ಇತ್ತೀಚಿನ ಸುದ್ದಿ
ಹೊಳಲ್ಕೆರೆ ಬಳಿ ಲಾರಿ-ಕಾರು ನಡುವೆ ಭೀಕರ ಅಪಘಾತ: ಚಿತ್ರದುರ್ಗದ ದಂಪತಿ ಸ್ಥಳದಲ್ಲೇ ಸಾವು
13/07/2026, 15:41
ಮುರುಡೇಗೌಡ ಚಳ್ಳಕೆರೆ ಚಿತ್ರದುರ್ಗ
info.reporterkarnataka@gmail.com
ಹೊಳಲ್ಕೆರೆ ಸಮೀಪ ಲಾರಿ ಮತ್ತು ಕಾರಿನ ನಡುವೆ
ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಚಿತ್ರದುರ್ಗದ ದಂಪತಿ ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ.
ಹೊಳಲ್ಕೆರೆ ಪಟ್ಟಣದ ಹೊರವಲಯದ ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಹನುಮಂತ ದೇವರ ಕಣಿವೆ ಬಳಿ ಲಾರಿ ಮತ್ತು ಕಾರು ಮುಖಾಮುಖಿ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಕಾರಿನಲ್ಲಿದ್ದ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಚಿತ್ರದುರ್ಗದ ಮಾರುತಿ ಗ್ಯಾಸ್ ಏಜೆನ್ಸಿ ಮಾಲೀಕರಾದ ಲೋಹಿತ್ ಪ್ರಸಾದ್ ಹಾಗೂ ಅವರ ಪತ್ನಿ ನಿತ್ಯಶ್ರೀ ಮೃತಪಟ್ಟ ದುರ್ದೈವಿಗಳಾಗಿದ್ದಾರೆ.
*ಶಿವಮೊಗ್ಗದಿಂದ ಮರಳುವಾಗ ಜವರಾಯನ ಅಟ್ಟಹಾಸ*
ದಂಪತಿ ಶಿವಮೊಗ್ಗದಿಂದ ಚಿತ್ರದುರ್ಗಕ್ಕೆ ತಮ್ಮ ಕಾರಿನಲ್ಲಿ ವಾಪಸ್ ಆಗುತ್ತಿದ್ದ ಸಂದರ್ಭದಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ. ಹನುಮಂತ ದೇವರ ಕಣಿವೆಯ ಬಳಿ ಕಾರು ಮತ್ತು ಲಾರಿ ನಡುವೆ ಬಲವಾದ ಡಿಕ್ಕಿಯಾಗಿದ್ದು, ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಹೊಳಲ್ಕೆರೆ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ಧಾವಿಸಿದ್ದಾರೆ. ನಜ್ಜುಗುಜ್ಜಾಗಿದ್ದ ಕಾರಿನೊಳಗೆ ಸಿಲುಕಿಕೊಂಡಿದ್ದ ದಂಪತಿಯ ಮೃತದೇಹಗಳನ್ನು ಪೊಲೀಸರು ತೀವ್ರ ಶ್ರಮವಹಿಸಿ ಹೊರತೆಗೆದಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.













