ಇತ್ತೀಚಿನ ಸುದ್ದಿ
Koppala | ಕುಷ್ಟಗಿಯಲ್ಲಿ ಗುಡುಗು ಸಹಿತ ಮಳೆ: ಸಿಡಿಲು ಬಡಿದು ವ್ಯಕ್ತಿ ಬಲಿ
27/04/2026, 22:23
ಕೊಪ್ಪಳ(reporterkarnataka.com): ಪ್ರಕೃತಿಯ ಮುನಿಸಿಗೆ ಅನ್ನದಾತನೊಬ್ಬ ಬಲಿಯಾದ ಘಟನೆ ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಬೆಂಚಮಟ್ಟಿ ಗ್ರಾಮದಲ್ಲಿ ಸಂಭವಿಸಿದೆ. ದಿಢೀರ್ ಕಾಣಿಸಿಕೊಂಡ ಗುಡುಗು ಸಹಿತ ಮಳೆಗೆ ಸಿಡಿಲು ಬಡಿದು ರೈತ ದೇವರಾಯನಗೌಡ ಪೊಲೀಸ್ ಪಾಟೀಲ (50) ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
*ಘಟನೆಯ ವಿವರ:*
ಸೋಮವಾರ ಮಧ್ಯಾಹ್ನ ತಾಲೂಕಿನಾದ್ಯಂತ ಮೋಡ ಕವಿದ ವಾತಾವರಣವಿತ್ತು. ಬೆಂಚಮಟ್ಟಿ ಗ್ರಾಮದ ರೈತ ದೇವರಾಯನಗೌಡ ಅವರು ಎಂದಿನಂತೆ ತಮ್ಮ ದೈನಂದಿನ ಕೃಷಿ ಚಟುವಟಿಕೆಗಳಿಗಾಗಿ ಹೊಲಕ್ಕೆ ತೆರಳಿದ್ದರು. ಸಂಜೆ ವೇಳೆಗೆ ಇದ್ದಕ್ಕಿದ್ದಂತೆ ಗುಡುಗು ಮತ್ತು ಮಿಂಚಿನೊಂದಿಗೆ ಮಳೆ ಸುರಿಯಲಾರಂಭಿಸಿತು.
*ಮರದ ಕೆಳಗೆ ಆಶ್ರಯ*
ಮಳೆಯಿಂದ ರಕ್ಷಣೆ ಪಡೆಯಲು ದೇವರಾಯನಗೌಡ ಅವರು ಸಮೀಪದಲ್ಲಿದ್ದ ಮರದ ಕೆಳಗೆ ಆಶ್ರಯ ಪಡೆದಿದ್ದರು. ಈ ಸಂದರ್ಭದಲ್ಲಿ ಭೀಕರ ಶಬ್ದದೊಂದಿಗೆ ಸಿಡಿಲು ಮರದ ಮೇಲೆ ಅಪ್ಪಳಿಸಿದೆ. ಮರದ ಕೆಳಗೆ ಕುಳಿತಿದ್ದ ದೇವರಾಯನಗೌಡ ಅವರ ಮೇಲೆ ನೇರವಾಗಿ ಸಿಡಿಲು ಬಡಿದ ಪರಿಣಾಮ, ಅವರು ತೀವ್ರವಾಗಿ ಸುಟ್ಟುಹೋಗಿ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ ಎನ್ನಲಾಗಿದೆ.
*ಪೊಲೀಸ್ ಭೇಟಿ*
ವಿಷಯ ತಿಳಿಯುತ್ತಿದ್ದಂತೆ ಕುಷ್ಟಗಿ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಈ ಕುರಿತು ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
*ಎಚ್ಚರಿಕೆ ಇರಲಿ:*
ಮಳೆಗಾಲ ಆರಂಭದ ಈ ಸಮಯದಲ್ಲಿ ಗುಡುಗು, ಮಿಂಚು ಹೆಚ್ಚಾಗಿರುತ್ತದೆ. ರೈತರು ಮತ್ತು ಸಾರ್ವಜನಿಕರು ಗುಡುಗು ಸಹಿತ ಮಳೆ ಬರುವಾಗ ಮರದ ಕೆಳಗೆ ಅಥವಾ ಬಯಲು ಪ್ರದೇಶದಲ್ಲಿ ಇರಬಾರದು. ಎಲೆಕ್ಟ್ರಿಕ್ ಕಂಬಗಳು ಮತ್ತು ನೀರಿನ ಸೆಲೆ ಇರುವ ಜಾಗದಿಂದ ದೂರವಿರಬೇಕು ಎಂದು ಈ ಮೂಲಕ ಮತ್ತೊಮ್ಮೆ ಎಚ್ಚರಿಸಲಾಗಿದೆ.
*ಮುನ್ಸೂಚನೆ ಗಮನಿಸಿ:*
ಜಿಲ್ಲಾಡಳಿತ ಹಾಗೂ ಹವಾಮಾನ ಇಲಾಖೆ ನೀಡುವ ಮುನ್ಸೂಚನೆ ಗಮನಿಸಿ. ನೀಡಿದಂತ ಸೂಚನೆಗಳನ್ನು ಪಾಲಿಸಿ, ಅಲ್ಲದೇ, ಆರೆಂಜ್ ಅಲರ್ಟ್ ಸೇರಿ ವಿವಿಧ ಸಂಧರ್ಭ ರೈತರು, ಗ್ರಾಮಸ್ಥರು ಜಾಗೃತಿ ವಹಿಸುವುದು ಮುಖ್ಯವಾಗಿದೆ.












