ಇತ್ತೀಚಿನ ಸುದ್ದಿ
ಸೈಟ್ ಇಲ್ಲದವರಿಗೆ ಉಚಿತ ಸೈಟ್ ಭಾಗ್ಯ: ಮುಖ್ಯಮಂತ್ರಿ ಡಿಕೆಶಿ ಮಹತ್ವದ ಘೋಷಣೆ
07/06/2026, 19:17
ಬೆಂಗಳೂರು(reporterkarnataka.com): ಸಿಎಂ ಡಿ.ಕೆ. ಶಿವಕುಮಾರ್ ಅವರು ತಮ್ಮ ಸ್ವಕ್ಷೇತ್ರ ಕನಕಪುರ ಪ್ರವಾಸ ಕೈಗೊಂಡಿದ್ದಾರೆ. ಸಿಎಂ ಆದ ಬಳಿಕ ಮೊದಲ ಬಾರಿಗೆ ಡಿ.ಕೆ. ಶಿವಕುಮಾರ್ ಅವರು ಕನಕಪುರ ಜನರಿಗೆ ಕೃತಜ್ಞತೆ ಸಲ್ಲಿಸಿ ಹಲವು ಮಹತ್ವದ ಭರವಸೆ ಘೋಷಣೆ ಮಾಡಿದ್ದಾರೆ. ಇದೇ ವೇಳೆ ಜನರನ್ನುದ್ದೇಶಿಸಿ ಮಾತನಾಡಿರುವ ಸಿಎಂ ಡಿಕೆಶಿ, ಉಚಿತ ಸೈಟ್ ನೀಡಲು ನಾವು ತೀರ್ಮಾನ ಮಾಡುತ್ತಿದ್ದೇವೆ, ಸೈಟ್ ಇಲ್ಲದವರು ಯಾರು, ಸೈಟ್ ಖರೀದಿ ಮಾಡಬೇಡಿ ಎಂದು ಕರೆ ಕೊಟ್ಟಿದ್ದಾರೆ. ಬೆಂಗಳೂರಿನ ಕೊಳಚೆ ನೀರು ನೀವು ಕುಡಿಯುತ್ತಿದ್ದೀರಿ, ನಿಮ್ಮ ಆರೋಗ್ಯ ಕೆಡುತ್ತಿದೆ, ಇಲ್ಲಿ ಆಸ್ಪತ್ರೆ ನಿರ್ಮಿಸುತ್ತೇನೆ. ಇಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಮಾಡುತ್ತೇನೆ, ಅಲ್ಲಿ ಹೈಟೆಕ್ ಆಸ್ಪತ್ರೆ ಮಾಡುತ್ತೇವೆ ಎಂದು ಕ್ಷೇತ್ರದ ಜನರಿಗೆ ಡಿ.ಕೆ. ಶಿವಕುಮಾರ್ ಭರವಸೆ ನೀಡಿದರು.
‘ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಲಾಗುತ್ತಿದೆ. ಉಚಿತ ಸೈಟ್ ನೀಡಲು ಸಹ ತೀರ್ಮಾನಿಸಿದ್ದೇವೆ. ಸೈಟ್ ಇಲ್ಲದವರು ಯಾರು, ಸೈಟ್ ಖರೀದಿ ಮಾಡಬೇಡಿ ಎಂದು ಹೇಳಿದರು.
*’2028ರಲ್ಲಿ ನಾವು ಮತ್ತೆ ಗೆಲ್ಲಬೇಕು’:*
ನಾನು ಬಿಜೆಪಿ, ಜೆಡಿಎಸ್ ಕಾರ್ಯಕರ್ತರಿಗೆ ಮನವಿ ಮಾಡುತ್ತೇನೆ, ತಲೆಯಿಂದ ಎಲ್ಲ ತೆಗೆದುಹಾಕಿ, ಮತ್ತೊಬ್ಬ ಡಿಕೆಶಿ ತಯಾರು ಮಾಡಲು ಬಿಜೆಪಿ, ಜೆಡಿಎಸ್ ಪಕ್ಷಕ್ಕೆ ಆಗಲ್ಲ, ಎಲ್ಲರೂ ಅದನ್ನು ಬಿಡಿ ಜೊತೆಯಾಗಿ ಬನ್ನಿ ಎಂದು ಡಿ.ಕೆ. ಶಿವಕುಮಾರ್ ಅವರು ಮನವಿ ಮಾಡಿದರು.
*’ನಾನು ಮುಖ್ಯಮಂತ್ರಿ ಅಲ್ಲ, ನಿಮ್ಮ ಮಗ’:*
ನಾರಾಯಣಪುರ ಬಳಿಕ ಕೊಡಿಹಳ್ಳಿ ತಲುಪಿದ ಡಿ.ಕೆ. ಶಿವಕುಮಾರ್ ಅವರು ಅಲ್ಲಿ ಸಹ ಜನರನ್ನುದ್ದೇಶಿಸಿ ಮಾತನಾಡಿದರು. ನನ್ನ ಮೇಲೆ ಪ್ರೀತಿ ಇಟ್ಟು, 8 ಬಾರಿ ಗೆಲ್ಲಿಸಿದ್ದೀರಿ, ಇದಕ್ಕೆ ಕಾರಣಕರ್ತರಾಗಿ ನಿಮ್ಮ ಸೇವೆ ಮಾಡಲು ಅವಕಾಶ ನೀಡಿದ್ದೀರಿ, ನಾನು ಇಲ್ಲಿ ಮುಖ್ಯಮಂತ್ರಿ ಅಲ್ಲ, ನಿಮ್ಮ ಮಗ, ಬಿಜೆಪಿ ಅವರು ಜೈಲಿಗೆ ಕಳುಹಿಸಿದಾಗ ನೀವು ದುಃಖ ಪಟ್ಟಿರಿ, ಕೊರಗಿದ್ರಿ, ನನಗೆ ಯಾವುದೇ ದುಡ್ಡು ಅವಶ್ಯಕತೆ ಇಲ್ಲ, ಕನಕಪುರದವರನ್ನು ಬೆಂಗಳೂರು ಜಿಲ್ಲೆ ಮಾಡಿದ್ದೇನೆ, ತಾಲೂಕಿನಲ್ಲಿ ಮೆಡಿಕಲ್ ಕಾಲೇಜು ಬರುತ್ತಿದೆ. ಮುಂದಿನ ತಿಂಗಳು ಭೂಮಿ ಪೂಜೆ ಮಾಡಲು ತೀರ್ಮಾನಿಸಿದ್ದೇವೆ. ತಾಯಿ ಮಗು ಆಸ್ಪತ್ರೆ ಮಾಡಿದ್ದೇವೆ. ನಿಮ್ಮ ಋಣ ತೀರಿಸುವ ಕೆಲಸ ಮಾಡಿದ್ದೇನೆ ಎಂದ ಸಿಎಂ ಡಿ.ಕೆ. ಶಿವಕುಮಾರ್ ಎಸ್.ಐ.ಆರ್ ಬಗ್ಗೆ ಜಾಗೃತೆಯಿಂದ ಇರಲು ಮನವಿ ಮಾಡಿದರು.
*ನನ್ನ ಚಿಂತನೆ ಆರೋಗ್ಯ, ವಸತಿ, ಶಿಕ್ಷಣ:*
ನಾವು ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯವರು, ಈ ಹಿಂದೆ ನಾನು ಆಸ್ತಿ ಮಾರಾಟ ಮಾಡಬೇಡಿ ಅಂತ ಹೇಳಿದ್ದೆ, ಈಗ ಅದರ ಬೆಲೆ ಬಂದಿದೆ, ಈ ವಿಚಾರವಾಗಿ ವಿಪಕ್ಷಗಳು ಟೀಕೆ ಮಾಡಿದ್ರು, ಬಿಜೆಪಿ ಹಾಗೂ ಜೆಡಿಎಸ್ ಟೀಕೆಗಳು ಸತ್ತು ಹೋಗಿದೆ, ಈಗ ಆಸ್ತಿ ಬೆಲೆ ನಾಲ್ಕುಪಟ್ಟು ಆಗಿದೆ, ಯಾರು ಊರು ಬಿಟ್ಟು ಹೋಗಬೇಡಿ, ಇಲ್ಲಿ ಎಲ್ಲ ವ್ಯವಸ್ಥೆ ಮಾಡುತ್ತೇನೆ, ನಿಮಗೆ ಉತ್ತಮ ಆರೋಗ್ಯ ಕೊಡಬೇಕು, ನನ್ನ ಚಿಂತನೆ ಆರೋಗ್ಯ, ವಸತಿ, ಶಿಕ್ಷಣ ಎಂದು ಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.












