2:18 PM Friday15 - May 2026
ಬ್ರೇಕಿಂಗ್ ನ್ಯೂಸ್
ತರೀಕೆರೆ | ರೆವೆನ್ಯೂ ಇನ್ಸ್‌ಪೆಕ್ಟರ್ ಲೋಕಾಯುಕ್ತ ಬಲೆಗೆ: ರೈತನಿಂದ 30 ಸಾವಿರ ಲಂಚ… ಸ್ಯಾಂಡಲ್‌ವುಡ್‌ಗೆ ಬಿಗ್ ಶಾಕ್: ಹೃದಯಘಾತಕ್ಕೆ ನಟ ದಿಲೀಪ್ ರಾಜ್ ಬಲಿ ಪ್ರಧಾನಿ ಮೋದಿ ಕರೆ ಬೆನ್ನಲ್ಲೆ, ಅಡುಗೆ ಎಣ್ಣೆ ದರದಲ್ಲಿ ಭಾರಿ ಇಳಿಕೆ: ಅಕ್ಕಿ… ವಿದ್ಯುತ್ ಕಂಬದಲ್ಲಿ ಶಾರ್ಟ್ ಸರ್ಕ್ಯೂಟ್: ಬೈಕ್ ಸವಾರರ ನಿರ್ಲಕ್ಷ್ಯದ ಸವಾರಿ; ಅಪಾಯದಿಂದ ಪಾರು. ಬೆಂಗಳೂರು ಉಪನಗರ ರೈಲು ಯೋಜನೆ: 𝟭𝟱𝟯 ಮೆಟ್ರೋ ಕೋಚ್ ಗಳ ಖರೀದಿಗೆ ಐಸಿಎಫ್… ಚಿಕ್ಕಮಗಳೂರು | ಬ್ರೇಕ್ ಫೇಲ್: ಬಸ್ ನಿಲ್ದಾಣದ ಕಾಂಪೌಂಡ್‌ಗೆ ಡಿಕ್ಕಿ ಹೊಡೆದ ಸರಕಾರಿ… ಶೃಂಗೇರಿ ಕ್ಷೇತ್ರದ ಅಂಚೆ ಮತ ಗೊಂದಲ: ಕಾಂಗ್ರೆಸ್​​ನ ರಾಜೇಗೌಡರಿಗೆ ಮತ್ತೆ ದಕ್ಕಿದ ಶಾಸಕ… ದೇಶದ ಜನತೆಗೆ ಮೋದಿ ಮಿತವ್ಯಯದ ಕರೆ: ವಾಗ್ದಾಳಿ ನಡೆಸಿದ ರಾಹುಲ್‌ಗೆ ಬಿಜೆಪಿ ತಿರುಗೇಟು ಶೃಂಗೇರಿ ಕ್ಷೇತ್ರ ಮರು ಎಣಿಕೆ: ಹೈಕೋರ್ಟ್ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆ: ಮತ್ತೆ ರಾಜೇಗೌಡ… ಪತಿಯೊಂದಿಗೆ ಜಗಳವಾಡಿ 8ನೇ ಮಹಡಿಯಿಂದ ಜಿಗಿದು ಮಹಿಳೆ ಆತ್ಮಹತ್ಯೆ: ಸಾಮಾಜಿಕ ಜಾಲತಾಣಗಳಲ್ಲಿ ದೃಶ್ಯ…

ಇತ್ತೀಚಿನ ಸುದ್ದಿ

ಬಾಣಂತಿಯರ ಸರಣಿ ಸಾವು: ಹೈಕೋರ್ಟ್ ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಸಲು ಕುಮಾರಸ್ವಾಮಿ ಆಗ್ರಹ

07/12/2024, 15:01

ಬೆಂಗಳೂರು(reporterkarnataka.com):‌ ರಾಜ್ಯದ ಸರಕಾರಿ ಆಸ್ಪತ್ರೆಗಳಲ್ಲಿ ಬಾಣಂತಿಯರ ಸರಣಿ ಸಾವಿನ ಬಗ್ಗೆ ಹೈಕೋರ್ಟ್ ನ ಹಾಲಿ ನ್ಯಾಯಮೂರ್ತಿಗಳಿಂದ ಸಮಗ್ರ ತನಿಖೆ ನಡೆಸಬೇಕೆಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ
ಒತ್ತಾಯಿಸಿದ್ದಾರೆ.
ಬಾಣಂತಿಯರ ಸಾವಿನ ವಿಷಯದಲ್ಲಿ ಸರಕಾರ ನುಣಚಿಕೊಳ್ಳಲು ಸಾಧ್ಯವಿಲ್ಲ. ಹೈಕೋರ್ಟ್ ನ ಹಾಲಿ ನ್ಯಾಯಮೂರ್ತಿಗಳಿಂದ ತನಿಖೆ ನಡೆಸಬೇಕು. ಹದಗೆಟ್ಟ ಆರೋಗ್ಯ ವ್ಯವಸ್ಥೆಯನ್ನು ಮತ್ತೆ ಹಾದಿಗೆ ತರುವ ಕೆಲಸ ತುರ್ತಾಗಿ ಆಗಬೇಕೆಂದು ಅವರು ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.
ಸರಕಾರಕ್ಕೆ ಕಳಪೆ ಔಷಧ ಪೂರೈಕೆ ವಿಷಯ ಗಮನಕ್ಕೆ ಬಂದಿರಲಿಲ್ಲವೇ? ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಈ ಕುರಿತು ಮಾಹಿತಿ ಇರಲಿಲ್ಲವೇ? ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಈ ವರ್ಷ 327 ಬಾಣಂತಿಯರು ಆಸ್ಪತ್ರೆಗಳಲ್ಲಿ ಸಾವನ್ನಪ್ಪಿದ್ದಾರೆಂದು ಸ್ವತಃ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರೇ ಮಾಹಿತಿ ನೀಡಿದ್ದಾರೆ. ಮಾಹಿತಿ ಕೇಳಿ ಆಘಾತವುಂಟು ಮಾಡಿದೆ. ವೈದ್ಯ ಕ್ಷೇತ್ರದಲ್ಲಿ ಅಗಾಧ ಮುನ್ನಡೆ ಸಾಧಿಸಿರುವ ಈ ಆಧುನಿಕ ಕಾಲದಲ್ಲಿಯೂ ಮಹಿಳೆಯರು ಆಸ್ಪತ್ರೆಗಳಲ್ಲಿಯೇ ಜೀವ ಕಳೆದುಕೊಳ್ಳುತ್ತಿರುವುದು ರಾಜ್ಯಕ್ಕೆ ಗೌರವ ತರುವ ವಿಚಾರವಲ್ಲ ಎಂದು ಅವರು ಹೇಳಿದ್ದಾರೆ.
ಗೃಹಲಕ್ಷ್ಮಿ ಗ್ಯಾರಂಟಿ ಕೊಟ್ಟು ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣ ಮಾಡುತ್ತಿದ್ದೇವೆ ಎನ್ನುವ ರಾಜ್ಯ ಕಾಂಗ್ರೆಸ್ ಸರಕಾರ, ಆಸ್ಪತ್ರೆಗಳಲ್ಲಿ ಅದೇ ಗೃಹಲಕ್ಷ್ಮೀಯರ ಜೀವಹರಣ ಮಾಡುತ್ತಿದೆ. ಮಗುವಿಗೆ ಜನ್ಮ ನೀಡಲು ಸರಕಾರಿ ಆಸ್ಪತ್ರೆಗೆ ವಿಶ್ವಾಸದಿಂದ ತೆರಳುವ ಗೃಹಲಕ್ಷ್ಮಿಯರು ಜೀವಸಮೇತ ಮರಳಿ ಮನೆಗೆ ಬರುವ ಗ್ಯಾರಂಟಿಯೇ ಇಲ್ಲ. ಇದೇನಾ ಮಹಿಳೆಯರ ಸಬಲೀಕರಣ? ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
ರಾಜ್ಯದಲ್ಲಿ ಸರಕಾರಿ ಆರೋಗ್ಯ ವ್ಯವಸ್ಥೆ ಪೂರ್ಣ ಹದಗೆಟ್ಟಿದೆ. ಆಸ್ಪತ್ರೆಗಳು ಸಾವಿನ ಕೂಪಗಳಾಗಿವೆ. ಕಳಪೆ ಗ್ಲೂಕೋಸ್, ಔಷಧಗಳಿಂದ ಗೃಹಲಕ್ಷ್ಮೀಯರು ಬಲಿಯಾಗುತ್ತಿದ್ದಾರೆ. ಬಳ್ಳಾರಿ ಆಸ್ಪತ್ರೆಯಲ್ಲಿ IV ದ್ರಾವಣ, ಅಂದರೆ ರಿಂಗರ್ ಲ್ಯಾಕ್ಟೇಟ್ ದ್ರಾವಣ ಪಡೆದ ಎರಡೇ ಗಂಟೆಯಲ್ಲಿ 9 ಬಾಣಂತಿಯರು ಅಸ್ವಸ್ಥರಾಗಿದ್ದರೆನ್ನುವುದು ಕಳವಳಕಾರಿ. ಹಾಗಾದರೆ, ಈ ದ್ರಾವಣ ಪೂರೈಸಿದ ಕಂಪನಿ ಯಾವುದು? ಅದು ಯಾರದ್ದು? ಎಂದು ಕುಮಾರಸ್ವಾಮಿ ಅವರು ಕೇಳಿದ್ದಾರೆ.
ಅನೇಕ ದಿನಗಳಿಂದ ಕಳಪೆ ಗ್ಲೂಕೋಸ್, ಔಷಧ ಪೂರೈಕೆ ಆಗುತ್ತಿದ್ದರೂ ಸರಕಾರ ಏನು ಮಾಡುತ್ತಿತ್ತು? ಇಷ್ಟು ಸೂಕ್ಷ್ಮ ವಿಚಾರವನ್ನು ಆರೋಗ್ಯ ಸಚಿವರು ಅಲಕ್ಷ್ಯ ಮಾಡಿದ್ದೇಕೆ? ಸಚಿವರಿಗೆ ಇಲಾಖೆಯಲ್ಲಿ ಏನೇನು ನಡೆಯುತ್ತಿದೆ ಎನ್ನುವುದು ಗೊತ್ತೇ ಇರಲಿಲ್ಲವೇ? ಎಂದು ಆರೋಗ್ಯ ಸಚಿವರನ್ನು ನೇರವಾಗಿ ಪ್ರಶ್ನೆ ಮಾಡಿದ್ದಾರೆ.
ನನ್ನ ತಪ್ಪಿದ್ದರೆ ರಾಜೀನಾಮೆ ಕೊಡುವೆ ಎಂಬ ಸಚಿವರ ಹೇಳಿಕೆ ಸರಿಯಲ್ಲ. ಜವಾಬ್ದಾರಿ ಕೊಟ್ಟಿರುವುದು ಕೈ ತೊಳೆದುಕೊಂಡು ಪಾರಾಗಲಿಕ್ಕಲ್ಲ. ಅಗತ್ಯವಿರುವುದು ರೋಗಗ್ರಸ್ತ ಆರೋಗ್ಯ ಇಲಾಖೆಗೆ ಸೂಕ್ತ ಚಿಕಿತ್ಸೆ. ಪಲಾಯನಕ್ಕಿಂತ ಪ್ರಾಯಶ್ಚಿತ್ತ ಮುಖ್ಯ. ಇಲಾಖೆಯನ್ನು ಸರಿ ಮಾಡುವುದು ಅವರ ಹೊಣೆ. ಗೃಹಲಕ್ಷ್ಮೀಯರ ಪಾಪ ಅವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು