8:52 PM Saturday27 - June 2026
ಬ್ರೇಕಿಂಗ್ ನ್ಯೂಸ್
ವಿರಾಜಪೇಟೆ: ಕಾಡಾನೆ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಮಹಿಳೆ ಪಾರು ಮಂಗಳೂರಿನಲ್ಲೇ ಇದ್ದಿದ್ದರೆ ಶಿಕ್ಷಕನಾಗಿರುತ್ತಿದ್ದೆ: ಬಾಲಿವುಡ್ ಬಾದ್ ಶಾ ಶಾರುಖ್‌ ಖಾನ್ ಎಐ ತಂತ್ರಜ್ಞಾನದಲ್ಲಿ ಗೃಹಿಣಿಯ ಫೋಟೋ ಎಡಿಟ್; 30 ಲಕ್ಷಕ್ಕೆ ಬೇಡಿಕೆ; ಮಹಿಳೆ ಆತ್ಮಹತ್ಯೆಗೆ… ಟ್ರಾಫಿಕ್ ಸಮಸ್ಯೆಯಾಗಿದ್ದು ನಿಜ, ನೀಟ್ ವಿದ್ಯಾರ್ಥಿಗಳಿಗೆ ತೊಂದರೆಯಾಗಿದ್ದರೆ ಸಹಾಯ ಮಾಡ್ತೀವಿ: ಕೆಪಿಸಿಸಿ ಅಧ್ಯಕ್ಷ… ಚನ್ನಪಟ್ಟಣ | ಎಕ್ಸ್​ಪ್ರೆಸ್​ ರಸ್ತೆಯಲ್ಲಿ ಭೀಕರ ಅಪಘಾತ: ಕಾರಿನ ಚಕ್ರ ಸ್ಫೋಟಗೊಂಡು ಚಾಲಕ… ಹಸೆಮಣೆ ಏರಬೇಕಿದ್ದಾಕೆಗೆ ಪಾಪಿ ಯುವಕನಿಂದ ಬೆದರಿಕೆ: ಮಾನಕ್ಕೆ ಅಂಜಿ ಒಂದೇ ಕುಟುಂಬದ ಮೂವರು… ಚುನಾವಣೆಗಷ್ಟೇ ಅಲ್ಲ, ಸಿದ್ಧಾಂತದ ಬಲವರ್ಧನೆಗೆ ಕೆಪಿಸಿಸಿ ಅಧ್ಯಕ್ಷರಾಗಿ ಹರಿಪ್ರಸಾದ್ ಆಯ್ಕೆ: ಮಾಜಿ ಸಿಎಂ… ತೀರ್ಥಹಳ್ಳಿ | ಶಿವರಾಜಪುರ ಬಳಿ ಎರಡು ಕಾರುಗಳ ನಡುವೆ ಭೀಕರ ಅಪಘಾತ: ಸಂಪೂರ್ಣ… Bangalore | ಬಿಡದಿ ಟೌನ್‌ಶಿಪ್ ವಿರುದ್ಧ ನಿಖಿಲ್ ಕುಮಾರಸ್ವಾಮಿ ಪಾದಯಾತ್ರೆಗೆ ಗ್ರಾಮಸ್ಥರ ತಡೆ:… ಬೆಂಗಳೂರು ಅರಮನೆ ಮೈದಾನದಲ್ಲಿ ಬೃಹತ್ ಸಮಾರಂಭ: ಕೆಪಿಸಿಸಿ ಅಧ್ಯಕ್ಷ ಗದ್ದುಗೆ ಏರಿದ ಖಡಕ್…

ಇತ್ತೀಚಿನ ಸುದ್ದಿ

ಸರಳ ಸಜ್ಜನಿಕೆಯ ಡಾ.ಎಚ್‌ ಎಸ್‌. ವೆಂಕಟೇಶ್‌ ಮೂರ್ತಿ: ಪುರುಷೋತ್ತಮ ಬಿಳಿಮಲೆ ನುಡಿ ನಮನ

31/05/2025, 23:04

ಬೆಂಗಳೂರು(reporterkarnataka.com): ಕನ್ನಡಿಗರ ಜೀವನೋತ್ಸಾಹವನ್ನು ಹೆಚ್ಚಿಸಿದ ಕವಿ ಎಚ್‌ ಎಸ್‌ ವೆಂಕಟೇಶ್‌ ಮೂರ್ತಿ ಅವರಿಗೆ ಗೌರವಪೂರ್ವಕ ನಮನಗಳು

ಎಚ್.ಎಸ್.ವೆಂಕಟೇಶಮೂರ್ತಿ (ಜೂನ್ ೨೩,೧೯೪೪ – ಮೇ ೩೦, ೨೦೨೫) ಅಂದರೆ ಕನ್ನಡಿಗರಿಗೆ ಬಹಳ ಪ್ರೀತಿ. ಅವರ ಕವಿತೆಗಳೆಲ್ಲ ಹಾಡುಗಳಾಗಿ ಕನ್ನಡಿಗರ ಮನೆ ಮನೆ ತಲುಪಿದ್ದು ನಮಗೆ ಗೊತ್ತೇ ಇದೆ. ಯಾವುದೇ ಸುಗಮ ಸಂಗೀತ ಕಾರ್ಯಕ್ರಮಗಳಲ್ಲಿ ವೆಂಕಟೇಶಮೂರ್ತಿಯವರ ಕವಿತೆಗಳನ್ನು ಹಾಡದಿದ್ದರೆ ಕಲಾವಿದರಿಗೂ ಸಮಾಧಾನ ಇಲ್ಲ. ಪೌರಾಣಿಕ ಪ್ರತಿಮೆಗಳನ್ನು ಆಧುನಿಕತೆಗೆ ಒಗ್ಗಿಸಿ ಬರೆಯುವ ಅವರ ಶೈಲಿ ಮೋಹಕವಾದುದು. ಈ ವಿಷಯದಲ್ಲಿ ʼ ನಾನು ನಿಸಾರ್‌ ಅಹಮದ್‌ ಅವರಿಂದ ಪ್ರೇರಣೆ ಪಡೆದೆʼ ಎಂದು ಅವರು ಹೇಳುತ್ತಿದ್ದರು.

ವೆಂಟೇಶಮೂರ್ತಿಯವರ ಬರೆಹದ ವಿಸ್ತಾರ ದೊಡ್ಡದು. ಅವರು ಕವಿತೆ, ನಾಟಕ, ಪ್ರಬಂಧ, ಕಾದಂಬರಿ, ಮಕ್ಕಳ ಸಾಹಿತ್ಯ, ಅನುವಾದ, ವಿಮರ್ಶೆ, ಹಳಗನ್ನಡ ಇತ್ಯಾದಿ ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದಾರೆ. ʼಕನ್ನಡದಲ್ಲಿ ಕಥನ ಕವನಗಳುʼ ಅವರಿಗೆ ಡಾಕ್ಟರೇಟ್‌ ಪದವಿ ತಂದುಕೊಟ್ಟ ಮಹಾಪ್ರಬಂಧ. ಅವರು ೮೫ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೂ ಆಗಿದ್ದರು. ಬೆಂಗಳೂರಿನ ಸೇಂಟ್ ಜೋಸೆಫ್ ವಾಣಿಜ್ಯ ಕಾಲೇಜಿನಲ್ಲಿ ಕನ್ನಡ ಸಂಘ ಕಟ್ಟಿ ಅನೇಕರಿಗೆ ಕನ್ನಡದಲ್ಲಿ ಬರೆಯಲು ಪ್ರೇರಣೆ ನೀಡಿದರು.

ಪರಿವೃತ್ತ, ಬಾಗಿಲು ಬಡಿವ ಜನಗಳು, ಸಿಂದಬಾದನ ಆತ್ಮಕಥೆ, ಒಣ ಮರದ ಗಿಳಿಗಳು, ಸೌಗಂಧಿಕ, ಇಂದುಮುಖಿ, ಎಲೆಗಳು ನೂರಾರು, ಭೂಮಿಯೂ ಒಂದು ಆಕಾಶ, ಮೊದಲಾದುವು ಅವರ ಪ್ರಮುಖ ಕವನ ಸಂಕಲನಗಳು. ಬಾಣಸವಾಡಿಯ ಬೆಂಕಿ, ಮತ್ತು ಪುಟ್ಟಾರಿಯ ಮತಾಂತರ ಕತ ಸಂಕಲನಗಳು. ತಾಪಿ, ಅಮಾನುಷರು, ಕದಿರನ ಕೋಟೆ ಮತ್ತು ಅಗ್ನಿಮುಖಿ ಅವರ ಜನಪ್ರಿಯ ಕಾದಂಬರಿಗಳು. ನೂರು ಮರ, ನೂರು ಸ್ವರ, ಮೇಘದೂತ, ಮತ್ತು ಆಕಾಶದ ಹಕ್ಕು ವಿಮರ್ಶಾ ಸಂಕಲನಗಳು. ಹೆಜ್ಜೆಗಳು, ಒಂದು ಸೈನಿಕ ವೃತ್ತಾಂತ, ಕತ್ತಲೆಗೆ ಎಷ್ಟು ಮುಖ, ಚಿತ್ರಪಟ, ಅಗ್ನಿವರ್ಣ ಅವರ ಪ್ರಸಿದ್ಧ ನಾಟಕಗಳು. ಕಾಳಿದಾಸನ ಋತುಸಂಹಾರವನ್ನು ಋತುವಿಲಾಸ ಹೆಸರಲ್ಲಿ ಸೊಗಸಾಗಿ ಅನುವಾದಿಸಿದ್ದಾರೆ. ಹಕ್ಕಿಸಾಲು ಮತ್ತು ಹೂವಿನ ಶಾಲೆ ಅವರಿಗೆ ಪ್ರಸಿದ್ಧಿ ತಂದುಕೊಟ್ಟ ಮಕ್ಕಳ ಕವಿತೆಗಳ ಸಂಕಲನ. ಇಲ್ಲಿಯ ಕವಿತೆಗಳು ಕ್ಯಾಸೆಟ್ಟಲ್ಲಿ ಬಂದಾಗ ಮಾರಾಟದಲ್ಲಿ ಇತಿಹಾಸವನ್ನೇ ನಿರ್ಮಿಸಿತ್ತು.

ಮೂರ್ತಿಯವರು ಒಳ್ಳೆಯ ಭಾಷಣಕಾರರಾಗಿದ್ದರು. ಸ್ನೇಹಕ್ಕೆ ಬಹಳ ಬೆಲೆ ಕೊಡುತ್ತಿದ್ದರು. ಸರಳ ಸಜ್ಜನಿಕೆಯ ವ್ಯಕ್ತಿತ್ವ ಅವರದು. ಅವರಿಗೆ ಅಂತಿಮ ನಮನಗಳು.

ಇತ್ತೀಚಿನ ಸುದ್ದಿ

ಜಾಹೀರಾತು