ಇತ್ತೀಚಿನ ಸುದ್ದಿ
ರಾಜ್ಯದಲ್ಲಿ ವೈದ್ಯಕೀಯ ಸೇವೆಗೆ 100 ಬೈಕ್ ಆ್ಯಂಬುಲೆನ್ಸ್, 750ಕ್ಕೂ ಅಧಿಕ 108 ವಾಹನಗಳು ಸಜ್ಜು: ಮಂಗಳೂರಿನಲ್ಲಿ ಆರೋಗ್ಯ ಸಚಿವ ಖಾದರ್
06/08/2026, 22:07
ಮಂಗಳೂರು(reporterkarnataka.com): ರಾಜ್ಯದಲ್ಲಿ ತುರ್ತು ವೈದ್ಯಕೀಯ ಸೇವೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲು 100 ಬೈಕ್ ಆ್ಯಂಬುಲೆನ್ಸ್‌ಗಳನ್ನು ಹೊಸ ವಿನ್ಯಾಸದೊಂದಿಗೆ ಮತ್ತೆ ರಸ್ತೆಗಿಳಿಸಲು ಸರ್ಕಾರ ಮುಂದಾಗಿದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮ ಜತೆ ಮಾತನಾಡಿದ ಅವರು, ಬೆಂಗಳೂರು ಸೇರಿದಂತೆ ಬೃಹತ್ ನಗರಗಳಲ್ಲಿ ವಾಹನ ದಟ್ಟಣೆಯಿಂದಾಗಿ ಸಾಮಾನ್ಯ ಆ್ಯಂಬುಲೆನ್ಸ್‌ಗಳು ತಕ್ಷಣ ಸ್ಥಳಕ್ಕೆ ತಲುಪಲು ಸಾಧ್ಯವಾಗದ ಪರಿಸ್ಥಿತಿ ಎದುರಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬೈಕ್ ಆ್ಯಂಬುಲೆನ್ಸ್‌ಗಳನ್ನು ಮರುಪರಿಚಯಿಸಲಾಗುತ್ತಿದೆಅಪಘಾತ ಅಥವಾ ತುರ್ತು ಆರೋಗ್ಯ ಸಮಸ್ಯೆ ಸಂಭವಿಸಿದಾಗ ಅವುಗಳು ಶೀಘ್ರವಾಗಿ ಸ್ಥಳಕ್ಕೆ ತಲುಪಿ ಆಮ್ಲಜನಕ ಹಾಗೂ ಪ್ರಾಥಮಿಕ ಚಿಕಿತ್ಸೆ ನೀಡಿ ರೋಗಿಯ ಸ್ಥಿತಿಯನ್ನು ಸ್ಥಿರಗೊಳಿಸಲಿವೆ. ಬಳಿಕ ಅಗತ್ಯವಿದ್ದರೆ ದೊಡ್ಡ ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಲಾಗುವುದು ಎಂದು ಅವರು ತಿಳಿಸಿದರು.
ಇದೇ ವೇಳೆ, 108 ತುರ್ತು ಆ್ಯಂಬುಲೆನ್ಸ್ ಸೇವೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ 450 ಹೊಸ ವಾಹನಗಳನ್ನು ಖರೀದಿಸಲಾಗುತ್ತಿದೆ. ಈಗಿರುವ ಉತ್ತಮ ಸ್ಥಿತಿಯ ವಾಹನಗಳನ್ನು ಸೇರಿಸಿ ರಾಜ್ಯದಲ್ಲಿ ಒಟ್ಟು 750ಕ್ಕೂ ಅಧಿಕ 108 ಆ್ಯಂಬುಲೆನ್ಸ್‌ಗಳು ಸೇವೆಗೆ ಲಭ್ಯವಾಗಲಿವೆ ಎಂದು ಸಚಿವರು ಹೇಳಿದರು.
ಗ್ರಾಮೀಣ ಪ್ರದೇಶಗಳಲ್ಲಿ 20 ನಿಮಿಷ ಹಾಗೂ ನಗರ ಪ್ರದೇಶಗಳಲ್ಲಿ 15 ನಿಮಿಷಗಳೊಳಗೆ ಆ್ಯಂಬುಲೆನ್ಸ್ ತಲುಪುವಂತೆ ಕಟ್ಟುನಿಟ್ಟಿನ ಸೇವಾ ಮಾನದಂಡ ನಿಗದಿಪಡಿಸಲಾಗಿದೆ. ನಿಗದಿತ ಸಮಯದಲ್ಲಿ ಸೇವೆ ಒದಗಿಸಲು ವಿಫಲವಾದರೆ ಅಥವಾ ಸಿಬ್ಬಂದಿ ಹಾಗೂ ವಾಹನಗಳ ಸ್ವಚ್ಛತೆಯಲ್ಲಿ ಕೊರತೆ ಕಂಡುಬಂದರೆ, ಸೇವೆ ನಿರ್ವಹಿಸುವ ಸಂಸ್ಥೆ ಅಥವಾ ಕಂಪನಿಗೆ ನೇರವಾಗಿ ದಂಡ ವಿಧಿಸುವ ಷರತ್ತನ್ನು ಒಪ್ಪಂದದಲ್ಲಿ ಸೇರಿಸಲಾಗುತ್ತಿದೆ ಎಂದು ಖಾದರ್ ವಿವರಿಸಿದರು.












