ಇತ್ತೀಚಿನ ಸುದ್ದಿ
Mangaluru | ಕೋಮು ಪ್ರಚೋದನಕಾರಿ ಪೋಸ್ಟ್: ಆರೋಪಿ ಕಾಪು ನಿವಾಸಿಯ ಬಂಧನ
25/03/2026, 20:46
ಮಂಗಳೂರು(reporterkarnataka.com): ಸಾಮಾಜಿಕ ಜಾಲತಾಣದಲ್ಲಿ ಕೋಮು ಪ್ರಚೋದನೆಯ ಪೋಸ್ಟ್ ಗಳನ್ನು ಹಾಕಿದ ಆರೋಪಿಯನ್ನು ಕಂಕನಾಡಿ ನಗರ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಂಗಳೂರು ನಗರದಲ್ಲಿ 2025ನೇ ಸಾಲಿನಲ್ಲಿ ಸುಹಾಸ್ ಶೆಟ್ಟಿ ಕೊಲೆಯ ನಂತರದ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಕೋಮು ಪ್ರಚೋದನೆ ಮಾಡುವಂತಹ ಪೋಸ್ಟ್ ಗಳನ್ನು ಹಂಚಿಕೊಂಡು ಪ್ರಚಾರ ಮಾಡಿದ ಬಗ್ಗೆ ಕಂಕನಾಡಿ ನಗರ ಪೊಲೀಸ್ ಠಾಣಾ ಅ.ಕ್ರ. 179/2025 ಕಲಂ 353 (1), 353(2), 61 (2), 55 ಬಿ.ಎನ್.ಎಸ್. 2023 ರಂತೆ ಪ್ರಕರಣ ದಾಖಲಾಗಿತ್ತು. ತನಿಖೆಯ ಸಮಯದಲ್ಲಿ TN- MADDY ಎಂಬ ಖಾತೆಯಿಂದ ಕೋಮು ಪ್ರಚೋದಕ ಪೋಸ್ಟ್ ಗಳನ್ನು ಹಾಕಿದ ವ್ಯಕ್ತಿಯು ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಮೂಡುಬೆಳ್ಳೆ ಗ್ರಾಮದ
ಪವನ್ ಆಚಾರ್ಯ (22) ಎಂದು ತನಿಖೆಯಲ್ಲಿ ಕಂಡು ಬಂದಿದ್ದು, ಆರೋಪಿಯನ್ನು ಕಂಕನಾಡಿ ನಗರ ಪೊಲೀಸರು ಬುಧವಾರ ದಸ್ತಗಿರಿ ಮಾಡಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ ನೀಡಿದೆ. ಆರೋಪಿತನು ತನ್ನ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಕೋಮು ಪ್ರಚೋದನೆಯ ಪೋಸ್ಟ್ ಮಾಡಿದ ಬಗ್ಗೆ ಉಡುಪಿ ಜಿಲ್ಲೆಯ ಕಾಪು ಪೊಲೀಸ್ ಠಾಣೆಯಲ್ಲಿ ಅ.ಕ್ರ: 95/2025 ರಂತೆ ಪ್ರಕರಣ ದಾಖಲಾಗಿತ್ತು.













