ಇತ್ತೀಚಿನ ಸುದ್ದಿ
ಅಹಮದಾಬಾದ್ ಏರ್ ಇಂಡಿಯಾ ವಿಮಾನ ಪತನ: ಅಧಿವೇಶನದಲ್ಲಿ ಅಚ್ಚರಿ ಉತ್ತರ ನೀಡಿದ ವಿಮಾನಯಾನ ಸಚಿವರು!
29/07/2026, 20:07
ನವದೆಹಲಿ(reporterkarnataka.com): ಕಳೆದ ವರ್ಷ ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ 260 ಜನರ ಸಾವಿಗೆ ಕಾರಣವಾದ ಏರ್ ಇಂಡಿಯಾ AI-171 ವಿಮಾನ ದುರಂತದ ತನಿಖೆ ಅಂತಿಮ ಹಂತ ತಲುಪಿದ್ದು, ವಿಮಾನದ ಪ್ರಮುಖ ಭಾಗವಾದ ಇಂಧನ ನಿಯಂತ್ರಣ ಸ್ವಿಚ್ನಲ್ಲಿ ಯಾವುದೇ ದೋಷವಿರಲಿಲ್ಲ ಎಂಬ ಅಂಶ ವರದಿಯಿಂದ ಬಹಿರಂಗಗೊಂಡಿದೆ. ಇಂಧನ ಸ್ವಿಚ್ನಲ್ಲಿ ದೋಷವಿಲ್ಲಕಳೆದ ವರ್ಷ ಸಂಭವಿಸಿದ ಭೀಕರ ವಿಮಾನ ದುರಂತದಲ್ಲಿ 260 ಮಂದಿ ಬಲಿಯಾಗಿದ್ದರು. ಈ ದುರಂತಕ್ಕೆ ಕಾರಣವೇನು ಎಂಬ ಬಗ್ಗೆ ತನಿಖೆ ಮುಂದುವರಿದಿದ್ದು, ಮೂಲ ತಯಾರಕರ (OEM) ಸುಧಾರಿತ ಪರೀಕ್ಷೆಯ ಪ್ರಕಾರ ಏರ್ ಇಂಡಿಯಾ AI-171 ವಿಮಾನದ ಇಂಧನ ನಿಯಂತ್ರಣ ಸ್ವಿಚ್ ಲಾಕಿಂಗ್ ಯಾಂತ್ರಿಕೃತ ವ್ಯವಸ್ಥೆಯಲ್ಲಿ ಯಾವುದೇ ಅಸಹಜತೆ ಅಥವಾ ದೋಷವಿಲ್ಲ ಎಂಬುದು ಪತ್ತೆಯಾಗಿದೆ.
ರಾಜ್ಯಸಭೆಯಲ್ಲಿ ಸಂಸತ್ತಿನ ಮುಂಗಾರು ಅಧಿವೇಶನದ ವೇಳೆ ಪ್ರಶ್ನೆಗೆ ಉತ್ತರಿಸಿರುವ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ, ಸಂಪೂರ್ಣ ಥ್ರಸ್ಟ್ ಕಂಟ್ರೋಲ್ ಮಾಡ್ಯೂಲ್ನ ಸೂಕ್ಷ್ಮ ಪರೀಕ್ಷೆಯು ಅಮೆರಿಕದ ಸಿಯಾಟ್ಲ್ನಲ್ಲಿರುವ ಒಇಎಂ ಸೌಲಭ್ಯದಲ್ಲಿ ಪ್ರಸ್ತುತ ಭರದಿಂದ ಸಾಗುತ್ತಿದೆ ಎಂದು ಸ್ಪಷ್ಟಪಡಿಸಿದೆ. ವಿಮಾನ ದುರಂತದ ತನಿಖಾ ವರದಿ ಸಿದ್ಧಪಡಿಸುವಲ್ಲಿ ವಿಳಂಬ ಮಾಡಲಾಗಿದೆ ಎಂಬ ಆರೋಪಗಳನ್ನು ಕೇಂದ್ರ ಸರ್ಕಾರ ಬಲವಾಗಿ ತಳ್ಳಿಹಾಕಿದೆ. ಪ್ರಮುಖ ವಿಮಾನ ಅಪಘಾತಗಳ ತನಿಖೆಯು ನಿಗದಿತ ಗಡುವಿಗೆ ಬದ್ಧವಾಗಿರುವುದಿಲ್ಲ ಬದಲಿಗೆ ಅದೊಂದು ಹೆಚ್ಚುವರಿ ಸಮಯ ತೆಗೆದುಕೊಳ್ಳುವ ಪ್ರಕ್ರಿಯೆಯಾಗಿದ್ದು, ಪ್ರಸ್ತುತ ಅಂತಿಮ ಹಂತದಲ್ಲಿದೆ ಎಂದು ತಿಳಿಸಲಾಗಿದೆ.
ಈ ವರ್ಷದ ಫೆಬ್ರವರಿಯಲ್ಲಿ ಈ ಮಾದರಿಯ ವಿಮಾನಗಳನ್ನು ನೆಲಕ್ಕಿಳಿಸಿದ ಬಳಿಕ, ಮುಂದುವರಿದ ಹಾರಾಟ ಯೋಗ್ಯತೆ ಪರಿಶೋಧನೆಗಳ ಭಾಗವಾಗಿ ನಾಗರಿಕ ವಿಮಾನಯಾನ ಮಹಾನನಿರ್ದೇಶನಾಲಯ (DGCA) ವಿಶೇಷ ಪರೀಕ್ಷೆಗಳನ್ನು ನಡೆಸುವಂತೆ ಆದೇಶಿಸಿತ್ತು. ಅದರಂತೆ ಇಂಧನ ಸ್ವಿಚ್ನ ರಚನಾತ್ಮಕ ಸಮಗ್ರತೆಯನ್ನು ಕೂಲಂಕಷವಾಗಿ ಪರಿಶೀಲಿಸಲಾಗಿದೆ. ಇನ್ನೂ ಅಪಘಾತಕ್ಕೆ ಕಾರಣವಾದ ಎಲ್ಲಾ ಸಂಭಾವ್ಯ ಅಂಶಗಳು ಹಾಗೂ ಕಾರಣಗಳ ಬಗ್ಗೆ ತೀವ್ರ ತನಿಖೆ ನಡೆಯುತ್ತಿದೆ. ತನಿಖೆ ಸಂಪೂರ್ಣ ಮುಕ್ತಾಯಗೊಂಡ ಕೂಡಲೇ ಎಲ್ಲಾ ತನಿಖಾ ಅಂಶಗಳನ್ನು ಒಳಗೊಂಡ ಅಂತಿಮ ವರದಿಯನ್ನು ಎಎಐಬಿ (AAIB) ಅಧಿಕೃತ ವೆಬ್ಸೈಟ್ನಲ್ಲಿ ಸಾರ್ವಜನಿಕವಾಗಿ ಲಭ್ಯವಾಗುವಂತೆ ಮಾಡಲಾಗುವುದು ಎಂದು ರಾಜ್ಯಸಭೆಯಲ್ಲಿ ಕೇಳಲಾದ ಪ್ರಶ್ನೆಗೆ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯದ ರಾಜ್ಯ ಸಚಿವ ಮುರುಳಿದರ ಮೊಹೋಲ್ ಉತ್ತರಿಸಿದ್ದಾರೆ.
ಭಾರತದ ಇತಿಹಾಸದಲ್ಲೇ ಕಂಡು ಕೇಳರಿಯದ ಮಹಾ ದುರಂತ
ಭಾರತದ ಇತಿಹಾಸದಲ್ಲೇ ಅತಿದೊಡ್ಡ ವಿಮಾನ ದುರಂತ ಗುಜರಾತ್ನ ಅಹಮದಾಬಾದ್ನಲ್ಲಿ ಸಂಭವಿಸಿತು. 2025, ಜೂನ್ 12ರಂದು ಮಧ್ಯಾಹ್ನ ಟೇಕ್ ಆಫ್ ಆದ ಏರ್ ಇಂಡಿಯಾ ಎ1-171 ವಿಮಾನ 32 ಸೆಕೆಂಡ್ಗಳಲ್ಲಿ ಮೇಘಾನಿ ನಗರದ ವೈದ್ಯಕೀಯ ಕಾಲೇಜು ಹಾಸ್ಟೆಲ್ ಮೇಲೆ ಪತನಗೊಂಡಿತು. ವಿದೇಶಿಯರೂ ಸೇರಿ 230 ಪ್ರಯಾಣಿಕರು, 12 ಸಿಬ್ಬಂದಿ ಇದ್ದ ವಿಮಾನದಲ್ಲಿ ಓರ್ವ ಪ್ರಯಾಣಿಕ ಪವಾಡಸದೃಶ ರೀತಿಯಲ್ಲಿ ಬದುಕುಳಿದರೆ ಉಳಿದವರೆಲ್ಲ ಸಜೀವ ದಹನವಾದರು. ವಿಮಾನ ಹಾಸ್ಟೆಲ್ ಕಟ್ಟಡದ ಮೇಲೆ ಬಿದ್ದ ಪರಿಣಾಮ ಊಟಕ್ಕೆ ಕುಳಿತಿದ್ದ 24 ವೈದ್ಯಕೀಯ ವಿದ್ಯಾರ್ಥಿಗಳು ಸಾವಿಗೀಡಾದರು













