ಇತ್ತೀಚಿನ ಸುದ್ದಿ
ಬಲವಂತದ ಮದುವೆಗೆ ಯುವತಿಯ ಅಪಹರಣ: 3 ಮಂದಿಯ ಸೆರೆ; ನ್ಯಾಯಾಲಯಕ್ಕೆ ಹಾಜರು
31/12/2021, 22:03
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಯುವಕನೊಬ್ಬನಿಗೆ ಮದುವೆ ಮಾಡಿಸುವ ದುರುದ್ದೇಶದಿಂದ ಯುವತಿಯೊಬ್ಬಳನ್ನು ಸಿನಿಮೀಯ ರೀತಿಯಲ್ಲಿ ಅಪಹರಿಸಿದ್ದು, ಕಡೂರು ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ .
ತಾಲೂಕಿನ ಮರಡಿಹಳ್ಳಿಯ ಮಲ್ಲೇಶ್(೨೬), ಎಸ್.ಜಿ.ಕೊಪ್ಪಲಿನ ಪರಮೇಶ್ (೩೦) ಮತ್ತು ಕುರುಬಗೆರೆಯ ಮಹಾಂತೇಶ್(೨೭) ಈ ಘಟನೆಯಲ್ಲಿ ಬಂಧಿತರಾಗಿದ್ದು ಅಪಹರಣಕ್ಕೊಳಗಾಗಿದ್ದ ಯುವತಿಯನ್ನು ರಕ್ಷಿಸಿದ್ದಾರೆ.
ಘಟನೆ ವಿವರ : ಡಿ.೨೭ ರ ಬೆಳಗಿನ ಜಾವ ಸುಮಾರು ೪.೧೫ಕ್ಕೆ ಮರಡಿಹಳ್ಳಿ ವಾಸಿ ಓಂಕಾರಪ್ಪ ಪತ್ನಿ ಅಮ್ಮಯ್ಯ ತಮ್ಮ ೧೭ ವರ್ಷದ ಮಗಳೊಂದಿಗೆ ಜಮೀನಿನಲ್ಲಿ ಕುಂಬಳಕಾಯಿ ಹೂ ಪರಾಗಸ್ಪರ್ಶ ಮಾಡಿಸಲು ತೆರಳುತ್ತಿದ್ದಾಗ ಈ ಘಟನೆ ನಡೆದಿದೆ .
ಮರಡಿಹಳ್ಳಿ ಮತ್ತು ಕಡೂರಹಳ್ಳಿ ಟಾರ್ ರಸ್ತೆಯಲ್ಲಿ ಬೊಲೆರೊ ವಾಹನ ಒಂದು ಹಿಂದಿನಿಂದ ಬಂದು ಓಂಕಾರಪ್ಪ ಮತ್ತು ಅಮ್ಮಯ್ಯ ಅವರಿಗೆ ವಾಹನದಲ್ಲಿದ್ದ ವ್ಯಕ್ತಿಗಳು ಥಳಿಸಿ ಅವರ ಮಗಳನ್ನು ಅಪಹರಿಸಿದ್ದಾರೆ.
ವಾಹನದಲ್ಲಿ ಗೋವಿಂದಪ್ಪ,ಪರಮೇಶ್, ಸಣ್ಣೆಗೌಡ ಬಂದಿದ್ದರೆಂದು ಓಂಕಾರಪ್ಪ ಗುರುತು ಹಿಡಿದಿದ್ದು ಈ ಅಪಹರಣ ಸಂದರ್ಭ ಅಲ್ಲೇ ಹೊಲದಲ್ಲಿ ಅಡಗಿ ಕುಳಿತಿದ್ದ ೩-೪ ಜನ ಅಪಹರಣಕಾರರೊಂದಿಗೆ ಕೈಜೋಡಿಸಿದ್ದಾರೆ.
ತನಗೆ ಹಾಗೂ ಪತ್ನಿಯ ಕೈಕಾಲುಗಳಿಗೆ ತೀವ್ರ ಪೆಟ್ಟಾಗಿದೆ ಎಂದು ತಿಳಿಸಿರುವ ಓಂಕಾರಪ್ಪ ಈ ಘಟನೆಯಲ್ಲಿ ಗ್ರಾಮದ ಮಲ್ಲೇಶ್ ಮತ್ತು ಮಾರುತಿ ಅವರ ಕೈವಾಡವಿದೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.
ದೂರು ನೀಡಿದ ಬಳಿಕ ಕಾರ್ಯ ಪ್ರವೃತ್ತರಾದ ಕಡೂರು ಪೊಲೀಸರು ಬಂಧಿತ ಆರೋಪಿ ಮಹಂತೇಶ್ , ಸಂಬಂಧಿ ಎಮ್ಮೆದೊಡ್ಡಿ ಭಾಗದ ಸಗಣಿಬಸವನಹಳ್ಳಿ ಗ್ರಾಮದ ಗುರುಸ್ವಾಮಿ ಮನೆಯಲ್ಲಿ ಯುವತಿಯನ್ನು ಪತ್ತೆ ಮಾಡಿದ್ದಾರೆ.
ಯುವತಿಯನ್ನು ವೈದೈಕೀಯ ಪರೀಕ್ಷೆ ಬಳಿಕ ಪೋಷಕರಿಗೆ ಒಪ್ಪಿಸಲಾಗಿದೆ.
ಬಂಧಿತರಲ್ಲಿ ಓರ್ವನಾದ ಪರಮೇಶ್ ಕೆಲವು ತಿಂಗಳ ಹಿಂದೆ ಯುವತಿಯನ್ನು ಮದುವೆ ಮಾಡಿಕೊಡಿ ಎಂದು ಪ್ರಸ್ತಾಪಿದ್ದು, ಪಾಲಕ ಓಂಕಾರಪ್ಪ ಇದನ್ನು ತಿರಸ್ಕರಿಸಿದ್ದು ಈ ಹಿನ್ನೆಲೆಯಲ್ಲಿ ಯುವತಿಯನ್ನು ಅಪಹರಿಸಲಾಗಿದೆ ಎಂಬ ಅಂಶ ಪೊಲೀಸರ ಪ್ರಾಥಮಿಕ ತನಿಖೆಯಿಂದ ಹೊರಬಿದ್ದಿದೆ.
ಆರೋಪಿಗಳನ್ನು ಕಡೂರು ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ.












