ಇತ್ತೀಚಿನ ಸುದ್ದಿ
ಮಹಿಳಾ ಮೀಸಲಾತಿ ಮಸೂದೆಗೆ ಸೋಲು: ದೇಶದ ತಾಯಂದಿರಲ್ಲಿ ಕ್ಷಮೆಯಾಚಿಸಿದ ಪ್ರಧಾನಿ ಮೋದಿ
18/04/2026, 22:27
ನವದೆಹಲಿ(reporterkarnataka.com): ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ದೇಶದ ಮಹಿಳೆಯ ಕ್ಷಮೆಯಾಚಿಸಿದ್ದಾರೆ.
ಇದೇ ವೇಳೆ ಮಸೂದೆಯ ವಿಫಲತೆಗೆ ವಿರೋಧ ಪಕ್ಷಗಳ ‘ಸ್ವಾರ್ಥ ರಾಜಕಾರಣ’ವೇ ಕಾರಣ ಎಂದು ಅವರು ಕಿಡಿಕಾರಿದ್ದಾರೆ.
*ತಾಯಂದಿರು, ಸಹೋದರಿಯರೇ ನನ್ನನ್ನು ಕ್ಷಮಿಸಿ:*
ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, “ನಾನು ಇಂದು ನಮ್ಮ ರಾಷ್ಟ್ರದ ತಾಯಂದಿರು, ಸಹೋದರಿಯರು ಮತ್ತು ಪುತ್ರಿಯರೊಂದಿಗೆ ಮಾತನಾಡಲು ಬಂದಿದ್ದೇನೆ. ಮಹಿಳಾ ಮೀಸಲಾತಿ ಮಸೂದೆಯನ್ನು ಸಂಸತ್ತಿನಲ್ಲಿ ಅಂಗೀಕರಿಸುವಲ್ಲಿ ನಾವು ಯಶಸ್ವಿಯಾಗಲಿಲ್ಲ. ಈ ಹಿನ್ನೆಲೆಯಲ್ಲಿ ನಾನು ದೇಶದ ಮಹಿಳೆಯರಲ್ಲಿ ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ,” ಎಂದು ಭಾವುಕರಾಗಿ ನುಡಿದರು.
*ವಿಪಕ್ಷಗಳ ವಿರುದ್ಧ ಕೆಂಡಾಮಂಡಲ:*
ಮಸೂದೆಯ ಸೋಲಿಗೆ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ (TMC), ಡಿಎಂಕೆ (DMK) ಮತ್ತು ಸಮಾಜವಾದಿ ಪಕ್ಷಗಳನ್ನು (SP) ನೇರವಾಗಿ ಹೊಣೆಗಾರರನ್ನಾಗಿ ಮಾಡಿದ ಪ್ರಧಾನಿ ಮೋದಿ, ವಿಪಕ್ಷಗಳು ಸಾರ್ವಜನಿಕ ಹಿತಾಸಕ್ತಿಗಿಂತ ರಾಜಕೀಯಕ್ಕೇ ಹೆಚ್ಚಿನ ಆದ್ಯತೆ ನೀಡುತ್ತಿವೆ ಎಂದು ಆರೋಪಿಸಿದರು.
*ಸ್ವಾರ್ಥ ರಾಜಕಾರಣ:* “ವಿರೋಧ ಪಕ್ಷಗಳ ಸಂಕುಚಿತ ಮತ್ತು ಸ್ವಾರ್ಥಿ ರಾಜಕಾರಣದ ಪರಿಣಾಮವನ್ನು ದೇಶದ ಮಹಿಳೆಯರು ಅನುಭವಿಸುವಂತಾಗಿದೆ,” ಎಂದು ಅವರು ಟೀಕಿಸಿದರು.
*ಅಪಹಾಸ್ಯದ ಆರೋಪ:* “ಮಸೂದೆಯು ಸೋಲನ್ನು ಅನುಭವಿಸಿದಾಗ, ವಂಶಪಾರಂಪರ್ಯ ರಾಜಕಾರಣದ ಈ ಪಕ್ಷಗಳು ಚಪ್ಪಾಳೆ ತಟ್ಟಿ ಸಂಭ್ರಮಿಸುತ್ತಿದ್ದವು. ಇದು ಮಹಿಳೆಯರ ಘನತೆ ಮತ್ತು ಹಕ್ಕುಗಳಿಗೆ ಮಾಡಿದ ಅವಮಾನ,” ಎಂದು ಪ್ರಧಾನಿ ಗುಡುಗಿದರು.
*ಮಹಿಳೆಯರು ಅವಮಾನವನ್ನು ಮರೆಯುವುದಿಲ್ಲ*
ಮಹಿಳೆಯರ ಆತ್ಮಗೌರವಕ್ಕೆ ಧಕ್ಕೆ ತಂದಿರುವ ವಿರೋಧ ಪಕ್ಷಗಳಿಗೆ ದೇಶದ ಮಹಿಳೆಯರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಪ್ರಧಾನಿ ಎಚ್ಚರಿಸಿದರು. “ವಿರೋಧ ಪಕ್ಷಗಳು ಮಹಿಳೆಯರನ್ನು ಅವಮಾನಿಸಿವೆ. ಈ ದೇಶದ ಹೆಣ್ಣುಮಕ್ಕಳು ಇದನ್ನು ಎಂದಿಗೂ ಮರೆಯುವುದಿಲ್ಲ. ಮಹಿಳೆಯರು ಅನೇಕ ವಿಷಯಗಳನ್ನು ಮರೆಯಬಹುದು, ಆದರೆ ತಮಗೆ ಉಂಟಾದ ಅವಮಾನವನ್ನು ಅವರು ಎಂದಿಗೂ ಮರೆಯುವುದಿಲ್ಲ,” ಎಂದು ಮೋದಿ ಹೇಳಿದರು.












