ಇತ್ತೀಚಿನ ಸುದ್ದಿ
*ಬಿರುಗಾಳಿಗೆ ಸಿಲುಕಿ ಆಗಸದಲ್ಲೇ 300 ಅಡಿ ಕೆಳಗೆ ಕುಸಿದ ಏರ್ ಇಂಡಿಯಾ ವಿಮಾನ: ಸಿಬ್ಬಂದಿ, ಪ್ರಯಾಣಿಕರು ಸೇರಿ 14 ಮಂದಿಗೆ ಗಾಯ*
04/08/2026, 20:10
ನವದೆಹಲಿ(reporterkarnataka.com): ಏರ್ ಇಂಡಿಯಾ ವಿಮಾನವೊಂದು ಆಗಸದಲ್ಲಿ ಬಿರುಗಾಳಿಗೆ ಸಿಲುಕಿ, 300 ಅಡಿ ಕೆಳಕ್ಕೆ ಕುಸಿದು ಪಲ್ಟಿಯಾದ ಘಟನೆ ನಡೆದಿದ್ದು, ಪ್ರಯಾಣಿಕರು ಮತ್ತು ವಿಮಾನದ ಸಿಬ್ಬಂದಿ ಸೇರಿದಂತೆ 14 ಜನರು ಗಾಯಗೊಂಡಿರುವ ಘಟನೆ ನಡೆದಿದೆ.
ವಿಮಾನವು ಇದ್ದಕ್ಕಿದ್ದಂತೆ ಸುಮಾರು 300 ಅಡಿಗಳಷ್ಟು ಆಳಕ್ಕೆ ಕುಸಿದಿದೆ. ಒಳಗಿದ್ದ ಪ್ರಯಾಣಿಕರು ತೀವ್ರ ಆತಂಕಕ್ಕೊಳಗಾಗಿದ್ದಾರೆ. ಸೀಟ್ ಬೆಲ್ಟ್ ಧರಿಸದಿದ್ದ ಪ್ರಯಾಣಿಕರು ಹಾಗೂ ಕರ್ತವ್ಯದಲ್ಲಿದ್ದ ವಿಮಾನದ ಸಿಬ್ಬಂದಿ ವಿಮಾನದ ಸೀಲಿಂಗ್ಗೆ ಬಡಿದು ಗಾಯಗೊಂಡಿದ್ದಾರೆ.
ವಿಮಾನದಲ್ಲಿ ಉಂಟಾದ ಆತಂಕದ ನಡುವೆಯೂ ಏರ್ ಇಂಡಿಯಾ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಯುವಲ್ಲಿ ಯಶಸ್ವಿಯಾಗಿದೆ. ವಿಮಾನ ನಿಲ್ದಾಣದಲ್ಲಿ ವಿಮಾನ ಲ್ಯಾಂಡ್ ಆಗುತ್ತಿದ್ದಂತೆಯೇ ತುರ್ತು ವೈದ್ಯಕೀಯ ತಂಡವು ಸ್ಥಳಕ್ಕೆ ಧಾವಿಸಿ, ಗಾಯಗೊಂಡವರಿಗೆ ತಕ್ಷಣದ ಪ್ರಥಮ ಚಿಕಿತ್ಸೆ ನೀಡಿದೆ. ತೀವ್ರವಾಗಿ ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿಮಾನದ ಒಳಗಿನ ಸೀಲಿಂಗ್ ಪ್ಯಾನೆಲ್‌ಗಳು ಜಖಂಗೊಂಡಿವೆ. ಮಾಹಿತಿಯ ಪ್ರಕಾರ, ಹಾರಾಟದ ಸಮಯದಲ್ಲಿ ವಿಮಾನವು ತಕ್ಷಣವೇ ಸುಮಾರು 300 ಅಡಿ ಕೆಳಕ್ಕೆ ಧುಮುಕಿದೆ ಎಂದು ಪೈಲಟ್ ತಿಳಿಸಿದ್ದಾರೆ. ಆಗಸದಲ್ಲೇ ವಿಮಾನ ಪಲ್ಟಿ ಹೊಡೆಯುತ್ತಾ ಕುಸಿದ ಕಾರಣದಿಂದ ಶೇ. 80ರಷ್ಟು ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಒಟ್ಟು 14 ಜನರಿಗೆ ಹೆಚ್ಚಿನ ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಆ ವಿಮಾನದಲ್ಲಿನ ಪ್ರಯಾಣಿಕರು ಏರ್ ಇಂಡಿಯಾ ಸಂಸ್ಥೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ













