ಇತ್ತೀಚಿನ ಸುದ್ದಿ
ಅಂತಾರಾಷ್ಟ್ರೀಯ ಸಾಧಕ ಡಾ. ಜಿ. ರಾಮಕೃಷ್ಣ ಆಚಾರ್ ಅವರ ಜೀವನಚರಿತ್ರೆ ‘Village Boy to Global Rice Techie’ ಕೃತಿ ಬಿಡುಗಡೆ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅನಾವರಣ
02/11/2026, 21:39
ಮುಂಬೈ(reporterkarnataka.com): ಮೂಡಬಿದ್ರಿಯ ಪ್ರತಿಷ್ಠಿತ ಉದ್ಯಮಿ ಹಾಗೂ ಭತ್ತ ಸಂಸ್ಕರಣಾ ತಂತ್ರಜ್ಞಾನ ಕ್ಷೇತ್ರದ ಅಂತಾರಾಷ್ಟ್ರೀಯ ಸಾಧಕ ಡಾ. ಜಿ. ರಾಮಕೃಷ್ಣ ಆಚಾರ್ ಅವರ ಜೀವನಚರಿತ್ರೆ ‘Village Boy to Global Rice Techie’ ಕೃತಿಯನ್ನು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮುಂಬಯಿ ಐಟಿಸಿ ಗ್ರ್ಯಾಂಡ್ ಸೆಂಟ್ರಲ್ ನಲ್ಲಿ ನಡೆದ ಸಮಾರಂಭದಲ್ಲಿ ನಡೆದ ಸಮಾರಂಭದಲ್ಲಿ ಅನಾವರಣಗೊಳಿಸಿದರು.
ಕೃಷಿ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಸಾಧ್ಯತೆಗಳನ್ನು ಅನ್ವೇಷಿಸುವವರಿಗೆ, ಉದ್ಯಮಶೀಲತೆಯ ಕನಸು ಕಾಣುವ ಯುವಜನತೆಗೆ ಹಾಗೂ ಸಾಧನೆಯ ಹಾದಿಯಲ್ಲಿರುವವರಿಗೆ ಈ ಕೃತಿ ಸ್ಫೂರ್ತಿದಾಯಕ ದಾಖಲೆಯಾಗಲಿದೆ ಎಂದು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅಭಿಪ್ರಾಯ ಪಟ್ಟರು.


ಈ ಕೃತಿಯಲ್ಲಿ ಗ್ರಾಮೀಣ ಹಿನ್ನೆಲೆಯಿಂದ ಉದ್ಯಮ ಜಗತ್ತಿಗೆ ಪ್ರವೇಶಿಸಿದ, ಭತ್ತ ಸಂಸ್ಕರಣಾ ತಂತ್ರಜ್ಞಾನ ಕ್ಷೇತ್ರದಲ್ಲಿ ಜಾಗತಿಕ ಮನ್ನಣೆ ಗಳಿಸಿದ ಡಾ. ಜಿ. ರಾಮಕೃಷ್ಣ ಆಚಾರ್ ಅವರ ಅಸಾಧಾರಣ ಸಾಧನೆಯ ಪಯಣವನ್ನು ಕಟ್ಟಿಕೊಡುತ್ತದೆ. ಅವರ ಉದ್ಯಮಶೀಲತೆ, ತಾಂತ್ರಿಕ ಆವಿಷ್ಕಾರಗಳು, ವೃತ್ತಿಜೀವನದ ಸವಾಲುಗಳು ಹಾಗೂ ಯಶಸ್ಸಿನ ಮೈಲಿಗಲ್ಲುಗಳನ್ನು ಕೃತಿ ದಾಖಲಿಸಿದೆ. ಸಾಮಾನ್ಯ ಗ್ರಾಮೀಣ ಪರಿಸರದಿಂದ ಬದುಕು ಆರಂಭಿಸಿ ಜಾಗತಿಕ ಮಟ್ಟದಲ್ಲಿ ತನ್ನದೇ ಆದ ಛಾಪು ಮೂಡಿಸಿದ ಡಾ. ಆಚಾರ್ ಅವರ ಬದುಕು ಪರಿಶ್ರಮ, ಛಲ ಮತ್ತು ದೂರದೃಷ್ಟಿಗೆ ಸಾಕ್ಷಿಯಾಗಿದೆ. ಪ್ರತಿಕೂಲ ಪರಿಸ್ಥಿತಿಗಳನ್ನು ಮೆಟ್ಟಿನಿಂತು ಅವಕಾಶಗಳನ್ನು ಯಶಸ್ಸಿನ ಮೆಟ್ಟಿಲುಗಳನ್ನಾಗಿ ಪರಿವರ್ತಿಸಿದ ಅವರ ಜೀವನಗಾಥೆ ಯುವ ಉದ್ಯಮಿಗಳಿಗೆ ಮಹತ್ವದ ಸಂದೇಶ ನೀಡುತ್ತದೆ.












