ಇತ್ತೀಚಿನ ಸುದ್ದಿ
ರಾಜಕೀಯ ಮೈಲೇಜ್ಗಾಗಿ ಸಂಸದ ತೇಜಸ್ವಿ ಸೂರ್ಯ ಆರೋಪ: ಜಿಪಂ ಮಾಜಿ ಅಧ್ಯಕ್ಷೆ ಮಮತಾ ಗಟ್ಟಿ ಕಿಡಿ
12/11/2026, 21:56
ಮಂಗಳೂರು(reporterkarnataka.com):ಮಂಗಳೂರು(ಉಳ್ಳಾಲ) ಕ್ಷೇತ್ರದ ಮತದಾರರ ಪಟ್ಟಿ ಹಾಗೂ ರಾಜಕೀಯ ಮುಖಂಡರ ಕುರಿತು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಮಾಡಿರುವ ಆರೋಪಗಳು ಸಂಪೂರ್ಣ ಸುಳ್ಳು ಮತ್ತು ವಾಸ್ತವಕ್ಕೆ ದೂರವಾದವು. ರಾಜಕೀಯ ಮೈಲೇಜ್ಗಾಗಿ ಮತ್ತು ಪ್ರಚಾರಕ್ಕಾಗಿ ಒಬ್ಬ ಜನಪ್ರತಿನಿಧಿಯ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸುವುದು ತೇಜಸ್ವಿ ಸೂರ್ಯ ಅವರ ಅಜ್ಞಾನ ಅಥವಾ ಉದ್ದೇಶಪೂರ್ವಕ ರಾಜಕೀಯ ತಂತ್ರವಾಗಿದೆ
ಎಂದು ಜಿಪಂ ಮಾಜಿ ಅಧ್ಯಕ್ಷೆ ಮಮತಾ ಗಟ್ಟಿ ಹೇಳಿದ್ದಾರೆ.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕದ್ರಿಯಲ್ಲಿ ನಡೆದ ಬಿಜೆಪಿಯ ಸಮಾವೇಶದಲ್ಲಿ ತೇಜಸ್ವಿ ಸೂರ್ಯ ಅವರು ಸತ್ಯ ಸಂಗತಿಯನ್ನು ಮರೆಮಾಚಿ ಜನರನ್ನು ತಪ್ಪು ದಾರಿಗೆಳೆಯುವ ಕೆಲಸ ಮಾಡಿದ್ದಾರೆ ಎಂದು ಅವರು ಆರೋಪಿಸಿದರು.
ತಲಪಾಡಿ ಗ್ರಾಮದ ಕೆ.ಸಿ. ರೋಡ್ನಲ್ಲಿರುವ ಮನೆ ನಂಬ್ರ 1/288 ಮತ್ತು 1/288 ಸಿ ಎಂಬೆರಡು ಪ್ರತ್ಯೇಕ ಮನೆಗಳಾಗಿದ್ದು, ಗ್ರಾಮ ಪಂಚಾಯತ್ನಿಂದ ಅಧಿಕೃತವಾಗಿ ಈ ನಂಬರ್ಗಳನ್ನು ನೀಡಲಾಗಿದೆ. ಮೊಹಮ್ಮದ್ ನಾಸಿರ್ ಹಾಗೂ ಅವರ ಕುಟುಂಬದ ಸದಸ್ಯರು ಮತ್ತು ಸತ್ಯಮೂರ್ತಿ ಕೆ. ಎಂಬವರ ಕುಟುಂಬಗಳು ಆ ಪ್ರದೇಶದಲ್ಲಿ ಸುಮಾರು 20 ವರ್ಷಗಳಿಗೂ ಹೆಚ್ಚು ಕಾಲದಿಂದ ವಾಸವಾಗಿದ್ದು, ಇವರು 2002ರ ಚುನಾವಣೆಯಲ್ಲೂ ಮತ ಚಲಾಯಿಸಿದ್ದಾರೆ ಹಾಗೂ ಅಂದಿನಿಂದಲೂ ಇವರ ಹೆಸರುಗಳು ಮತದಾರರ ಪಟ್ಟಿಯಲ್ಲಿ ದಾಖಲಾಗಿವೆ. ಮತದಾರರ ಪಟ್ಟಿಯನ್ನು ಸಿದ್ಧಪಡಿಸುವುದು, ಪರಿಷ್ಕರಿಸುವುದು, ಹೆಸರು ಸೇರಿಸುವುದು ಅಥವಾ ಕೈಬಿಡುವುದು ಸಂಪೂರ್ಣವಾಗಿ ಚುನಾವಣಾ ಆಯೋಗ ಮತ್ತು ಅದರ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಜವಾಬ್ದಾರಿಯಾಗಿದೆ. ಇದಕ್ಕೆ ಯಾವುದೇ ಕ್ಷೇತ್ರದ ಶಾಸಕರಿಗಾಗಲಿ ಅಥವಾ ಸಚಿವರಾದ ಯು.ಟಿ. ಖಾದರ್ ಅವರಿಗಾಗಲಿ ಯಾವುದೇ ಸಂಬಂಧವಿರುವುದಿಲ್ಲ. ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ಕೇವಲ ರಾಜಕೀಯ ಮೈಲೇಜ್ಗಾಗಿ ಮತ್ತು ಪ್ರಚಾರಕ್ಕಾಗಿ ಒಬ್ಬ ಜನಪ್ರತಿನಿಧಿಯ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸುವುದು ತೇಜಸ್ವಿ ಸೂರ್ಯ ಅವರ ಅಜ್ಞಾನ ಅಥವಾ ಉದ್ದೇಶಪೂರ್ವಕ ರಾಜಕೀಯ ತಂತ್ರವಾಗಿದೆ ಎಂದು ಮಮತಾ ಗಟ್ಟಿ ಆಕ್ರೋಶ ವ್ಯಕ್ತಪಡಿಸಿದರು. ಈ ಕುರಿತಂತೆ ಸಂಪೂರ್ಣ ದಾಖಲೆಗಳನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಗಿದ್ದು, ವಾಸ್ತವ ಸಂಗತಿ ಏನು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಪ್ರತಿನಿಧಿಗಳು ಅಥವಾ ರಾಜಕೀಯ ನಾಯಕರು ಸತ್ಯಾಸತ್ಯತೆಯನ್ನು ಅರಿಯದೆ ರಾಜಕೀಯ ದ್ವೇಷದ ಭಾಷಣಗಳನ್ನು ಮಾಡಿ ಸಾರ್ವಜನಿಕರನ್ನು ದಿಕ್ಕು ತಪ್ಪಿಸುವುದು ಸರಿಯಲ್ಲ ಎಂದು ಎಚ್ಚರಿಸಿದ ಅವರು, ಈ ಕುರಿತು ಮಾಧ್ಯಮಗಳ ಎದುರು ಸ್ಪಷ್ಟನೆ ನೀಡುವುದಾಗಿ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಬಿ.ಎಲ್.ಒ.ಗಳು ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.












