ಇತ್ತೀಚಿನ ಸುದ್ದಿ
Mysore | ಹುಣಸೂರು ಬಳಿ ಬೈಕ್ಗೆ ಒಕ್ಕಣೆ ಯಂತ್ರ ಡಿಕ್ಕಿ: ಸವಾರರಿಬ್ಬರ ದುರ್ಮರಣ
03/11/2026, 16:53
ಗಿರಿಧರ್ ಕೊಂಪುಳಿರ ಮೈಸೂರು
info.reporterkarnataka@gmail.com
ಬೈಕ್ ಮತ್ತು ರಾಗಿ ಒಕ್ಕಣೆ ಯಂತ್ರ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹುಣಸೂರು ತಾಲೂಕು ಹನಗೋಡು ಸಮೀಪದ ಕಿರಂಗೂರು ರಸ್ತೆಯಲ್ಲಿ ನಡೆದಿದೆ.
ನಾಗರಹೊಳೆ ಉದ್ಯಾನವನದ ಭೀಮನಕಟ್ಟೆ ಸಾಕಾನೆ ಶಿಬಿರದ ನೌಕರ ಕುಶಾಲನ ಪುತ್ರ ಪ್ರವೀಣ್ ) ಹಾಗೂ ಮಾಸ್ತಿಗುಡಿ ಕೂಸಯ್ಯನ ಪುತ್ರ ಪುನಿತ್ ಸಾವನ್ನಪ್ಪಿರುವ ದುರ್ಧೈವಿಗಳಾಗಿದ್ದಾರೆ.
ಇವರಿಬ್ಬರು ಬೈಕಿನಲ್ಲಿ ಕಿರಂಗೂರು-ಹನಗೋಡು ಮಾರ್ಗವಾಗಿ ಮಾಸ್ತಿಗುಡಿಗೆ ತೆರಳುತ್ತಿದ್ದ ವೇಳೆ ಕಿರಂಗೂರು ಕಡೆಯಿಂದ ಅತೀವೇಗವಾಗಿ ಬರುತ್ತಿದ್ದ ತಮಿಳುನಾಡಿನ ದೊಡ್ಡ ಜೋಳ ಒಕ್ಕಣೆಯಂತ್ರ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ತೀವ್ರ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಪೊಲೀಸರಿಗೆ ಮಾಹಿತಿ ದೊರೆತ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಶವವನ್ನು ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿದ್ದಾರೆ.
*ಸಾರ್ವಜನಿಕರ ಆಕ್ರೋಶ:*
ಹನಗೋಡು ಭಾಗದ ರಸ್ತೆಗಳಲ್ಲಿ ಯಾವುದೆ ರಹದಾರಿ, ವಿಮೆ ಇಲ್ಲದ ಟ್ರ್ಯಾಕ್ಟರ್ಗಳು, ಒಕ್ಕಣೆ ಯಂತ್ರಕ್ಕೆ ಸಿಲುಕಿ ಬೈಕ್ ಸವಾರರು ಸಾವನ್ನಪ್ಪುತ್ತಲೇ ಇದ್ದಾರೆ. ಟ್ರಕ್ಟರ್ಗಳಿಗೆ ಸ್ಪೀಕರ್ ಅಳವಡಿಸಿಕೊಂಡು ಜೋರಾದ ಸೌಂಡ್ ನೊಂದಿಗೆ ವಾಹನಗಳನ್ನು ಚಲಾಯಿಸುವುದರಿಂದ ಅಕ್ಕಪಕ್ಕದಲ್ಲಿ ಹೋಗುವ ವಾಹನಗಳನ್ನು ಚಾಲಕರು ಗಮನಿಸದೆ ಹಾಗೂ ಬೇಗ ಜಮೀನಿಗೆ ತೆರಳಬೇಕೆಂಬ ಧಾವಂತದಿಂದ ಈ ರೀತಿಯ ಅಪಘಾತಗಳಾಗುತ್ತಲಿವೆ ಪೊಲೀಸರು ಹಾಗೂ ಆರ್ ಟಿ ಒ ಅಧಿಕಾರಿಗಳು ಸ್ಪೀಕರ್ ಅಳವಡಿಸುವ ಹಾಗೂ ವಿಮೆ, ರಹದಾರಿ ಇಲ್ಲದ ವಾಹನಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡುತ್ತಲೇ ಇದ್ದರೂ ಸಹ ಯಾವುದೇ ಕ್ರಮವಹಿಸದೆ ಅಪಘಾತಗಳಲ್ಲಿ ಅಮಾಯಕರು ಸಾವನ್ನಪ್ಪುತ್ತಿದ್ದು, ಹಿರಿಯ ಅಧಿಕಾರಿಗಳು ಇತ್ತ ಗಮನಹರಿಸಿ ಯುವಕರ ಪ್ರಾಣ ಉಳಿಸುವಂತೆ ದಸಂಸ ಮುಖಂಡ ಕಿರಂಗೂರು ಸ್ವಾಮಿ, ಹನಗೋಡು ಸಂಜೀವ್ ಒತ್ತಾಯಿಸಿದ್ದಾರೆ.












