ಇತ್ತೀಚಿನ ಸುದ್ದಿ
ಮಂಗಟ್ಟೆ ಎಂಬ ಬಣ್ಣದ ಹಕ್ಕಿ: ಪಶ್ಚಿಮಘಟ್ಟದ ಕಾಡೇ ಇದರ ತಾಣ
25/07/2026, 11:26
ಮಂಗಟ್ಟೆ ಹಕ್ಕಿ (hornbill)
ಮಂಗಟ್ಟೆ ಹಕ್ಕಿ ದಟ್ಟ ಅರಣ್ಯಗಳಲ್ಲಿ ವಾಸಿಸುವ ದೊಡ್ಡ ಗಾತ್ರದ ಹಕ್ಕಿ. ಇವುಗಳು ತಮ್ಮ ಗಾತ್ರ ಹಾಗೂ ಬಣ್ಣ ಗಳಿಂದ ಆಕರ್ಷನೀಯವಾಗಿ ಕಾಣುತ್ತದೆ. ನಮ್ಮ ಪಶ್ಚಿಮ ಘಟ್ಟದ ಕಾಡುಗಳಲ್ಲಿ ಜೋಡಿಯಾಗಿ ಅಥವಾ ಗುಂಪುಗಳಲ್ಲಿ ಕಂಡು ಬರುತ್ತದೆ. ಈ ಹಕ್ಕಿಯ ಉದ್ದವಾದ ಹಳದಿ ಬಣ್ಣದ ಕೊಕ್ಕು ಹಾಗೂ ಅದರ ಮೇಲಿರುವ ಕವಚ, ಪ್ರಾಣಿಗಳ ಕೊಂಬು (horn)ನ್ನು ಹೋಲುವುದರಿಂದ Hornbill(ocyceros birostris)ಅಂತ ಕರೆಯುತ್ತಾರೆ. ಕೊಕ್ಕು ತುಸು ಬಾಗಿದ್ದು, ಕಪ್ಪಗಿನ ಮುಖ, ಬಾಲದಲ್ಲಿ ಬಿಳಿ ಪುಕ್ಕಗಳಿದ್ದು, ಕಪ್ಪು ಪಟ್ಟಿಯನ್ನು ಹೊಂದಿರುತ್ತದೆ. ಕಪ್ಪು ಬಣ್ಣದ ಅಗಲವಾದ ರೆಕ್ಕೆ, ಹಳದಿ ಅಥವಾ ಬಿಳಿ ಬಣ್ಣದ ಅಂಚನ್ನು ಹೊಂದಿರುತ್ತದೆ. ಗಂಡು ಹಕ್ಕಿಯು ಹೆಣ್ಣು ಹಕ್ಕಿಗಿಂತ ತುಸು ದೊಡ್ಡದು.



ಮಂಗಟ್ಟೆ ಪಕ್ಷಿಗಳನ್ನು ಕಾಡಿನ ರೈತ ಹಾಗೂ ಕಾಡಿನ ರಾಜ ಅಂತಲೂ ಬಣ್ಣಿಸುತ್ತಾರೆ. ಏಕೆಂದರೆ ಇವು ತಿಂದ ಹಣ್ಣುಗಳ ಬೀಜಗಳನ್ನು ಬಹಳ ದೂರದವರೆಗೂ ಪ್ರಚರಿಸಿ ಪರಿಸರ ವೈವಿಧ್ಯತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈ ಪಕ್ಷಿಗಳು ಹಾರುವಾಗ ರೆಕ್ಕೆ ಬಡಿಯುವ ಸದ್ದು ಬಹಳ ದೂರದವರೆಗೂ ಕೇಳಿಸುತ್ತದೆ. ಇವುಗಳ ಧ್ವನಿಯು ಕರ್ಕಶವಾಗಿದ್ದು, ಅಡವಿಯಲ್ಲಿ ಇವುಗಳ ಇರುವಿಕೆಯನ್ನು ಸುಲಭವಾಗಿ ಗುರುತಿಸಬಹುದು. ಹಣ್ಣುಗಳನ್ನು ಹೆಚ್ಚಾಗಿ ತಿನ್ನುವುದರ ಜೊತೆಗೆ ಕೀಟ, ಹಲ್ಲಿ, ಕಪ್ಪೆಗಳಂತಹ ಪ್ರಾಣಿಗಳನ್ನು ಭಕ್ಷಿಸುತ್ತದೆ.
ಸಂತಾನಭಿವೃದ್ಧಿಗಾಗಿ ಎತ್ತರವಾದ ಹಳೆಯ ಮರದ ಪೊಠರೆಗಳನ್ನು ಗೂಡುಗಳನ್ನಾಗಿ ಬಳಸಿಕೊಳ್ಳುತ್ತದೆ.ಈ ಸಮಯದಲ್ಲಿ ಹೆಣ್ಣು ಹಕ್ಕಿ ತನ್ನನ್ನು ತಾನು ಪೊಠರೆಯೊಳಗೆ ಬಂಧಿಸಿ ಕೊಂಡು, ಆಹಾರಕ್ಕಾಗಿ ಮಾತ್ರ ಸಣ್ಣ ರಂಧ್ರವನ್ನು ಬಿಟ್ಟು ಉಳಿದ ಭಾಗವನ್ನು ಮಣ್ಣು ಹಾಗೂ ಎಂಜಲನ್ನು ಉಪಯೋಗಿಸಿ ಪೊಠರೆಯನ್ನು ಮುಚ್ಚುತ್ತದೆ. ಗಂಡು ಹಕ್ಕಿಯು ಈ ರಂಧ್ರದ ಮೂಲಕ ಆಹಾರವನ್ನು ತಾಯಿ ಹಾಗೂ ಮರಿಗಳಿಗೆ ತಲುಪಿಸುವ ಜವಾಬ್ದಾರಿಯನ್ನು ನಿರ್ವಹಿಸುತ್ತದೆ. 30ರಿಂದ 40 ದಿನಗಳ ನಂತರ ಮರಿಗಳು ಹೊರ ಬರುತ್ತದೆ. ಗಂಡು ಹಕ್ಕಿ ಆಹಾರವನ್ನು ಅರಸುತ್ತಾ ತುಂಬಾ ದೂರದವರೆಗೂ ನಿರಂತರವಾಗಿ ಪ್ರಯಾಣಿಸುತ್ತದೆ. ಈ ಸಂತಾನಭಿವೃದ್ಧಿಯ ಕಾಲದಲ್ಲಿ ಗಂಡು ಹಕ್ಕಿಗೆ ಪ್ರಾಣಾಪಾಯವಾದಲ್ಲಿ ಇಡೀ ಸಂಸಾರವೇ ನಾಶವಾಗುವ ಸಂದರ್ಭವೂ ಹೆಚ್ಚು.
ಅರಣ್ಯಗಳ ನಾಶದಿಂದಾಗಿ ಮಂಗಟ್ಟೆ ಪಕ್ಷಿಗಳ ಸಂಖ್ಯೆಯು ಕ್ಷೀಣವಾಗುತ್ತಾ ಇರುವದರಿಂದ, ಇವುಗಳನ್ನು ಅಪಾಯದ ಅಂಚಿನಲ್ಲಿರುವ ಪಕ್ಷಿಗಳ ಕೆಂಪು ಪಟ್ಟಿಗೆ ಸೇರಿಸಲಾಗಿದೆ. ಮಂಗಟ್ಟೆ ಪಕ್ಷಿಯು ಅತಿ ಹೆಚ್ಚು (35 ವರ್ಷಗಳೂ)ಬದುಕುವ ಪಕ್ಷಿಯಾಗಿದೆ.












