ಇತ್ತೀಚಿನ ಸುದ್ದಿ
ರಾಜ್ಯ ರಾಜಕೀಯ ಹೊಲಸು ಮಾಡಿದ್ದೇ ಸಿದ್ದರಾಮಯ್ಯ; ಮಗನ ಪಟ್ಟಾಭಿಷೇಕಕ್ಕಾಗಿ ಹಿರಿಯ ನಾಯಕರ ರಾಜಕೀಯ ಜೀವನ ಬಲಿ: ಪ್ರತಾಪ ಸಿಂಹ ಕಿಡಿ
08/08/2026, 20:15
ಗಿರಿಧರ್ ಕೊಂಪುಳಿರ ಮೈಸೂರು
info.reporterkarnataka@gmail.com
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಪುತ್ರ ಡಾ ಯತೀಂದ್ರ ಅವರನ್ನು ರಾಜಕೀಯ ನಾಯಕನನ್ನಾಗಿ ರೂಪಿಸಲು ಮೈಸೂರು ಭಾಗದ ಹಿರಿಯ ಕಾಂಗ್ರೆಸ್ ನಾಯಕರ ರಾಜಕೀಯ ಭವಿಷ್ಯವನ್ನೇ ಬಲಿ ಕೊಟ್ಟಿದ್ದಾರೆ ಎಂದು ಮಾಜಿ ಸಂಸದ ಪ್ರತಾಪ ಸಿಂಹ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ರಾಜಕೀಯ ಶೈಲಿಯ ವಿರುದ್ಧ ಕಟು ಟೀಕೆಗಳನ್ನು ಮಾಡಿದರು. ಮಗನನ್ನು ಮಂತ್ರಿ ಮಾಡಲು ಮಲ್ಲಿಕಾರ್ಜುನ ಖರ್ಗೆ ಅವರು ಕಲಬುರಗಿ ಭಾಗದ ನಾಯಕರನ್ನು ಹೇಗೆ ಮೂಲೆಗುಂಪು ಮಾಡಿದರೋ, ಅದೇ ಮಾದರಿಯನ್ನು ಸಿದ್ದರಾಮಯ್ಯ ಅವರು ಇಲ್ಲಿ ಅನುಸರಿಸಿದ್ದಾರೆ ಎಂದು ಅವರು ಆರೋಪಿಸಿದರು.
*ಆಪ್ತ ಸ್ನೇಹಿತರನ್ನೇ ಮೂಲೆಗುಂಪು ಮಾಡಿದ ಮಾಜಿ ಸಿಎಂ*
ತಮ್ಮ ಸುದೀರ್ಘ ರಾಜಕೀಯ ಹಾದಿಯಲ್ಲಿ ಸದಾ ಜೊತೆಗಿದ್ದ ಸ್ನೇಹಿತರಾದ ಡಾ ಎಚ್ ಸಿ ಮಹದೇವಪ್ಪ ಮತ್ತು ಕೆ ವೆಂಕಟೇಶ್ ಅವರ ಸ್ನೇಹಕ್ಕೆ ಸಿದ್ದರಾಮಯ್ಯ ಬೆಲೆ ಕೊಡಲಿಲ್ಲ. ಮಗನ ತಲೆ ಮೇಲೆ ಮಾತ್ರ ಅಧಿಕಾರದ ಕಿರೀಟ ಇರಬೇಕು ಎಂಬ ಕಾರಣಕ್ಕೆ ದಲಿತರ ಧ್ವನಿಯಾಗಿದ್ದ ಮಹದೇವಪ್ಪ ಅವರನ್ನು ಬದಿಗೊತ್ತಿದ್ದಾರೆ. ಸಭ್ಯ ರಾಜಕಾರಣಿ ತನ್ವೀರ್ ಸೇಠ್ ಅವರಿಗೆ ಸಚಿವ ಸ್ಥಾನ ಸಿಗದಂತೆ ತಡೆದಿದ್ದೇ ಸಿದ್ದರಾಮಯ್ಯ ಎಂದು ಪ್ರತಾಪ ಸಿಂಹ ದೂರಿದರು.












