ಇತ್ತೀಚಿನ ಸುದ್ದಿ
Kodagu | ಚಲಿಸುತ್ತಿದ್ದಾಗಲೇ ಕೆಎಸ್ಸಾರ್ಟಿಸಿ ಬಸ್ಸಿನಲ್ಲಿ ಹೊಗೆ: ಪ್ರಯಾಣಿಕರಲ್ಲಿ ಆತಂಕ
02/11/2026, 23:14
ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಹೆದ್ದಾರಿಯಲ್ಲಿ ಸಾಗುತ್ತಿದ್ದ ಕೆ.ಎಸ್.ಆರ್.ಟಿ. ಸಿ. ಬಸ್ಸಿನಲ್ಲಿ ಒಮ್ಮೆಲೇ ದಟ್ಟವಾದ ಹೊಗೆ ಕಾಣಿಸಿಕೊಂಡು ಕೆಲಕಾಲ ಪ್ರಯಾಣಿಕರನ್ನು ಆತಂಕಕ್ಕೆ ತಳ್ಳಿದ ಘಟನೆ ಇಂದು ಸಂಜೆ 6.45 ರ ಸಮಯದಲ್ಲಿ ಸುಂಟಿಕೊಪ್ಪ ಸಮೀಪದ ಗದ್ದೆಹಳ್ಳದಲ್ಲಿ ನಡೆದಿದೆ.
ಮಡಿಕೇರಿಯಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ಈ ಅಶ್ವಮೇಧ ಬಸ್ ಗದ್ದೆಹಳ್ಳ ತಲುಪುವಷ್ಟರಲ್ಲಿ ಅದರ ಹಿಂಬದಿಯಿಂದ ದಟ್ಟವಾದ ಹೊಗೆ ಹೊರಬಂದು ಬಸ್ಸಿನ ಒಳಗೆ ಆವರಿಸಿಕೊಂಡಿದೆ. ಹೊಗೆಯ ವಾಸನೆಗೆ ಉಸಿರು ಕಟ್ಟಿದಂತಾಗಿ ಭಯಭೀತರಾದ ಪ್ರಯಾಣಿಕರು ಚಾಲಕನಿಗೆ ವಿಷಯ ತಿಳಿಸಿದ್ದಾರೆ. ಕೂಡಲೇ ಚಾಲಕ ಬಸ್ಸನ್ನು ರಸ್ತೆ ಬದಿಗೆ ನಿಲ್ಲಿಸಿ ಎಲ್ಲಾ ಪ್ರಯಾಣಿಕರನ್ನು ಕೆಳಗೆ ಇಳಿಸಿದ್ದಾರೆ. ಒಂದು ವೇಳೆ ಬಸ್ ಇನ್ನಷ್ಟು ದೂರ ಚಲಿಸಿದ್ದಿದ್ದರೆ ಬೆಂಕಿ ಹೊತ್ತಿಕೊಂಡು ಅನಾಹುತ ಸಂಭವಿಸುವ ಸಾಧ್ಯತೆ ಇತ್ತು ಎಂದು ಹೇಳಲಾಗಿದೆ.


*ನಿರ್ವಹಣೆ ಕೊರತೆ:*
ಕೆ.ಎಸ್.ಆರ್.ಟಿ.ಸಿ. ಯ ಅಧಿಕಾರಿಗಳು ಸಮರ್ಪಕವಾಗಿ ಬಸ್ ಗಳ ನಿರ್ವಹಣೆ ಮಾಡದಿರುವುದು ಮತ್ತು ಮೊದಲೇ ತಾಂತ್ರಿಕ ದೋಷಗಳನ್ನು ಪತ್ತೆಹಚ್ಚಿ ಸರಿಪಡಿಸದಿರುವುದೇ ಪ್ರಯಾಣದ ನಡುವೆ ಇಂತಹ ದೋಷ ಉಂಟಾಗಲು ಕಾರಣವೆಂದು ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.












