ಇತ್ತೀಚಿನ ಸುದ್ದಿ
ಡಾ. ಮನಮೋಹನ್ ಸಿಂಗ್ ಅರಿವಿಗೆ ಬಾರದಂತೆ ಮೋದಿ ರಕ್ಷಣೆಗೆ ನಿಂತಿದ್ದ ಕೈ ನಾಯಕರು: ಕೇಂದ್ರ ಮಾಜಿ ಸಚಿವ ವೀರಪ್ಪ ಮೊಯ್ಲಿ ಆರೋಪ
20/11/2026, 09:58
ನವದೆಹಲಿ(reporterkarnataka.com): ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು ದೇಶದ ಅತ್ಯಂತ ಪ್ರಬಲ ನಾಯಕರಾಗಿ ಬೆಳೆದು ನಿಲ್ಲಲು ಮತ್ತು ಅಂದು ಜೈಲು ಅಥವಾ ಗಡಿಪಾರು ಶಿಕ್ಷೆಯಿಂದ ಪಾರಾಗಲು ಯುಪಿಎ ಅವಧಿಯ ಕೆಲವು ಕಾಂಗ್ರೆಸ್ ನಾಯಕರೇ ನೇರ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರದ ಮಾಜಿ ಕಾನೂನು ಸಚಿವ ಎಂ. ವೀರಪ್ಪ ಮೊಯ್ಲಿ ಗಂಭೀರ ಆರೋಪ ಮಾಡಿದ್ದಾರೆ.
ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರ ಬಿಲಾಂಗಿಂಗ್: ಎ ಜರ್ನಿ ಆಫ್ ಲವ್ (Belonging: A Journey of Love) ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಸ್ವಪಕ್ಷೀಯ ನಾಯಕರ ಅಂದಿನ ನಡೆಗಳ ವಿರುದ್ಧ ತೀವ್ರ ಅಸಮಾಧಾನ ಹೊರಹಾಕುವ ಮೂಲಕ ರಾಷ್ಟ್ರ ರಾಜಕಾರಣದಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದಾರೆ.
*ಗುಜರಾತ್ ಗಲಭೆ ತನಿಖೆಗೆ ಅಡ್ಡಗಾಲು: ಇಲ್ಲದಿದ್ದರೆ ಮೋದಿ ಗಡಿಪಾರಾಗುತ್ತಿದ್ದರು!*
ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವ ಮುನ್ನ ಅಂದರೆ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಕಾಲಘಟ್ಟದ ರಾಜಕೀಯ ಬೆಳವಣಿಗೆಗಳನ್ನು ವೀರಪ್ಪ ಮೊಯ್ಲಿ ಈ ವೇದಿಕೆಯಲ್ಲಿ ಕೆದಕಿದ್ದಾರೆ. 2002 ರ ಗುಜರಾತ್ ಗಲಭೆ ಪ್ರಕರಣದಲ್ಲಿ ನರೇಂದ್ರ ಮೋದಿ ಅವರ ಪಾತ್ರದ ಕುರಿತಾದ ತನಿಖೆಯನ್ನು ಮುಂದುವರಿಸದಂತೆ ಅಂದಿನ ಯುಪಿಎ ಸರ್ಕಾರದಲ್ಲಿದ್ದ ಕೆಲವು ಪ್ರಭಾವಿ ನಾಯಕರೇ ತಡೆಹಿಡಿದರು ಎಂದು ಅವರು ಆರೋಪಿಸಿದ್ದಾರೆ. ನಾನು ಆ ಸಂದರ್ಭದಲ್ಲಿ ಕೇಂದ್ರ ಕಾನೂನು ಸಚಿವನಾಗಿದ್ದೆ. ಆದರೆ, ಈ ಪ್ರಕರಣದ ತನಿಖೆಯನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಮತ್ತು ಮುಂದುವರಿಸಲು ನಮ್ಮದೇ ಕಾಂಗ್ರೆಸ್ ನೇತೃತ್ವದ ಸರ್ಕಾರದ ಒಳಗಿದ್ದ ಕೆಲವರು ಬಿಡಲಿಲ್ಲ. ಒಂದು ವೇಳೆ ಅಂದು ತನಿಖೆಗೆ ಅಡ್ಡಿಪಡಿಸದೆ ಇದ್ದಿದ್ದರೆ ನರೇಂದ್ರ ಮೋದಿ ಗಡಿಪಾರು ಆಗುತ್ತಿದ್ದರು ಅಥವಾ ಜೈಲಿನಲ್ಲಿ ಇರುತ್ತಿದ್ದರು. ಆದರೆ, ತನಿಖೆ ತಡೆಯುವ ಈ ನಿರ್ಧಾರದಲ್ಲಿ ಅಂದಿನ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ಯಾವುದೇ ಪಾತ್ರವಿರಲಿಲ್ಲ ಎಂದು ಮೊಯ್ಲಿ ಸ್ಪಷ್ಟಪಡಿಸಿದ್ದಾರೆ. ಕೆಲವು ಕಾಂಗ್ರೆಸ್ ನಾಯಕರೇ ತನಿಖೆ ನಡೆಸಲು ಬಿಡದ ಕಾರಣದಿಂದಾಗಿ ಮೋದಿ ಇಂದು ಈ ಮಟ್ಟಿಗೆ ಬೆಳೆದು ನಿಂತರು, ಇಲ್ಲದೇ ಹೋಗಿದ್ದರೆ ಅವರು ಇಷ್ಟು ದೊಡ್ಡ ಮಟ್ಟದಲ್ಲಿ ಬೆಳೆಯಲು ಸಾಧ್ಯವೇ ಆಗುತ್ತಿರಲಿಲ್ಲ ಎಂದು ಕಿಡಿಕಾರಿದ್ದಾರೆ.












