗಕ್ಷೇಮ ನೋಡುವುದರ ಜೊತೆಗೆ ನಗರದ ಕಾನೂನು ಸುವ್ಯವಸ್ಥೆಯನ್ನು ಗಮನಿಸಬೇಕಿದೆ. ನನ್ನ ಸೇವಾವಧಿಯಲ್ಲಿ ಯಾವುದೇ ಒಬ್ಬ ಕಾನ್‌ಸ್ಟೇಬಲ್‌ನ ಇಎಲ್ (ಅರ್ನ್‌ಡ್ ಲೀವ್) ಅರ್ಜಿಯನ್ನು ತಿರಸ್ಕರಿಸಿಲ್ಲ ಎಂದು ಕಮಿಷನರ್ ಸ್ಪಷ್ಟಪಡಿಸಿದರು.













