ಇತ್ತೀಚಿನ ಸುದ್ದಿ
ಕ್ಯಾಬ್ ಬುಕ್ ಮಾಡಿ ಯುವತಿ ಜತೆ ಹೊರಟ ಯುವಕ ಪೆಟ್ರೋಲ್ ಬಾಂಬ್ ಸ್ಫೋಟಿಸಿಕೊಂಡು ಸಾವು: ಮಾರ್ಗ ಮಧ್ಯೆ ನಡೆಯಿತು ಹೈಡ್ರಾಮ!
27/06/2026, 21:23
ತುಮಕೂರು(reporterkarnataka.com): ಸಿನಿಮಾ ಕ್ರೈಂ-ಥ್ರಿಲ್ಲರ್ ಸ್ಟೋರಿಗಳನ್ನೇ ಮೀರಿಸುವಂತೆ ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಅತ್ಯಂತ ಭೀಕರ ಘಟನೆಯೊಂದು ನಡೆದಿದೆ. ಯುವತಿಯನ್ನು ಕಿಡ್ನ್ಯಾಪ್ ಮಾಡಿಕೊಂಡು ಬಂದಿದ್ದ ಯುವಕನೊಬ್ಬ, ಆಕೆಯ ಜೊತೆ ಜಗಳ ಮಾಡಿಕೊಂಡ ಬೆನ್ನಲ್ಲೇ ಕಾರಿನೊಳಗೆ ಪೆಟ್ರೋಲ್ ಬಾಂಬ್ನಿಂದ ಸ್ಫೋಟಿಸಿಕೊಂಡ ಭಯಾನಕ ಘಟನೆ ವರದಿಯಾಗಿದೆ. ಚಲಿಸುತ್ತಿದ್ದ ಕಾರಿನೊಳಗೆ ಯುವತಿ ಜೊತೆ ಗಲಾಟೆ ಮಾಡಿಕೊಂಡ ಪಾಗಲ್ ಪ್ರೇಮಿ, ಜಟಾಪಟಿಯಿಂದ ಕೆರಳಿ, ಆಕೆಗೆ ಚಾಕುವಿನಿಂದ ಇರಿದಿದ್ದಾನೆ. ತಕ್ಷಣವೇ ಕಾರಿನಿಂದ ಹೊರಗಿಳಿದ ರಮ್ಯಾ, ಅಲ್ಲಿಂದ ಓಡಿ ಹೋಗಿದ್ದಾಳೆ. ಬಳಿಕ ಕಾರಿನೊಳಗೆ ಇದ್ದ ನಾಗೇಂದ್ರ, ಪೆಟ್ರೋಲ್ ಬಾಂಬ್ ಸ್ಫೋಟಿಸಿಕೊಂಡು ಸಜೀವ ದಹನವಾಗಿದ್ದಾನೆ. ಈ ಘಟನೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಜೋಗಿಹಳ್ಳಿ ಬಳಿ ನಡೆದಿದ್ದಾಗಿ ವರದಿಗಳು ಉಲ್ಲೇಖಿಸಿವೆ.
ಮೃತನನ್ನು ನಾಗೇಂದ್ರ (30) ಎಂದು ಗುರುತಿಸಲಾಗಿದ್ದು, ಯುವತಿಯನ್ನು ರಮ್ಯಾ ಉಲ್ಲಾಸ್ (23) ಎಂದು ಹೇಳಲಾಗಿದೆ. ಘಟನೆಯಲ್ಲಿ ರಮ್ಯಾಳಿಗೆ ತೀವ್ರ ಗಾಯಗಳಾಗಿದ್ದು, ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಕಾರಿನಲ್ಲಿ ನಾಗೇಂದ್ರ ಮತ್ತು ರಮ್ಯಾ ಹಿಂಬದಿ ಸೀಟಿನಲ್ಲಿ ಕುಳಿತಿದ್ದರೆ, ಕ್ಯಾಬ್ ಚಾಲಕ ಕಾರನ್ನು ಚಲಾಯಿಸುತ್ತಿದ್ದರು ಎಂದು ಹೇಳಲಾಗಿದೆ.
ಬೆಂಗಳೂರಿನಿಂದ ಅಂಕೋಲಾಕ್ಕೆ ಪ್ರಯಾಣ
ಮಾಹಿತಿಗಳ ಪ್ರಕಾರ, ಬೆಂಗಳೂರಿನ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದ ರಮ್ಯಾ ಉಲ್ಲಾಸ್, ಪ್ರೇಮಿ ನಾಗೇಂದ್ರ ಜೊತೆಗೆ ಬೆಂಗಳೂರಿನಿಂದ ಅಂಕೋಲಾಕ್ಕೆ ಖಾಸಗಿ ಕಾರಿನಲ್ಲಿ ಹೊರಟ್ಟಿದ್ದರು. ಮಾರ್ಗ ಮಧ್ಯೆ, ತುಮಕೂರು ಸಮೀಪಿಸುತ್ತಿದ್ದಂತೆ ನಾಗೇಂದ್ರ ಹಾಗೂ ರಮ್ಯಾ ನಡುವೆ ಯಾವುದೋ ವೈಯಕ್ತಿಕ ವಿಚಾರಕ್ಕೆ ವಾಗ್ವಾದ ನಡೆದಿದೆ ಎಂದು ಹೇಳಲಾಗಿದೆ.
ಮಾತಿನ ಚಕಮಕಿ ತಾರಕಕ್ಕೇರುತ್ತಿದ್ದಂತೆ ಪ್ರೇಯಸಿಗೆ ಚಾಕುವಿನಿಂದ ಇರಿದ ನಾಗೇಂದ್ರ, ರಮ್ಯಾಳನ್ನು ಕೊಲೆಗೈಯಲು ಮೊದಲೇ ಮಾಸ್ಟರ್ಪ್ಲ್ಯಾನ್ ಮಾಡಿಕೊಂಡಿರುವುದು ಸ್ಪಷ್ಟವಾಗಿದೆ. ಚಾಕುವಿನಿಂದ ಇರಿಯುತ್ತಿದ್ದಂತೆ ರಮ್ಯಾ, ಕಾರಿನಿಂದ ಇಳಿದು ತಪ್ಪಿಸಿಕೊಂಡಿದ್ದಾರೆ. ಆಕೆಯ ಹಿಂದೆಯೇ ಕಾರು ಚಾಲಕ ಕೂಡ ಓಡಿ ಹೋಗಿದ್ದಾರೆ. ತಕ್ಷಣವೇ ಡೋರ್ ಲಾಕ್ ಮಾಡಿಕೊಂಡ ನಾಗೇಂದ್ರ, ತಾನು ತಂದಿದ್ದ ಪೆಟ್ರೋಲ್ ಬಾಂಬ್ ಸ್ಫೋಟಿಸಿಕೊಂಡು ಕಾರಿನಲ್ಲೇ ಸುಟ್ಟು ಭಸ್ಮವಾಗಿದ್ದಾನೆ.
ಈ ಭೀಕರ ಘಟನೆ ಕಳ್ಳಂಬೆಳ್ಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಸುಟ್ಟು ಕರಕಲಾದ ಕಾರನ್ನು ವಶಕ್ಕೆ ಪಡೆದಿದ್ದಾರೆ. ನಾಗೇಂದ್ರ ಮತ್ತು ರಮ್ಯಾ ನಡುವಿನ ಸಂಬಂಧವೇನು? ಅಷ್ಟಕ್ಕೂ ಈ ಜಗಳಕ್ಕೆ ಕಾರಣವೇನು? ಎಂಬ ಹಲವು ಆಯಾಮಗಳಲ್ಲಿ ಖಾಕಿ ಪಡೆ ತನಿಖೆಯನ್ನು ಚುರುಕುಗೊಳಿಸಿದೆ.












