4:09 AM Friday6 - November 2026
ಬ್ರೇಕಿಂಗ್ ನ್ಯೂಸ್
Bangalore | ಹಾಕಿ ದಿಗ್ಗಜ ಕೊಡಗಿನ ಎಂ.ಎಂ. ಸೋಮಯ್ಯ ಮನೆಯಲ್ಲಿದ್ದ ಒಲಿಂಪಿಕ್ಸ್ ಚಿನ್ನದ… ಬಸ್ ದರ ಏರಿಕೆ | ಹೆಂಡ್ತಿಗೆ ಫ್ರಿ ಕೊಟ್ಟು ಗಂಡನಿಂದ ಡಬಲ್ ವಸೂಲಿ… Mysore | ಹುಣಸೂರು ಬಳಿ ಬೈಕ್‌ಗೆ ಒಕ್ಕಣೆ ಯಂತ್ರ ಡಿಕ್ಕಿ: ಸವಾರರಿಬ್ಬರ ದುರ್ಮರಣ ಕುಟುಂಬ ಸಮೇತರಾಗಿ ಹಾಸನಾಂಬೆ ದೇವಿಯ ದರ್ಶನ ಪಡೆದ ಸಚಿವ ಕೃಷ್ಣ ಬೈರೇಗೌಡ: ₹1,000… Kodagu | ಚಲಿಸುತ್ತಿದ್ದಾಗಲೇ ಕೆಎಸ್ಸಾರ್ಟಿಸಿ ಬಸ್ಸಿನಲ್ಲಿ ಹೊಗೆ: ಪ್ರಯಾಣಿಕರಲ್ಲಿ ಆತಂಕ ಅಂತಾರಾಷ್ಟ್ರೀಯ ಸಾಧಕ ಡಾ. ಜಿ. ರಾಮಕೃಷ್ಣ ಆಚಾರ್ ಅವರ ಜೀವನಚರಿತ್ರೆ ‘Village Boy… ಸಿಡಿ ಫ್ಯಾಕ್ಟರಿ ಇರೋದು ಅಲ್ಲೇ: ಪ್ರಜ್ವಲ್ ರೇವಣ್ಣ ಕೇಸ್​ನಲ್ಲಿ ಸ್ಫೋಟಕ ಮಾಹಿತಿ ಬಿಚ್ಚಿಟ್ಟ… ಸರ್ಕಾರಿ ಕಚೇರಿ, ಖಾಸಗಿ ಕಂಪನಿಗಳಲ್ಲಿ ಕನ್ನಡ ಬಾವುಟ ಕಡ್ಡಾಯ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಘೋಷಣೆ ಆಗುಂಬೆ ಬಳಿ ಭೀಕರ ಕಾರು ಅಪಘಾತ: ವೈದ್ಯ ವಿದ್ಯಾರ್ಥಿ ದುರ್ಮರಣ; 4 ಮಂದಿಗೆ… ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ‘ಇಂಡಿಯಾ’ ಮೈತ್ರಿಕೂಟ ಪಟ್ಟು |…

ಇತ್ತೀಚಿನ ಸುದ್ದಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಸ್ವಾಗತಿಸಿದ ಮಾಜಿ ಪ್ರಧಾನಿ ದೇವೇಗೌಡ

08/05/2025, 22:57

*ಭಾರತದ್ದು ಪ್ರಬುದ್ಧ, ಸಂಯಮದ ಮಿಲಿಟರಿ ಪ್ರತಿಕ್ರಿಯೆ ಎಂದ ಜೆಡಿಎಸ್ ರಾಷ್ಟ್ರಾಧ್ಯಕ್ಷರು*

ಬೆಂಗಳೂರು(reporterkarnataka.com): ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಪಾಕಿಸ್ತಾನದಲ್ಲಿರುವ ಭಯೋತ್ಪಾದಕ ಶಿಬಿರಗಳ ಮೇಲೆ ಆಪರೇಷನ್ ಸಿಂಧೂರ ಹೆಸರಿನಲ್ಲಿ ಮಿಲಿಟರಿ ಕಾರ್ಯಾಚರಣೆ ನಡೆಸಿರುವ ಭಾರತ ಸರ್ಕಾರದ ಕ್ರಮವನ್ನು ಮಾಜಿ ಪ್ರಧಾನಿಗಳಾದ ಹೆಚ್.ಡಿ. ದೇವೇಗೌಡರು ಮುಕ್ತಕಂಠದಿಂದ ಸ್ವಾಗತಿಸಿದ್ದಾರೆ.
ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗುರುವಾರ ಪತ್ರ ಬರೆದಿರುವ ದೇವೇಗೌಡರು, ಮೇ 7ರಂದು ಪಹಲ್ಗಾಮ್ ನಲ್ಲಿ ನಡೆದಿರುವ ಭಯೋತ್ಪಾದಕ ದಾಳಿಗೆ ಭಾರತದ ಪ್ರಬುದ್ಧ ಮತ್ತು ಸಂಯಮದ ಮಿಲಿಟರಿ ಪ್ರತಿಕ್ರಿಯೆಯನ್ನು ನೀಡಿದೆ. ಈ ಹಿನ್ನೆಲೆಯಲ್ಲಿ ನಾನು ನಿಮ್ಮನ್ನು ಅಭಿನಂದಿಸುತ್ತೇನೆ ಎಂದು ತಿಳಿಸಿದ್ದಾರೆ.
ಸೌದಿ ಅರೇಬಿಯಾ ಭೇಟಿಯಲ್ಲಿದ್ದ ನೀವು ಭಯೋತ್ಪಾದಕ ದಾಳಿ ವಿಷಯ ಗೊತ್ತಾಗುತ್ತದ್ದಂತೆಯೇ ಭೇಟಿಯನ್ನು ಮೊಟಕುಗೊಳಿಸಿ ಕೂಡಲೇ ಸ್ವದೇಶಕ್ಕೆ ವಾಪಸ್ ಬಂದಿರಿ. ತಕ್ಷಣದಿಂದಲೇ ದೇಶದಲ್ಲಿ ಸೃಷ್ಟಿಯಾಗಿದ್ದ ಪರಿಸ್ಥಿತಿಯ ಮೇಲ್ವಿಚಾರಣೆ ನಡೆಸುವುದರ ಜೊತೆಗೆ, ವ್ಯೂಹಾತ್ಮಕ ಸಭೆಗಳನ್ನು ನಡೆಸಿ ಜಾಗತಿಕ ಬೆಂಬಲವನ್ನು ಸಜ್ಜುಗೊಳಿಸಲು ಮಹತ್ವದ ಪಾತ್ರ ವಹಿಸಿದಿರಿ. ಸಶಸ್ತ್ರ ಪಡೆಗಳಿಗೆ ಸ್ಫೂರ್ತಿ ನೀಡಲು ತಾವು ಮೊದಲ ದಿನದಿಂದಲೇ ನೀವು ತೆಗೆದುಕೊಂಡ ದೃಢ ನಿರ್ಧಾರದ ಕ್ರಮಗಳನ್ನು ನಾನು ಗಮನಿಸುತ್ತಿದ್ದೇನೆ. ನಂತರ ನೀವು ಎಲ್ಲಾ ತುರ್ತು ಪರಿಸ್ಥಿತಿಗಳ ಮೇಲ್ವಿಚಾರಣೆ ನಡೆಸಲು ಯುರೋಪ್ ಪ್ರವಾಸವನ್ನು ರದ್ದುಗೊಳಿಸಿದ್ದೀರಿ ಎಂದು ಮಾಜಿ ಪ್ರಧಾನಿಗಳು ಮೋದಿ ಅವರ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕಳೆದ ಎರಡು ವಾರಗಳಿಂದ ನೀವು ಬಹಳ ಒತ್ತಡ ಮತ್ತು ಸಂಯಮದಿಂದ ಕರ್ತವ್ಯ ನಿರ್ವಹಿಸುತ್ತಿದ್ದೀರಿ. ದೇವರು ನಿಮಗೆ ದುಷ್ಟರನ್ನು ಹತ್ತಿಕ್ಕುವ ಸರ್ವಶಕ್ತಿಯನ್ನು ನೀಡಲಿ. ದೇಶ ಎದುರಿಸುತ್ತಿರುವ ಎಲ್ಲಾ ಸಮಸ್ಯೆಗಳನ್ನೂ ನಿವಾರಿಸುವ ಶಕ್ತಿಯೂ ನಿಮಗೆ ಸಿಗಲಿ. ಕಠಿಣ ಸಂದರ್ಭದಲ್ಲಿ ದೇಶದ ನಾಯಕತ್ವ ವಹಿಸಿರುವ ನಿಮ್ಮ ಹೆಸರು ಇತಿಹಾಸದಲ್ಲಿ ಪ್ರಕಾಶಮಾನವಾಗಿ ದಾಖಲಾಗಲಿದೆ ಎಂದು ದೇವೇಗೌಡರು ಪ್ರಧಾನಿಗಳಿಗೆ ಪತ್ರದಲ್ಲಿ ಹೇಳಿದ್ದಾರೆ.
ಆಧ್ಯಾತ್ಮಿಕ ಪ್ರಜ್ಞೆ, ಆಳವಾದ ಚಿಂತನೆ ಮತ್ತು ನಿರಂತರ ಪ್ರಾರ್ಥನೆ ಇಲ್ಲದೆ ಸಮತೋಲನ ಮತ್ತು ಸಮಚಿತ್ತತೆಯನ್ನು ಕಂಡುಕೊಳ್ಳುವುದು ಸುಲಭವಲ್ಲ ಎಂದು ನನಗೆ ತಿಳಿದಿದೆ. ಕಳೆದ ಕೆಲವು ದಿನಗಳಲ್ಲಿ ನೀವು ಎಲ್ಲವನ್ನೂ ಉತ್ತಮ ರೀತಿಯಲ್ಲಿ ಸಾಧಿಸಿದ್ದೀರಿ. ನಿಮ್ಮ ಇಚ್ಛಾಶಕ್ತಿಯನ್ನು ಸಶಕ್ತವಾಗಿ ಪ್ರದರ್ಶಿಸಿದ್ದೀರಿ. ಹಿಂದೆಯೂ ಹಲವಾರು ಸಂದರ್ಭಗಳಲ್ಲಿ ನಿಮ್ಮ ಈ ರೀತಿಯ ನಾಯಕತ್ವ ಗುಣ ಸ್ಪಷ್ಟವಾಗಿ ಗೋಚರಿಸಿದೆ ಎಂದು ಮಾಜಿ ಪ್ರಧಾನಿಗಳು ಪತ್ರದಲ್ಲಿ ತಿಳಿಸಿದ್ದಾರೆ.
ಭಯೋತ್ಪಾದನೆಯಂತಹ ಅಧರ್ಮದ ವಿರುದ್ಧ ನಾವು ಈ ಧರ್ಮದ ಯುದ್ಧವನ್ನು ನಡೆಸುತ್ತಿರುವಾಗ ದೇವರು ನಿಮ್ಮ ಜೊತೆಯಲ್ಲಿಯೇ ಇರಲಿ. ನಮ್ಮ ಮಹಾನ್ ರಾಷ್ಟ್ರವನ್ನು ರಕ್ಷಿಸಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಭಾರತವು ಶಾಂತಿಪ್ರಿಯ ರಾಷ್ಟ್ರವಾಗಿದೆ ಮತ್ತು ಯಾವಾಗಲೂ ಜಗತ್ತಿನಲ್ಲಿ ಸಕಾರಾತ್ಮಕತೆಯ ಬೆಳಕನ್ನು ಹರಡಿದೆ. ಆದರೆ ಯಾರಾದರೂ ರಾಷ್ಟದ ಶಾಂತಿಪ್ರಿಯತೆಯನ್ನೇ ನಮ್ಮ ದೌರ್ಬಲ್ಯವೆಂದು ನೋಡಿದರೆ, ನಾವು ಎಂತಹ ಸಮರ್ಥರು ಎಂಬುದನ್ನು ಅವರಿಗೆ ತೋರಿಸಿ ಕೊಟ್ಟಿದ್ದೀರಿ ಎಂದು ಮಾಜಿ ಪ್ರಧಾನಿಗಳು ಮೋದಿ ಅವರನ್ನು ಕೊಂಡಾಡಿದ್ದಾರೆ.

ನಾವು ಎದುರಿಸುತ್ತಿರುವ ಸವಾಲುಗಳು ಖಂಡಿತವಾಗಿಯೂ ಇಲ್ಲಿಗೆ ಕೊನೆಗೊಳ್ಳದಿರಬಹುದು, ಆದರೆ ನಾವು ಒಂದು ರಾಷ್ಟ್ರವಾಗಿ ಒಗ್ಗಟ್ಟಿನಿಂದ ಇರುವುದರಲ್ಲಿ ಅಪಾರ ಸಮಾಧಾನವಿದೆ. ನಾವು ಒಟ್ಟಿಗೆ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ ಹಾಗೂ ಒಂದು ರಾಷ್ಟ್ರವಾಗಿ ಮುನ್ನಡೆಯುತ್ತೇವೆ ಎಂದು ಮಾಜಿ ಪ್ರಧಾನಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು