ಇತ್ತೀಚಿನ ಸುದ್ದಿ
ಬೆಂಗಳೂರಿನಲ್ಲಿ ‘ಫಿಬಾ WBL ಏಷ್ಯಾ 2026’ ಕ್ರೀಡಾ ಸಂಭ್ರಮ: ಏಷ್ಯಾದ ಅಗ್ರ 6 ಮಹಿಳಾ ಬಾಸ್ಕೆಟ್‌ಬಾಲ್ ತಂಡಗಳ ನಡುವೆ ಪ್ರಶಸ್ತಿಗಾಗಿ ಸೆಣೆಸಾಟ
12/10/2026, 18:33
*ಕ್ರೀಡಾಭಿಮಾನಿಗಳಿಗೆ ರಸದೌತಣ ನೀಡಲು ಬೆಂಗಳೂರು ಸಜ್ಜು: ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ*
ಬೆಂಗಳೂರು(reporterkarnataka.com); ರಾಜಧಾನಿ ಸಿಲಿಕಾನ್ ಸಿಟಿ ಬೆಂಗಳೂರು ಮತ್ತೊಮ್ಮೆ ಜಾಗತಿಕ ಕ್ರೀಡಾ ನಕ್ಷೆಯಲ್ಲಿ ಮಿಂಚಲು ಸಜ್ಜಾಗಿದ್ದು, ಕ್ರೀಡಾಭಿಮಾನಿಗಳಿಗೆ ರಸದೌತಣ ನೀಡಲಿದೆ ಎಂದು ಉಪ ಮುಖ್ಯಮಂತ್ರಿಗಳು ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಚಿವರಾದ ಡಾ. ಜಿ. ಪರಮೇಶ್ವರ ಹೇಳಿದರು.
ಇಂದು ಶ್ರೀ ಕಂಠೀರವ ಕ್ರೀಡಾಂಗಣದಲ್ಲಿನ ಕರ್ನಾಟಕ ಒಲಂಪಿಕ್ಸ್ ಭವನದಲ್ಲಿ ಮಾಧ್ಯಮದವರನ್ನುದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕ ಸರ್ಕಾರ, ಭಾರತೀಯ ಬಾಸ್ಕೆಟ್‌ಬಾಲ್ ಫೆಡರೇಷನ್ ಮತ್ತು ಕರ್ನಾಟಕ ರಾಜ್ಯ ಬಾಸ್ಕೆಟ್‌ಬಾಲ್ ಸಂಸ್ಥೆಯ ಜಂಟಿ ಆಶ್ರಯದಲ್ಲಿ, ಅಂತಾರಾಷ್ಟ್ರೀಯ ಬಾಸ್ಕೆಟ್‌ಬಾಲ್ ಫೆಡರೇಷನ್ (ಫಿಬಾ – FIBA) ಹಾಗೂ ಫಿಬಾ ಏಷ್ಯಾದ ಸಂಯುಕ್ತಾಶ್ರಯದಲ್ಲಿ ಪ್ರತಿಷ್ಠಿತ ‘ಫಿಬಾ ಮಹಿಳಾ ಬಾಸ್ಕೆಟ್‌ಬಾಲ್ ಲೀಗ್ ಏಷ್ಯಾ-2026’ (WBL Asia 2026) ಟೂರ್ನಿಯನ್ನು ಆಯೋಜಿಸಲಾಗಿದೆ.
ಈ ಪ್ರತಿಷ್ಠಿತ ಅಂತಾರಾಷ್ಟ್ರೀಯ ಚಾಂಪಿಯನ್‌ಷಿಪ್‌ಗೆ ನಗರದ ಕಂಠೀರವ ಒಳಾಂಗಣ ಸ್ಟೇಡಿಯಂ ಆತಿಥ್ಯ ವಹಿಸಲಿದ್ದು, ಅಕ್ಟೋಬರ್ 20ರಿಂದ 25 ರವರೆಗೆ ರೋಮಾಂಚನಕಾರಿ ಪಂದ್ಯಗಳು ನಡೆಯಲಿವೆ ಎಂದು ತಿಳಿಸಿದರು.
*ಪ್ರಶಸ್ತಿಗಾಗಿ ಏಷ್ಯಾದ 6 ಚಾಂಪಿಯನ್ ಕ್ಲಬ್‌ಗಳ ಸೆಣಸಾಟ*:
ಈ ಟೂರ್ನಿಯಲ್ಲಿ ಏಷ್ಯಾದ ವಿವಿಧ ದೇಶಗಳ ಅತ್ಯುನ್ನತ ವೃತ್ತಿಪರ ಮಹಿಳಾ ಬಾಸ್ಕೆಟ್‌ಬಾಲ್ ಕ್ಲಬ್ ತಂಡಗಳಾದ ಚೀನದ ಸಿಚುವಾನ್ ಯುಯಾಂದ ಮೀಲೆ ತಂಡ, ಜಪಾನಿನ ಡೆನ್ಸೆ ಐರಿಸ್ ತಂಡ, ದಕ್ಷಿಣ ಕೊರಿಯಾದ ಕೆ.ಬಿ. ಸ್ಟಾರ್ಸ್ ತಂಡ, ಸತತ 3ನೇ ಆವೃತ್ತಿಯಲ್ಲಿ ಆಡುತ್ತಿರುವ ಏಕೈಕ ಚೈನೀಸ್ ತೈಪೆಯ ಕ್ಯಾಥೆ ಲೈಫ್ ಟೈಗರ್ಸ್ ತಂಡ, ಫಿಲಿಫೈನ್ಸ್
ಅಕಾರಿ ಸ್ಪಾರ್ಕ್ಸ್ ತಂಡ ಮತ್ತು ಭಾರತದ ಚಾಂಪಿಯನ್ ಕ್ಲಬ್ ನ ಭಾರತೀಯ ರೈಲ್ವೇಸ್ ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ.
ಎಲ್ಲಾ ಪಂದ್ಯಗಳು ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ, ಪ್ರತಿದಿನ ಎರಡು ಪಂದ್ಯಗಳು ನಡೆಯಲಿದ್ದು, ಮೊದಲ ಪಂದ್ಯ ಸಂಜೆ 4 ಗಂಟೆಗೆ ಹಾಗೂ ಎರಡನೇ ಪಂದ್ಯ ರಾತ್ರಿ 7 ಗಂಟೆಗೆ ಪ್ರಾರಂಭವಾಗಲಿವೆ ಎಂದು ತಿಳಿಸಿದರು.
*ಮತ್ತೊಮ್ಮೆ ಬಾಸ್ಕೆಟ್‌ಬಾಲ್ ‘ಹಬ್’ ಆಗಿ ಮಿಂಚಿಲಿದೆ ನಮ್ಮ ಬೆಂಗಳೂರು*:
ಉದ್ಯಾನನಗರಿ, ವಿಜ್ಞಾನ ನಗರಿ ಎನಿಸಿಕೊಂಡಿರುವ ಬೆಂಗಳೂರು ಈಗ ಬಾಸ್ಕೆಟ್‌ಬಾಲ್ ಕ್ರೀಡೆಯ ಪ್ರಮುಖ ಕೇಂದ್ರವಾಗಿ ಹೊರಹೊಮ್ಮಿದೆ. 2004 ರಿಂದಲೂ ಕರ್ನಾಟಕ ಸರ್ಕಾರದ ಸಹಯೋಗದೊಂದಿಗೆ ಕರ್ನಾಟಕ ರಾಜ್ಯ ಬಾಸ್ಕೆಟ್‌ಬಾಲ್ ಸಂಸ್ಥೆಯು ಅನೇಕ ಫಿಬಾ ಏಷ್ಯಾ ಟೂರ್ನಿಗಳನ್ನು ಯಶಸ್ವಿಯಾಗಿ ಸಂಘಟಿಸಿಕೊಂಡು ಬಂದಿದೆ. ಒಂದೇ ತಾಣದಲ್ಲಿ ಅತಿ ಹೆಚ್ಚು ಅಂತಾರಾಷ್ಟ್ರೀಯ ಮಟ್ಟದ ಬಾಸ್ಕೆಟ್‌ಬಾಲ್ ಪಂದ್ಯಾವಳಿಗಳನ್ನು ಆಯೋಜಿಸಿದ ಹೆಗ್ಗಳಿಕೆ ಕಂಠೀರವ ಒಳಾಂಗಣ ಸ್ಟೇಡಿಯಂಗೆ ಸಲ್ಲುತ್ತದೆ ಎಂದರು.
*ಏಷ್ಯನ್ ಗೇಮ್ಸ್ ನಲ್ಲಿ ಪದಕ ಪಡೆದ ಕ್ರೀಡಾಪಟುಗಳ ಸಾಧನೆ ಶ್ಲಾಘನೀಯ:*
ಇತ್ತೀಚೆಗೆ ಏಷ್ಯನ್ ಗೇಮ್ಸ್ ನಲ್ಲಿ 85 ಜನ ಕ್ರೀಡಾಪಟುಗಳು ಪದಕಗಳನ್ನು ಪಡೆದು ರಾಷ್ಟ್ರಕ್ಕೆ ಕೀರ್ತಿ ತಂದಿದ್ದಾರೆ. ಅದರಲ್ಲಿ ಕರ್ನಾಟಕದ 8 ಜನ ವಿವಿಧ ಕ್ರೀಡೆಗಳಲ್ಲಿ ಪದಕಗಳನ್ನು ಪಡೆದಿದ್ದಾರೆ. ಎಲ್ಲಾ ಕ್ರೀಡಾ ಪಟುಗಳ ಸಾಧನೆ ಶ್ಲಾಘನೀಯವಾಗಿದೆ ಎಂದು ತಿಳಿಸಿದ ಉಪ ಮುಖ್ಯಮಂತ್ರಿಳು, ನಮ್ಮ ರಾಜ್ಯ ಕ್ರೀಡೆಗೆ ಎಲ್ಲಾ ರೀತಿಯ ಪ್ರೋತ್ಸಾಹ ನೀಡುತ್ತಿದೆ. ಉತ್ತಮ ದರ್ಜೆಯ ಕ್ರೀಡಾಂಗಣ ನಿರ್ಮಾಣ, ರಾಷ್ಟ್ರೀಯ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಉತ್ತಮ ದರ್ಜೆಯ ಕ್ರೀಡಾ ಸಲಕರಣೆಗಳನ್ನು ಒದಗಿಸಲು ಕ್ರಮವಹಿಸಲಾಗಿದೆ ಎಂದು ತಿಳಿಸಿದರು.





ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಬ್ಯಾಸ್ಕೆಟ್ ಬಾಲ್ ಅಸೋಸಿಯೇಷನ್ ಅಧ್ಯಕ್ಷರಾದ ಬಿ. ದಯಾನಂದ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕಾರ್ಯದರ್ಶಿಗಳಾದ ನವೀನ್ ರಾಜ್ ಸಿಂಗ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರಾದ ಆಯುಕ್ತರಾದ ಎಂ.ಎನ್. ಅನುಚೇತ್ ಉಪಸ್ಥಿತರಿದ್ದರು
*(((((ಕೋಟ್* : )))))))
”ಬೆಂಗಳೂರಿಗೆ ಮತ್ತೊಂದು ಫಿಬಾ ಟೂರ್ನಿ ಆಯೋಜಿಸುವ ಅವಕಾಶ ಲಭಿಸಿರುವುದು ಕರ್ನಾಟಕದ ಪಾಲಿಗೆ ಹೆಮ್ಮೆಯ ವಿಷಯ. ಇದು ಕ್ರೀಡೆಗೆ ನಾವು ನೀಡುತ್ತಿರುವ ಉತ್ತೇಜನ ಹಾಗೂ ಜಾಗತಿಕ ಕ್ರೀಡಾ ಭೂಪಟದಲ್ಲಿ ಬೆಂಗಳೂರಿನ ಸ್ಥಾನವನ್ನು ಇನ್ನಷ್ಟು ಬಲಪಡಿಸಲಿದೆ. ಯುವ ಕ್ರೀಡಾಪಟುಗಳು ವಿಶ್ವದರ್ಜೆಯ ಆಟಗಾರರಿಂದ ಸ್ಫೂರ್ತಿ ಪಡೆಯಲು ಇದೊಂದು ಉತ್ತಮ ವೇದಿಕೆ.”
— *ಡಾ. ಜಿ. ಪರಮೇಶ್ವರ, ಉಪ ಮುಖ್ಯಮಂತ್ರಿಗಳು ಹಾಗೂ ಕ್ರೀಡಾ ಸಚಿವರು*.
”ಏಷ್ಯಾದ ಅತ್ಯುತ್ತಮ ಮಹಿಳಾ ಕ್ಲಬ್ ತಂಡಗಳನ್ನು ಒಂದೇ ವೇದಿಕೆಗೆ ತರಲು ‘ಫಿಬಾ ಮಹಿಳಾ ಬಾಸ್ಕೆಟ್‌ಬಾಲ್ ಲೀಗ್ ಏಷ್ಯಾ’ ಪ್ರಮುಖ ವೇದಿಕೆಯಾಗಿದೆ. ಕರ್ನಾಟಕ ಸರ್ಕಾರದ ಸಹಕಾರದೊಂದಿಗೆ ನಡೆಯುತ್ತಿರುವ ಈ ಟೂರ್ನಿಯು ಏಷ್ಯನ್ ಬಾಸ್ಕೆಟ್‌ಬಾಲ್ ಕ್ಯಾಲೆಂಡರ್‌ನಲ್ಲಿ ಭಾರತದ ಸ್ಥಾನವನ್ನು ಮತ್ತಷ್ಟು ಬಲಪಡಿಸಲಿದೆ.”
— *ಡಾ. ಕೆ. ಗೋವಿಂದರಾಜ್, ಫಿಬಾ ಏಷ್ಯಾ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು, ಕರ್ನಾಟಕ ರಾಜ್ಯ ಬಾಸ್ಕೆಟ್‌ಬಾಲ್ ಸಂಸ್ಥೆ*.












