ಇತ್ತೀಚಿನ ಸುದ್ದಿ
ಫಾಸ್ಟ್‌ಟ್ಯಾಗ್ ಯುಗ ಅಂತ್ಯ?: ಮಲ್ಟಿ-ಲೇನ್ ಫ್ರೀ-ಫ್ಲೋ (MLFF) ಟೋಲಿಂಗ್ ವ್ಯವಸ್ಥೆ ಜಾರಿಗೆ ಸರಕಾರ ಚಿಂತನೆ
07/10/2026, 00:19
ಬೆಂಗಳೂರು(reporterkarnataka.com): ಭಾರತೀಯ ಹೆದ್ದಾರಿಗಳಲ್ಲಿ ಫಾಸ್ಟ್‌ಟ್ಯಾಗ್ ವ್ಯವಸ್ಥೆಯನ್ನು ಮೀರಿ, ಮಲ್ಟಿ-ಲೇನ್ ಫ್ರೀ-ಫ್ಲೋ (MLFF) ಟೋಲಿಂಗ್ ವ್ಯವಸ್ಥೆ ಜಾರಿಗೆ ತರಲು ಸರ್ಕಾರ ಯೋಜನೆ ರೂಪಿಸಿದೆ. ಕೈಯಿಂದ ಟೋಲ್ ಸಂಗ್ರಹಿಸುವ ವ್ಯವಸ್ಥೆಯಿಂದ ಫಾಸ್ಟ್ಯಾಗ್ಗೆ ಬದಲಾವಣೆ ಮಾಡಲಾಯಿತು. ಈಗ ಮುಂದಿನ ಹಂತಕ್ಕೆ ಹೋಗಲಾಗುತ್ತಿದೆ. ವಾಹನಗಳು ನಿಲ್ಲದೆ ಟೋಲ್ ಪಾವತಿಸುವ ಈ ಜಿಎನ್‌ಎಸ್ಎಸ್/ಜಿಪಿಎಸ್ ಆಧಾರಿತ ತಂತ್ರಜ್ಞಾನದ ಸಂಪೂರ್ಣ ವಿವರ ಇಲ್ಲಿದೆ.
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ರಸ್ತೆ ಸಾರಿಗೆ ಸಚಿವಾಲಯವು ದೇಶದ ಹೆದ್ದಾರಿಗಳಲ್ಲಿ ಪ್ರಸ್ತುತ ಇರುವ ಫಾಸ್ಟ್‌ಟ್ಯಾಗ್ ವ್ಯವಸ್ಥೆಯನ್ನು ಮೀರಿ, ತಡೆರಹಿತ ‘ಮಲ್ಟಿ-ಲೇನ್ ಫ್ರೀ-ಫ್ಲೋ’ (Multi-Lane Free-Flow – MLFF) ಟೋಲ್ ಸಂಗ್ರಹ ವ್ಯವಸ್ಥೆಗೆ ಹೆಜ್ಜೆ ಇಡುತ್ತಿವೆ. ಈ ಹೊಸ ತಂತ್ರಜ್ಞಾನದಿಂದ ಹೆದ್ದಾರಿಗಳಲ್ಲಿ ಟೋಲ್ ಕಲೆಕ್ಷನ್ ವ್ಯವಸ್ಥೆ ಹೆಚ್ಚು ಸಮರ್ಪಕಗೊಳ್ಳಲಿದೆ. ಸರ್ಕಾರಕ್ಕೆ ವಾಹನಗಳಿಂದ ಟೋಲ್ ಸಂಗ್ರಹ ಹೆಚ್ಚುವುದರ ಜೊತೆಗೆ ವಾಹನ ಸಂಚಾರ ತಡೆರಹಿತವಾಗಿ ಆಗಲು ಸಾಧ್ಯವಾಗುತ್ತದೆ.
*ಎಂಎಲ್‌ಎಫ್‌ಎಫ್’ ಸಿಸ್ಟಂ, ಏನಿದು?*
MLFF ಎಂಬುದು ಟೋಲ್ ಪ್ಲಾಜಾಗಳಲ್ಲಿ ಯಾವುದೇ ಗೇಟ್ ಅಥವಾ ಬ್ಯಾರಿಯರ್‌ಗಳಿಲ್ಲದೆ ವಾಹನಗಳು ಸಾಮಾನ್ಯ ವೇಗದಲ್ಲೇ ಚಲಿಸುತ್ತಿರುವಾಗ ಟೋಲ್ ಸಂಗ್ರಹಿಸುವ ತಂತ್ರಜ್ಞಾನವಾಗಿದೆ. ವಾಹನಗಳು ಟೋಲ್ ಬೂತ್‌ಗಳಲ್ಲಿ ಸಾಲಿನಲ್ಲಿ ನಿಲ್ಲುವ ಅಥವಾ ವೇಗ ತಗ್ಗಿಸುವ ಅಗತ್ಯವಿರುವುದಿಲ್ಲ.
*ಆಟೋಮ್ಯಾಟಿಕ್ ನಂಬರ್ ಪ್ಲೇಟ್ ರೆಕಗ್ನಿಷನ್:* ಹೆದ್ದಾರಿಗಳ ಮೇಲಿರುವ ಹೈ-ರೆಸಲ್ಯೂಶನ್ ಕ್ಯಾಮೆರಾಗಳು ಆಟೋಮ್ಯಾಟಿಕ್ ನಂಬರ್ ಪ್ಲೇಟ್ ರೆಕಗ್ನಿಷನ್ (ANPR) ಟೆಕ್ನಾಲಜಿ ಸಹಾಯದಿಂದ ವಾಹನದ ನಂಬರ್ ಪ್ಲೇಟ್ ಅನ್ನು ಗುರುತಿಸಿ ಟೋಲ್ ಖಾತೆಯಿಂದ ಹಣ ಕಡಿತಗೊಳಿಸುತ್ತವೆ.
*ಜಿಎನ್‌ಎಸ್‌ಎಸ್:* ಉಪಗ್ರಹ ಆಧಾರಿತ ಜಿಪಿಎಸ್ ತಂತ್ರಜ್ಞಾನದ (GNSS – Global Navigation Satellite System) ಮೂಲಕ ವಾಹನವು ಹೆದ್ದಾರಿಯಲ್ಲಿ ಚಲಿಸಿದ ನಿಖರ ದೂರವನ್ನು (Distance-based Tolling) ಲೆಕ್ಕಹಾಕಿ, ಅದಕ್ಕೆ ತಕ್ಕಷ್ಟು ಮಾತ್ರ ಟೋಲ್ ಕಡಿತಗೊಳಿಸಲಾಗುತ್ತದೆ.
*ಫಾಸ್ಟ್‌ಟ್ಯಾಗ್‌ಗಿಂತ ಇದು ಹೇಗೆ ಭಿನ್ನ?*
ಫಾಸ್ಟ್‌ಟ್ಯಾಗ್‌ನಲ್ಲಿ ವಾಹನಗಳು ಟೋಲ್ ಗೇಟ್ ಬಳಿ ಬಂದು ನಿಂತು ಸ್ಕ್ಯಾನ್ ಆಗಬೇಕಿತ್ತು. ಆದರೆ ಎಂಎಲ್‌ಎಫ್‌ಎಫ್ ವ್ಯವಸ್ಥೆಯಲ್ಲಿ ಟೋಲ್ ಪ್ಲಾಜಾಗಳ ಭೌತಿಕ ಗೇಟ್‌ಗಳೇ ಇರುವುದಿಲ್ಲ. ವಾಹನಗಳು ಗಂಟೆಗೆ 80-100 ಕಿ.ಮೀ ವೇಗದಲ್ಲಿ ಸಾಗುತ್ತಿದ್ದರೂ ಸ್ವಯಂಚಾಲಿತವಾಗಿ ಟೋಲ್ ಕಡಿತಗೊಳ್ಳುತ್ತದೆ.
*ಎಂಎಲ್‌ಎಫ್‌ಎಫ್ ಸಿಸ್ಟಂನಿಂದ ಪ್ರಮುಖ ಪ್ರಯೋಜನಗಳು:*
*ಸಮಯ ಮತ್ತು ಇಂಧನ ಉಳಿತಾಯ:* ಟೋಲ್ ಕ್ಯೂನಲ್ಲಿ ನಿಲ್ಲುವುದು ತಪ್ಪುವುದರಿಂದ ಅಪಾರ ಪ್ರಮಾಣದ ಸಮಯ ಹಾಗೂ ಇಂಧನ ಉಳಿತಾಯವಾಗಲಿದೆ.
*ದೂರ ಆಧಾರಿತ ಶುಲ್ಕ:* ಇಡೀ ಟೋಲ್ ಪ್ಲಾಜಾ ಶುಲ್ಕ ಕಟ್ಟುವ ಬದಲು, ಹೆದ್ದಾರಿಯಲ್ಲಿ ಚಲಿಸಿದ ನಿಖರ ಕಿಲೋಮೀಟರ್‌ಗಳಿಗೆ (Pay-as-you-use) ಮಾತ್ರ ಶುಲ್ಕ ಪಾವತಿಸುವ ಸೌಲಭ್ಯ ಸಿಗಲಿದೆ.
*ಸುಗಮ ಸಂಚಾರ:* ಟೋಲ್ ಪ್ಲಾಜಾಗಳಲ್ಲಿ ಫಾಸ್ಟ್ಯಗ್ ವ್ಯವಸ್ಥೆ ಇದ್ದರೂ ಪೀಕ್ ಸಮಯದಲ್ಲಿ ಸದ್ಯ ವಾಹನಗಳು ಮೂರ್ನಾಲ್ಕು ನಿಮಿಷ ಸರದಿಯಲ್ಲಿ ನಿಲ್ಲುತ್ತಿವೆ. ಆರ್ಎಫ್ಐಡಿ ಸ್ಕ್ಯಾನರ್ ರೀಡ್ ಮಾಡುವುದರಲ್ಲಿ ಆಗುವ ವಿಳಂಬವು ಇದಕ್ಕೆ ಕಾರಣ. ಎಂಎಲ್‌ಎಫ್‌ಎಫ್ ವ್ಯವಸ್ಥೆಯಲ್ಲಿ ಈ ನಿಲುಗಡೆಯ ಅಗತ್ಯ ಇರುವುದಿಲ್ಲ ವಾಹನಗಳು ನಿಂತು ಸ್ಟಾರ್ಟ್ ಆಗುವುದು ತಪ್ಪುವುದರಿಂದ ಹೆದ್ದಾರಿಗಳಲ್ಲಿ ವಾಯು ಮಾಲಿನ್ಯ ಕಡಿಮೆಯಾಗಲಿದೆ.
ಪ್ರಾಯೋಗಿಕ ಯೋಜನೆಯಾಗಿ ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮತ್ತು ಆಯ್ದ ಎಕ್ಸ್‌ಪ್ರೆಸ್‌ವೇಗಳಲ್ಲಿ ಇದನ್ನು ಮೊದಲು ಜಾರಿಗೆ ತರಲಾಗುತ್ತಿದ್ದು, ಹಂತ ಹಂತವಾಗಿ ದೇಶಾದ್ಯಂತ ವಿಸ್ತರಿಸಲಾಗುವುದು ಎಂದು ಹೇಳಲಾಗಿದೆ.












