7:53 PM Saturday17 - October 2026
ಬ್ರೇಕಿಂಗ್ ನ್ಯೂಸ್
ಚಿಕ್ಕಮಗಳೂರು: ನಿಲ್ಲಿಸಿದ್ದ ಜಾಗದಲ್ಲೇ 2 ಎಲೆಕ್ಟ್ರಿಕ್ ಸ್ಕೂಟರ್ ಸುಟ್ಟು ಭಸ್ಮ ಮೈಸೂರು ದಸರಾ ಫಲಪುಷ್ಪ ಪ್ರದರ್ಶನ | ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಾಲನೆ ಬೆಂಗಳೂರು | ವಿಶ್ವ ದೃಷ್ಟಿ ದಿನದ ಅಂಗವಾಗಿ ವರ್ಲ್ಡ್ ಬ್ಲೈಂಡ್ ವಾಕ್ 2026 ಕೊಡಗು ಜಿಲ್ಲೆಯ 5 ತಾಲೂಕು ಪಂಚಾಯತ್ ವರ್ಗವಾರು ಮೀಸಲು ಪಟ್ಟಿ ಪ್ರಕಟ,: 48… ಮತದಾರರ ಹೆಸರು ತೆಗೆದುಹಾಕುವಾಗ ಅವರು ಅನುಮತಿ ಪಡೆದಿದ್ದರೇ?: ಸಿಜೆಪಿ ನಾಯಕ ಅಭಿಜೀತ್ ದಿಪ್ಕೆ ಟೈಮ್ಸ್ ಹೈಯರ್ ಎಜ್ಯುಕೇಶನ್ (THE) ವಿಶ್ವ ವಿಶ್ವವಿದ್ಯಾಲಯಗಳ ಶ್ರೇಯಾಂಕ 2027: ಗಲ್ಫ್ ಮೆಡಿಕಲ್… ಐತಿಹಾಸಿಕ ಮಂಗಳೂರು ದಸರಾ ಮಹೋತ್ಸವ 11ರಿಂದ ಆರಂಭ: 12ರಂದು ಮುಖ್ಯಮಂತ್ರಿ ಡಿ. ಕೆ.… ಫಾಸ್ಟ್‌ಟ್ಯಾಗ್‌ ಯುಗ ಅಂತ್ಯ?: ಮಲ್ಟಿ-ಲೇನ್ ಫ್ರೀ-ಫ್ಲೋ (MLFF) ಟೋಲಿಂಗ್ ವ್ಯವಸ್ಥೆ ಜಾರಿಗೆ ಸರಕಾರ… ಉಸ್ತುವಾರಿ ಸಚಿವ ಖಾದರ್ ಮಧ್ಯಸ್ಥಿಕೆ: ಎಂಆರ್‌ಪಿಎಲ್ ಅವಘಡದಲ್ಲಿ ಮೃತಪಟ್ಟ ನೌಕರನ ಕುಟುಂಬಕ್ಕೆ 1.20… ಬೆಂಗಳೂರು | ಅಕ್ಟೋಬರ್ 2ರಂದು ಪ್ರಾಜೆಕ್ಟ್ ಶೆಲ್ಟರ್‌ನಿಂದ ‘ಅಸಹಾಯಕರಿಗೆ ಸೂರು’ ಅಭಿಯಾನಕ್ಕೆ 3…

ಇತ್ತೀಚಿನ ಸುದ್ದಿ

ಯಕ್ಷಗಾನ ಕಲಾರಂಗದ 88ನೇ ಮನೆ ಹಸ್ತಾಂತರ; ಯಕ್ಷಗಾನ ಕಲಾರಂಗವೆಂಬುದು ವಿಸ್ಮಯ: ಶಾಸಕ ಗಂಟಿಹೊಳೆ

15/02/2026, 18:03

ಉಡುಪಿ(reporterkarnataka.com): ಯಕ್ಷಗಾನ ಕಲಾರಂಗ ಉಡುಪಿ ಇದರ ವಿದ್ಯಾಪೋಷಕ್‌ನಡಿ 88ನೆಯ ಮನೆಯನ್ನು ಶನಿವಾರ ಹಸ್ತಾಂತರಿಸಲಾಯಿತು.
ಎಂಎಸ್‌ಆರ್‌ಎಸ್ ಕಾಲೇಜಿನ ನಿವೃತ್ತ ಉಪನ್ಯಾಸಕಿ ಡಾ. ಶಾರದಾಎಂ. ಅವರು ತಮ್ಮ ಪತಿ ಕೃಷ್ಣಮೂರ್ತಿ ಕೆ.ಅವರ ಸ್ಮರಣೆಯಲ್ಲಿ, 7 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಿದ ನೂತನ ಮನೆ ‘ಛಂದೋಗತಿ’ಯನ್ನು ಬೈಂದೂರು ತಾಲೂಕಿನ ಜಡ್ಕಲ್ ಸೆಲ್ಕೋಡ್ ನಿವಾಸಿಗಳಾದ ಚಿಕ್ಕಮ್ಮ ಮತ್ತು ಶಂಕರ ನಾಯ್ಕ್ ಅವರ ಪುತ್ರ ಪ್ರಥಮ ಪಿಯುಸಿ ವಿದ್ಯಾರ್ಥಿ ಸ್ವಸ್ತಿಕ್ ಎಸ್. ನಾಯ್ಕ್‌ಗೆ ನಿರ್ಮಿಸಿಕೊಡಲಾಗಿದೆ. ಇದು ಶಾರದಾ ಎಂ. ಅವರ ಪ್ರಾಯೋಜಕತ್ವದ ಎರಡನೇ ಮನೆಯಾಗಿದೆ. ಸ್ವಸ್ತಿಕ್ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದು, ಎಸ್‌ಎಸ್‌ಎಲ್‌ಸಿಯಲ್ಲಿ ಶೇ.97 ಅಂಕ ಪಡೆದಿದ್ದು, ವಿದ್ಯಾಪೋಷಕ್ ಅಡಿಯಲ್ಲಿ ಈತನನ್ನು ಆಯ್ಕೆ ಮಾಡಲಾಗಿತ್ತು.
ಅತ್ಯಂತ ಸರಳವಾಗಿ ಈ ಕಾರ್ಯಕ್ರಮ ನಡೆಯಿತು.
ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ದಾನಿ ಶಾರದಾ ಎಂ. ಅವರು, ನನ್ನ ಪತಿ ಕೃಷ್ಣಮೂರ್ತಿಯವರ ಹಲವು ಆಸಕ್ತಿಗಳಲ್ಲಿ ಛಂದಸ್ಸಿನ ಕುರಿತ ಆಳವಾದ ಅಧ್ಯಯನವೂ ಒಂದು. ಅವರಿಗೆ ‘ಛಂದೋಗತಿ’ ಎಂಬ ಪುಸ್ತಕವನ್ನು ಬರೆಯಬೇಕೆಂಬ ಕನಸಿತ್ತು. ಅದು ಈಡೇರಿರಲಿಲ್ಲ. ಹಾಗಾಗಿ ಅವರ ಸ್ಮೃತಿಯಲ್ಲಿ ನೀಡಿದ ಈ ಮನೆಗೆ ಅದೇ ಹೆಸರಿಟ್ಟಿದ್ದೇನೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಮಾತನಾಡಿ, ಯಕ್ಷಗಾನ ಕಲಾರಂಗ ನನಗೊಂದು ವಿಸ್ಮಯವೇ ಆಗಿದೆ. ಅವರ ಸಾಮಾಜಿಕ-ಶೈಕ್ಷಣಿಕ-ಕಲಾ ಸಂಬಂಧಿ ಕಾರ್ಯಕ್ರಮಗಳ ವಿಶ್ವರೂಪ ಅನ್ಯ ಸಂಘಟನೆಗಳಿಂದ ಅಸಾಧ್ಯ. ಅವರ ಕ್ಲಪ್ತತೆ, ಪರಿಶ್ರಮ, ಪಾರದರ್ಶಕತೆ, ಬದ್ಧತೆ, ಅಚ್ಚುಕಟ್ಟುತನಕ್ಕೆ ಶರಣಾಗಿದ್ದೇನೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕರ್ನಾಟಕದ ರಾಜ್ಯ ಸಂಘಟನಾ ಕಾರ್ಯದರ್ಶಿ ನಾರಾಯಣ ಶೇವಿರೆಯವರು ಮಾತನಾಡಿ, ಆಹಾರ, ಔಷಧ, ಶಿಕ್ಷಣ ವಿಕ್ರಯ ಮಾಡಬಾರದೆಂದು ನಮ್ಮ ಮೂಲ ಸಂಸ್ಕೃತಿಯಲ್ಲಿದೆ. ಈ ಮೂರೂ ವಿಧದ ದಾನಗಳು ಈ ಸಂಸ್ಥೆಯಿಂದ ಆಗುತ್ತಿವೆ ಎಂದರು.


ವೇದಿಕೆಯಲ್ಲಿ ಖ್ಯಾತ ವಕೀಲ ರಾಮಚಂದ್ರ ಅಡಿಗ, ಬಿ.ಹರೀಶ್ ತಂತ್ರಿ, ಶಾರದಾ ಎಂ ಅವರ ಸಹೋದರ ಕೃಷ್ಣ ಭಟ್ ಮತ್ತು ಅವರ ಪತ್ನಿ ಪರಮೇಶ್ವರೀ, ಸಹೋದರಿ ಸರೋಜ,ಸಹೋದ್ಯೋಗಿ ಸುಬ್ರಹ್ಮಣ್ಯ ಭಟ್, ಸ್ನೇಹಿತೆ ಜೆಸಿಂತಾ, ಮಧುಕರ ಪೂಜಾರಿ, ವಿಠ್ಠಲ ಪೂಜಾರಿ, ವಿಷ್ಣುಮೂರ್ತಿ ಪ್ರಭು ಉಪಸ್ಥಿತರಿದ್ದರು.
ಸಂಸ್ಥೆಯ ಸದಸ್ಯರಾದ ಯು. ವಿಶ್ವನಾಥ ಶೆಣೈ, ಭುವನಪ್ರಸಾದ ಹೆಗ್ಡೆ, ವಿಜಯ ಕುಮಾರ್ ಮುದ್ರಾಡಿ, ಅನಂತರಾಜ ಉಪಾಧ್ಯಾಯ, ಡಾ.ರಾಘವೇಂದ್ರ ರಾವ್, ಪ್ರಾಂಶುಪಾಲರಾದ ಅಮರೇಶ್ ಹೆಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್ ಸ್ವಾಗತಿಸಿ, ನಾರಾಯಣ ಎಂ. ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು