ಇತ್ತೀಚಿನ ಸುದ್ದಿ
ಲಂಚ ಸ್ವೀಕಾರ: ಶಿರಹಟ್ಟಿ ಬಿಜೆಪಿ ಶಾಸಕ ಡಾ. ಚಂದ್ರು ಲಮಾಣಿ ಸಹಿತ 3 ಮಂದಿ ಲೋಕಾಯುಕ್ತ ಬಲೆಗೆ
21/02/2026, 20:38
ಗದಗ(reporterkarnataka.com): ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ಶನಿವಾರ ಗುತ್ತಿಗೆದಾರರಿಂದ 5 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದ ಆರೋಪದ ಮೇರೆಗೆ ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಮತ್ತು ಅವರ ಇಬ್ಬರು ಆಪ್ತ ಸಹಾಯಕರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಸಣ್ಣ ನೀರಾವರಿ ಯೋಜನೆಯನ್ನು ತೆರವುಗೊಳಿಸಲು ಡಾ.ಚಂದ್ರು ಲಮಾಣಿ 11 ಲಕ್ಷ ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದಾರೆ ಎನ್ನಲಾಗಿದೆ. ಗದಗ ತಾಲೂಕಿನ ಚಿಂಚಲಿ ಗ್ರಾಮದ ಕ್ಲಾಸ್ 1 ಗುತ್ತಿಗೆದಾರ ವಿಜಯ ಪೂಜಾರ್ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ಶನಿವಾರ (ಫೆ. 21), ಮಧ್ಯಾಹ್ನ 2:15 ರ ಸುಮಾರಿಗೆ, ಡಾ.ಲಮಾಣಿ ಮತ್ತು ಅವರ ಆಪ್ತ ಸಹಾಯಕರಾದ ಮಂಜುನಾಥ್ ವಾಲ್ಮೀಕಿ ಮತ್ತು ಗುರು ನಾಯ್ಕ್ ಅವರು ಲಕ್ಷ್ಮೇಶ್ವರ ಪಟ್ಟಣದ ಬಾಲಾಜಿ ಆಸ್ಪತ್ರೆಯಲ್ಲಿ 5 ಲಕ್ಷ ರೂ. ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದರು. ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದಾಗ, ಡಾ.ಲಮಾಣಿ ಅವರ ಆಪ್ತ ಸಹಾಯಕ ಗುರುನಾಯ್ಕ್ ಅವರು ಸಮೀಪದ ಖಾಸಗಿ ಶಾಲೆಯ ಕಾಂಪೌಂಡ್ಗೆ 50,000 ಇದ್ದ ಕವರ್ ಅನ್ನು ಎಸೆದಿದ್ದಾರೆ ಎಂದು ವರದಿಯಾಗಿದೆ. ನಗದು ಒಳಗೊಂಡ ಕವರ್ ಜತೆಗೆ ₹4.50 ಲಕ್ಷ ನಗದು ಹಣವನ್ನು ಲೋಕಾಯುಕ್ತ ಪೊಲೀಸರು ಆಸ್ಪತ್ರೆಯಿಂದ ವಶಪಡಿಸಿಕೊಂಡಿದ್ದಾರೆ.
ಗದಗ ಲೋಕಾಯುಕ್ತ ಎಸ್ಪಿ ಸಿದ್ದಲಿಂಗಪ್ಪ ಅವರ ಮಾರ್ಗದರ್ಶನದಲ್ಲಿ ಲೋಕಾಯುಕ್ತ ಪೊಲೀಸ್ ಡಿವೈಎಸ್ಪಿ ವಿಜಯ ಬಿರಾದಾರ್, ಇನ್ಸ್ ಪೆಕ್ಟರ್ ಪರಮೇಶ ಕವಟಗಿ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.
ಗದಗ ಲೋಕಾಯುಕ್ತ ಪೊಲೀಸರು ಪಿಸಿ ಕಾಯ್ದೆ 1988 ರ ಕಲಂ 7(ಎ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.












