ಇತ್ತೀಚಿನ ಸುದ್ದಿ
ಮಂಗಳೂರು | ಅಗತ್ಯ ವಸ್ತುಗಳ ಬೆಲೆಯೇರಿಕೆ ವಿರೋಧಿಸಿ ಬಿಜೆಪಿ ಬೃಹತ್ ಪ್ರತಿಭಟನೆ
07/11/2026, 09:22
ಮಂಗಳೂರು(reporterkarnataka.com): ರಾಜ್ಯ ಸರ್ಕಾರ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದೆ ಎಂದು ಆರೋಪಿಸಿ, ಬಿಜೆಪಿ ಕಾರ್ಯಕರ್ತರು ಗುರುವಾರ ಇಲ್ಲಿ ಪ್ರತಿಭಟನೆ ನಡೆಸಿದರು.

ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಅಗತ್ಯ ವಸ್ತುಗಳ ಬೆಲೆ ಏರಿಕೆ ಮೂಲಕ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಹೊಸ ದಾಖಲೆ ಮಾಡಿದೆ. ಒಂದೆಡೆ ಸರ್ಕಾರ ದಿವಾಳಿಯಾಗಿದೆ ಎಂದು ಮುಖ್ಯಮಂತ್ರಿ ಹೇಳುತ್ತಾರೆ, ಇನ್ನೊಂದೆಡೆ ಜೀವನಾವಶ್ಯಕ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಮುಖ್ಯಮಂತ್ರಿ ಹೇಳಿಕೆಗೆ ಇದು ಪೂರಕವಾಗಿ ಕಾಣುತ್ತದೆ. ದಸರಾ ವೇಳೆ ಹಾಲಿನ ದರ, ದೀಪಾವಳಿಗೆ ಬಸ್ ಪ್ರಯಾಣ ದರ ಹೆಚ್ಚಳ ಮಾಡಲಾಗಿದೆ. ಅಗತ್ಯ ವಸ್ತುಗಳ ದರ ಇಳಿಕೆ ಮಾಡದಿದ್ದರೆ ಬಿಜೆಪಿ ಬೀದಿಗಿಳಿದು ಪ್ರತಿಭಟಿಸಲಿದೆ’ ಎಂದರು. ಕರ್ನಾಟಕದಲ್ಲಿ ಈ ರೀತಿ ದರ ಏರಿಕೆ ಮಾಡಿ, ಸಂಗ್ರಹವಾಗುವ ಮೊತ್ತವನ್ನು ಪಂಜಾಬ್ ಮತ್ತು ಉತ್ತರ ಪ್ರದೇಶ ರಾಜ್ಯಗಳ ಚುನಾವಣೆಗೆ ಬಳಕೆ ಮಾಡುವ ಹುನ್ನಾರ ಇದಾಗಿದೆ ಎಂದು ಆರೋಪಿಸಿದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ಕುಂಪಲ ಮಾತನಾಡಿ, ‘ಸಾರಿಗೆ ದರ ಏರಿಕೆಯಾಗಿರುವುದನ್ನು ನೋಡಿದರೆ ನಡೆದುಕೊಂಡು ಹೋಗುವುದೇ ಉತ್ತಮ ಅನ್ನಿಸುತ್ತದೆ. ಹಾಲಿನ ದರವನ್ನು ಒಮ್ಮೆಲೇ ಹೆಚ್ಚಳ ಮಾಡಲಾಗಿದೆ. ಹಿಂದೆ ಬಿಜೆಪಿ ನೇತೃತ್ವದ ಸರ್ಕಾರ ಇದ್ದಾಗ ಹಾಲಿನ ದರ ಏರಿಕೆ ಆಗಿದ್ದರೂ, ಹೈನುಗಾರರಿಗೆ ಪ್ರೋತ್ಸಾಹಧನ ನೀಡಲಾಗಿತ್ತು. ಆದರೆ, ಕಾಂಗ್ರೆಸ್ ಸರ್ಕಾರ ಹೈನುಗಾರರ ಹೆಸರಿ ನಲ್ಲಿ ದರ ಹೆಚ್ಚಳ ಮಾಡಿದೆ’ ಎಂದರು.












