ಇತ್ತೀಚಿನ ಸುದ್ದಿ
Mangaluru | ವಿದ್ಯಾರ್ಥಿನಿಯರಿಗೆ ಮಹಿಳೆಯರ ಹಕ್ಕು, ಸುರಕ್ಷತೆ ಕುರಿತು ಕಾನೂನು ಅರಿವು ಕಾರ್ಯಕ್ರಮ
19/09/2026, 20:05
ಮಂಗಳೂರು(reporterkarnataka.com): ಮಹಿಳೆಯರ ಹಕ್ಕುಗಳು, ಸುರಕ್ಷತೆ ಹಾಗೂ ನ್ಯಾಯಕ್ಕೆ ಸಂಬಂಧಿಸಿದ ಕಾನೂನುಗಳ ಕುರಿತು ವಿದ್ಯಾರ್ಥಿನಿಯರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಕಾನೂನು ಅರಿವು ಕಾರ್ಯಕ್ರಮ ನಡೆಯಿತು.
ಆಯೋಜಕರಾದ ಕಾನೂನು ಮಿತ್ರರಾದ ಹರಿಣಾಕ್ಷಿ ಪಿ.ವಿ.ಎಲ್. ಅವರು ವಿದ್ಯಾರ್ಥಿನಿಯರನ್ನು ಉದ್ದೇಶಿಸಿ ಮಾತನಾಡಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ (DLSA) ಹಾಗೂ ಜಿಲ್ಲಾ ನ್ಯಾಯಾಲಯದೊಂದಿಗೆ ಪ್ಯಾರಾ ಲೀಗಲ್ ವಾಲಂಟಿಯರ್‌ಗಳು (PLV) ಹೇಗೆ ಕಾರ್ಯನಿರ್ವಹಿಸುತ್ತಾರೆ ಎಂಬುದನ್ನು ವಿವರಿಸಿದರು. ಮಹಿಳೆಯರು ಹಾಗೂ ಮಕ್ಕಳಂತಹ ವಿಶೇಷ ವರ್ಗದವರಿಗೆ ಲಭ್ಯವಿರುವ ವಿವಿಧ ಕಾನೂನು ಸೌಲಭ್ಯಗಳ ಬಗ್ಗೆಯೂ ಮಾಹಿತಿ ನೀಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಲಯದ ಜಿಲ್ಲಾ ಕಾನೂನು ಸರಕಾರಿ ಸಹಾಯಕ ಅಭಿಯೋಜಕಿ
ಪ್ರತಿಮಾ ಬಂಗೇರ ಅವರು ವರದಕ್ಷಿಣೆ ಕಿರುಕುಳ, ಕೌಟುಂಬಿಕ ದೌರ್ಜನ್ಯ, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (POCSO) ಹಾಗೂ ಮಕ್ಕಳ ಹಕ್ಕುಗಳ ಕುರಿತು ಮಾಹಿತಿ ನೀಡಿದರು. ಮಹಿಳೆಯರು ಮತ್ತು ಮಕ್ಕಳ ವಿರುದ್ಧ ನಡೆಯುವ ದೌರ್ಜನ್ಯ, ಸೈಬರ್ ಅಪರಾಧಗಳು ಹಾಗೂ ಇಂತಹ ಸಂದರ್ಭಗಳಲ್ಲಿ ಸೂಕ್ತ ಸಮಯದಲ್ಲಿ ಕಾನೂನು ನೆರವು ಪಡೆಯುವ ವಿಧಾನಗಳ ಕುರಿತು ವಿದ್ಯಾರ್ಥಿನಿಯರಿಗೆ ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಗೋಪಾಲ ಕೃಷ್ಣ ಕೆ. ಮಾತನಾಡಿ, ಶೈಕ್ಷಣಿಕ ಶಿಕ್ಷಣದ ಜೊತೆಗೆ ಕಾನೂನು ಅರಿವು ಕೂಡ ಅಗತ್ಯ. ವಿದ್ಯಾರ್ಥಿನಿಯರು ತಮ್ಮ ಸುತ್ತಮುತ್ತಲಿನ ಪರಿಸರದ ಬಗ್ಗೆ ಜಾಗೃತರಾಗಿದ್ದು, ತಮ್ಮ ಘನತೆ ಹಾಗೂ ಹಕ್ಕುಗಳನ್ನು ರಕ್ಷಿಸಿಕೊಳ್ಳಲು ಕಾನೂನು ವ್ಯವಸ್ಥೆಯನ್ನು ಬಳಸಿಕೊಳ್ಳುವಲ್ಲಿ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು ಎಂದರು.


ಕಾರ್ಯಕ್ರಮದಲ್ಲಿ ಕಾಲೇಜಿನ ಆಂತರಿಕ ಗುಣಮಟ್ಟ ಭರವಸಾ ಕೋಶದ ಸಂಚಾಲಕಿ ಡಾ. ಮಂಜುಳಾ ಮಲ್ಯ ಎಂ., ಮಹಿಳಾ ದೌರ್ಜನ್ಯ ತಡೆ ಸಮಿತಿ ಸಂಚಾಲಕಿ ಡಾ. ನಯನ ಎಲ್.ಎಂ., ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ಜಯಶ್ರೀ, ಡಾ. ಮೀನಾಕ್ಷಿ ಆಚಾರ್ಯ ಹಾಗೂ ಶಿಲ್ಪಾ ಬಿ.ಎಸ್. ಉಪಸ್ಥಿತರಿದ್ದರು.
ಮುಸ್ಕಾನ್ ಸ್ವಾಗತಿಸಿದರು. ಶಾಮ ನಿರೂಪಿಸಿದರು. ಶಮನ್ ವಂದಿಸಿದರು.












