ಇತ್ತೀಚಿನ ಸುದ್ದಿ
ಸಿಇಟಿ ಫಲಿತಾಂಶ ಪ್ರಕಟ: ತನಿಷಾ ಕಾರ್ತಿಕ್‌ಗೆ ಇಂಜಿನಿಯರಿಂಗ್‌ನಲ್ಲಿ ಪ್ರಥಮ ರ‍್ಯಾಂಕ್
06/06/2026, 14:40
ಬೆಂಗಳೂರು(reporterkarnataka.com): ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ಕಾತರದಿಂದ ನಿರೀಕ್ಷಿಸಿದ್ದ ಸಿಇಟಿ-2026 (KCET) ಫಲಿತಾಂಶವನ್ನು ಇಂದು ಮಧ್ಯಾಹ್ನ 12 ಗಂಟೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಕಚೇರಿಯಲ್ಲಿ ಉನ್ನತ ಶಿಕ್ಷಣ ಸಚಿವ ಶರಣ್ ಪ್ರಕಾಶ್ ಪಾಟೀಲ್ ಪ್ರಕಟಿಸಿದ್ದಾರೆ. ಮಧ್ಯಾಹ್ನ 2 ಗಂಟೆಯ ನಂತರ ವಿದ್ಯಾರ್ಥಿಗಳಿಗೆ ಆನ್‌ಲೈನ್‌ನಲ್ಲಿ ಫಲಿತಾಂಶ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ.
ಈ ಬಾರಿ ರಾಜ್ಯಾದ್ಯಂತ ಏಪ್ರಿಲ್ 22ರಿಂದ ಮೂರು ದಿನಗಳ ಕಾಲ ನಡೆದ ಸಿಇಟಿ ಪರೀಕ್ಷೆಯಲ್ಲಿ ಒಟ್ಟು 3,09,014 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪರೀಕ್ಷೆಯನ್ನು ರಾಜ್ಯದ 745 ಕೇಂದ್ರಗಳಲ್ಲಿ ನಡೆಸಲಾಗಿದ್ದು, ಪಾರದರ್ಶಕತೆಗಾಗಿ 15,265 ಸಿಸಿಟಿವಿ ಕ್ಯಾಮೆರಾಗಳು, ವೆಬ್‌ಕಾಸ್ಟಿಂಗ್ ಹಾಗೂ ಫೇಸ್ ರೆಕಗ್ನಿಷನ್ ವ್ಯವಸ್ಥೆ ಅಳವಡಿಸಲಾಗಿತ್ತು.
*ಇಂಜಿನಿಯರಿಂಗ್ ವಿಭಾಗದ ಟಾಪರ್ಸ್:*
ಇಂಜಿನಿಯರಿಂಗ್ ವಿಭಾಗದಲ್ಲಿ ತನಿಷಾ ಪ್ರಥಮ ರ್ಯಾಂಕ್ ಪಡೆದು ರಾಜ್ಯಕ್ಕೆ ಅಗ್ರಸ್ಥಾನ ಪಡೆದಿದ್ದಾರೆ. ಜಯನಗರದ ಆರ್‌ವಿ ಪಿಯು ಕಾಲೇಜಿನ ವಿದ್ಯಾರ್ಥಿನಿಯಾಗಿರುವ ತನಿಷಾ ಅವರ ಸಾಧನೆ ಗಮನ ಸೆಳೆದಿದೆ.
1ನೇ ರ್ಯಾಂಕ್ – ತನಿಷಾ ಕಾರ್ತಿಕ್.
2ನೇ ರ್ಯಾಂಕ್ – ಸೃಜನ್ (ಸರ್ ಎಂ.ವಿ. ಪಿಯು ಕಾಲೇಜು, ಬೆಳ್ತಂಗಡಿ)
3ನೇ ರ್ಯಾಂಕ್ – ನಿನಾದ್ ವಸಿಷ್ಟ. (ಆರ್‌ವಿ ಪಿಯು ಕಾಲೇಜು, ಜಯನಗರ).
ಇತರೆ ವಿಭಾಗಗಳ ಅಗ್ರಸ್ಥಾನಿಗಳು
ವೆಟರ್ನರಿ, ಬಿಎಸ್ಸಿ ನರ್ಸಿಂಗ್, ಯೋಗ ಮತ್ತು ನ್ಯಾಚುರೋಪತಿ, ಬಿ-ಫಾರ್ಮಾ ಹಾಗೂ ಡಿ-ಫಾರ್ಮಾ ವಿಭಾಗಗಳಲ್ಲಿ ನಯನ ಗೋಪಿ ಪ್ರಥಮ ಸ್ಥಾನ ಪಡೆದಿದ್ದಾರೆ. ಅಮೂಲ್ಯ ದ್ವಿತೀಯ ಸ್ಥಾನ ಪಡೆದರೆ, ವಿವಿಧ ವಿಭಾಗಗಳಲ್ಲಿ ರಿತ್ವಿಕ್ ಕುಮಾರ್ ಹಾಗೂ ಸುಚಿತ್ರ ಮೂರನೇ ಸ್ಥಾನ ಗಳಿಸಿದ್ದಾರೆ.
*ಬಿಎಸ್ಸಿ ಅಗ್ರಿಕಲ್ಚರ್ (ಫಾರ್ಮಾ) ವಿಭಾಗದಲ್ಲಿ:*
1ನೇ ರ್ಯಾಂಕ್ – ನಿನಾದ್ ವಸಿಷ್ಟ್
2ನೇ ರ್ಯಾಂಕ್ – ಅನ್ಮೋಲ್ ಪ್ರಭು.
3ನೇ ರ್ಯಾಂಕ್ – ಸಮಯ್ಯ.
2.92 ಲಕ್ಷ ವಿದ್ಯಾರ್ಥಿಗಳಿಗೆ ಅರ್ಹತೆ
ಫಲಿತಾಂಶ ಪ್ರಕಟಿಸಿ ಮಾತನಾಡಿದ ಸಚಿವ ಶರಣಪ್ರಕಾಶ್ ಪಾಟೀಲ್, 2,92,782 ವಿದ್ಯಾರ್ಥಿಗಳು ಅರ್ಹತೆ ಪಡೆದಿದ್ದಾರೆ ಎಂದು ತಿಳಿಸಿದರು. ಭೌತಶಾಸ್ತ್ರ ಹಾಗೂ ರಸಾಯನಶಾಸ್ತ್ರ ವಿಷಯಗಳಲ್ಲಿ ತಲಾ ಒಂದು ಪ್ರಶ್ನೆಗೆ ಕೃಪಾಂಕ ನೀಡಲಾಗಿದೆ ಎಂದರು.
*ವಿವಾದಗಳ ನಡುವೆಯೂ ಫಲಿತಾಂಶ:*
ಈ ಬಾರಿಯ ಸಿಇಟಿ ಪರೀಕ್ಷೆ ವೇಳೆ ಕೆಲವು ಕೇಂದ್ರಗಳಲ್ಲಿ ವಿದ್ಯಾರ್ಥಿಗಳ ಜನಿವಾರ ತೆಗೆಯಿಸಿದ ಘಟನೆ ರಾಜ್ಯಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿತ್ತು. ಈ ಪ್ರಕರಣ ರಾಜಕೀಯ ಆರೋಪ-ಪ್ರತ್ಯಾರೋಪಕ್ಕೂ ಕಾರಣವಾಗಿದ್ದು, KEA ನಿರ್ದೇಶನದ ಮೇರೆಗೆ ಮೂವರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿತ್ತು.
ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದ ಕೆಲ ವಿದ್ಯಾರ್ಥಿಗಳಿಗೆ ಮರುಪರೀಕ್ಷೆಯನ್ನೂ ನಡೆಸಲಾಗಿತ್ತು. ಮೇ ತಿಂಗಳ ಕೊನೆಯ ವಾರದಲ್ಲೇ ಫಲಿತಾಂಶ ಪ್ರಕಟವಾಗಬೇಕಿದ್ದರೂ, ಆಡಳಿತಾತ್ಮಕ ಬೆಳವಣಿಗೆಗಳು ಹಾಗೂ ಸರ್ಕಾರದ ಮಟ್ಟದ ಬದಲಾವಣೆಗಳ ಹಿನ್ನೆಲೆಯಲ್ಲಿ ಫಲಿತಾಂಶ ಪ್ರಕಟಣೆ ವಿಳಂಬವಾಗಿತ್ತು. ಪಾರದರ್ಶಕ ಪರೀಕ್ಷಾ ವ್ಯವಸ್ಥೆ, ತಂತ್ರಜ್ಞಾನ ಬಳಕೆ ಹಾಗೂ ವಿವಾದಗಳ ನಡುವೆಯೂ ಸಿಇಟಿ-2026 ಫಲಿತಾಂಶ ಪ್ರಕಟವಾಗಿದ್ದು, ಈಗ ವಿದ್ಯಾರ್ಥಿಗಳ ಗಮನ ಕೌನ್ಸೆಲಿಂಗ್ ಹಾಗೂ ಸೀಟು ಹಂಚಿಕೆ ಪ್ರಕ್ರಿಯೆಯತ್ತ ನೆಟ್ಟಿದೆ.












